Kundapra.com ಕುಂದಾಪ್ರ ಡಾಟ್ ಕಾಂ

ರಾಜನಿಲ್ಲದ ಕುಂದೇಶ್ವರ, ವಿದ್ಯಾರ್ಥಿಗಳಿಗೆ ಬೇಸರ

ಕುಂದಾಪುರ: ಕುಂದಾಪುರದ ವಿದ್ಯಾರ್ಥಿಗಳಿಗೆ ಪ್ರೀಯನಾಗಿ ಕಳೆದ ಕೆಲವು ದಶಕಗಳಿಂದ ಕುಂದೇಶ್ವರ ಪರಿಸರದಲ್ಲೇ ತಂಗಿದ್ದ ಕುಂದೇಶ್ವರ ರಾಜ ರಿಕ್ಷಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಡೇರಹೋಬಳಿಯ ಹುಣ್ಸೆಕಟ್ಟೆ ಸೇತುವೆಯ ಬಳಿ ಆಟೋ ರಿಕ್ಷಾ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮಾನಸಿಕವಾಗಿ ಅಸ್ವಸ್ಥನಂತಿದ್ದ ಅರೆ ಮಾತಿನ ಸುಮಾರು 65 ವರ್ಷ ಪ್ರಾಯದ ಸಾಧಾರಣ ಶರೀರ ಹೊಂದಿದ ಕುಂದೇಶ್ವರ ರಾಜ, ಕೆಲವು ವರ್ಷಗಳಿಂದ ಕುಂದಾಪುರ ಪೇಟೆಯಲ್ಲಿಯೇ ವಾಸವಾಗಿದ್ದ. ಕಲ್ಲು ಕೆಲಸದವರೊಂದಿಗೆ ಸುಮಾರು 3೦ ವರ್ಷಗಳ ಹಿಂದೆ ಕುಂದೆಶ್ವರದ ಕೆರೆಗೆ ಸ್ನಾನಕ್ಕೆ ಬಂದಿದ್ದಾಗ ಅಕಸ್ಮಾತ್ ಆಗಿ ಅಲ್ಲಿಯೇ ಉಳಿದುಕೊಂಡು ಬಿಟ್ಟ. ಮರುದಿನ ಕೆರೆಗೆ ಸ್ನಾನಕ್ಕೆ ಬಂದ ಅವರ ಬಂಧುಗಳೊಂದಿಗೆ ಮತ್ತೆ ಹೋಗಲೊಪ್ಪದ ರಾಜ ಇಲ್ಲಿಯೇ ಉಳಿದುಕೊಂಡು ಬಿಟ್ಟಿದ್ದ ಎನ್ನಲಾಗಿದೆ. ಇವನ ಸಜ್ಜನಿಕೆಯ ನಡವಳಿಕೆ, ಕಪಟವಿಲ್ಲದ ಮನಸ್ಸು ಮತ್ತು ತನ್ನಿಂದಾದ ಸಹಾಯ ಮಾಡುವ ಗುಣದಿಂದ ಕುಂದೇಶ್ವರದಲ್ಲಿ ಎಲ್ಲರಿಗೂ ಬೇಕಾದವನಾಗಿಬಿಟ್ಟಿದ್ದ. ಒಮ್ಮೆ ಪರಿಚಿತರಾದರೆ ಸಾಕು ಮತ್ತೆ ಎಲ್ಲಿ ಸಿಕ್ಕರೂ ನಿಂತೂ ತನ್ನದೇ ಭಾಷೆಯಲ್ಲಿ ಮಾತನಾಡಿಸಿ ಮುಂದೆ ಹೋಗುತ್ತಿದ್ದ. ರಾಜನ ನಿಜ ಹೆಸರು ಏನೆಂಬುದೂ ಇಂದಿಗೂ ಯಾರಿಗೂ ತಿಳಿದಿಲ್ಲ.

ಅಂಗಡಿ ಮುಂಗಟ್ಟಿನಲ್ಲಿ ಸಿಕ್ಕಿದ್ದನ್ನು ತಿಂದು ಬದುಕುತ್ತಿದ್ದ ರಾಜನಿಗೆ ಅವರಿವರು ಕೊಟ್ಟದ್ದೇ ಸಂಪಾದನೆಯಾಗಿತ್ತು. ರಸ್ತೆ ದಾಟುವ ಎಲ್ಲಾ ಮಕ್ಕಳಿಗಂತೂ ಈತ ಸ್ನೇಹಿತನಾಗಿದ್ದ. ಪ್ರತೀ ಬಾರಿಯೂ ಪುಟ್ಟ ಮಕ್ಕಳು ರಸ್ತೆ ದಾಟುವ ಸಂದರ್ಭದಲ್ಲಿ ಮಾರ್ಗದರ್ಶಕನಾಗಿರುತ್ತಿದ್ದ. ಮಕ್ಕಳಿಗೂ ಅಷ್ಟೇ ಪ್ರೀಯನಾಗಿದ್ದ. ಇವರ ನಿಸ್ವಾರ್ಥ ಸೇವೆಯನ್ನು ಗಮಿನಿಸಿ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನ್ಮಾನವನ್ನೂ ಮಾಡಲಾಗಿತ್ತು.

ಕುಂದೇಶ್ವರ ರಾಜನ ಶವ ಸಂಸ್ಕಾರ ಮಾಡಲು ಆತನ ಸಂಬಂಧಿಕರ್ಯಾರಾದರೂ ಬರಹುದೆಂದು ಶವವನ್ನು ಸರಕಾರಿ ಆಸ್ವತ್ರೆಯಲ್ಲಿ ಇಡಲಾಗಿತ್ತು. ಆತನ ಬಂಧುಗಳ ಸುಳಿವಿರದ ಕಾರಣ ಕುಂದೇಶ್ವರ ಪರಿಸರದ ಜನಗಳೇ ಆತನ ಶವಯಾತ್ರೆಯನ್ನು ಮಾಡಿ ಶವಸಂಸ್ಕಾರ ಮಾಡಿದರು. ಶವವನ್ನು ಅಂತಿಮ ದರ್ಶನಕ್ಕಿಟ್ಟಾದ ಎಲ್ಲರ ಕಂಗಳೂ ಒದ್ದೆಯಾಗಿತ್ತು. ತಮ್ಮ ಮನೆಯ ಒಬ್ಬ ಬಂಧುವನ್ನು ಕಳೆದುಕೊಂಡಂತೆ ಸಂಕಟ ಪಡುತ್ತಿದ್ದುದು ಕಂಡುಬಂತು. ವೆಂಕಟರಮಣ ಶಾಲೆಯಲ್ಲಿ ಆತನ ಸಾವಿನ ಸುದ್ದಿಯನ್ನು ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಿ ಗೌರವ ಸಲ್ಲಿಸಿದ್ದರು.

ಗೊತ್ತು ಗುರಿಇಲ್ಲದ, ಅರೆ ಮಾತಿನ ರಾಜ, ಎಲ್ಲರಿಗೂ ಪ್ರೀಯನಾಗಿ ಬದುಕಿದ್ದ.  ರಾಜನಾಗಿಯೇ ಹೊರಟು ಹೋದ.

Exit mobile version