Kundapra.com ಕುಂದಾಪ್ರ ಡಾಟ್ ಕಾಂ

ಸಾಹಿತ್ಯಾಸಕ್ತರ ಮನಕ್ಕೆ ತಂಪೆರೆದ ಶತಮಾನದ ಸ್ಮೃತಿಹಬ್ಬ

ಬೈಂದೂರು ಚಂದ್ರಶೇಖರ ನಾವಡಕುಂದಾಪ್ರ ಡಾಟ್ ಕಾಂ ಲೇಖನ.
ನಾಡಿನಾದ್ಯಂತ ಹೆಚ್ಚುತ್ತಿರುವ ಆಂಗ್ಲ ಭಾಷೆಯ ಪ್ರಭಾವ ಮತ್ತು ಪರಭಾಷೆಯ ಪಾರಮ್ಯದ ನಡುವೆ ಅಲ್ಲಲ್ಲಿ ನಡೆಯುವ ಸಾಹಿತ್ಯೋತ್ಸವಗಳು, ವಿಚಾರ ಗೋಷ್ಠಿಗಳು, ಸಾಹಿತ್ಯಿಕ ಸಂವಾದಗಳು ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ. ಸಾಹಿತ್ಯಾಸಕ್ತರಿಗೆ ಬರಡು ನೆಲದಲ್ಲಿ ತಂಗಾಳಿ ಬೀಸಿದ ಅನುಭವ ಕೊಡುತ್ತದೆ. ಇಂತಹದೇ ಒಂದು ಮಧುರ ಅನುಭವಕ್ಕೆ ಸಾಕ್ಷಿಯಾದದ್ದು ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಮೂರು ಮಹಾನ್ ಸಾಹಿತ್ಯ ರತ್ನಗಳೆನ್ನಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗ, ಉಳ್ಳೂರು ಮೂಕಜ್ಜಿ ಮತ್ತು ಬಿ.ಎಚ್.ಶ್ರೀಧರರ ನೂರರ ಸವಿನೆನಪಿಗಾಗಿ ಇತ್ತೀಚೆಗೆ (27-08-2017) ಏರ್ಪಡಿಸಿದ ವೈಶಿಷ್ಟ್ಯಮಯ ಕಾರ್ಯಕ್ರಮ. ಕುಂದಾಪುರ ತಾಲೂಕಿನ ನಾಗೂರಿನ ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಆಯೋಜಿಸಿದ ಶತಮಾನದ ಸ್ಮೃತಿ ಹಬ್ಬ, ನುಡಿ ಹಬ್ಬದ ತಂಪೆರೆದು ಸಾಹಿತ್ಯಾಸಕ್ತರನ್ನು ಆಹ್ಲಾದಗೊಳಿಸಿತು.

ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಅನಿವಾರ್ಯವೆಂಬಂತೆ ವೇದಿಕೆಯಲ್ಲಿ ರಾರಾಜಿಸಿ ಬೇಸರ ಹುಟ್ಟಿಸುವಷ್ಟು ಮಾತನಾಡುವ ರಾಜಕೀಯ ವ್ಯಕ್ತಿಗಳಿಲ್ಲದ, ಅವರ ಹಂಗಿಲ್ಲದ ಕಾರ್ಯಕ್ರಮವನ್ನು ಹಿಂದೊಮ್ಮೆ ನಾಗೂರಿನ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗಳಿಗೆ ವೈದ್ಯಕೀಯ ಸೇವೆ ತಲುಪಿಸಿದ ಶತಾಯುಷಿ ವೈದ್ಯ ಡಾ. ಎಸ್ ಜಿ ಹೊಸ್ಕೋಟೆ ಉದ್ಘಾಟಿಸಿದರು. ಶಾಲೆಯ ಮುಖ ಕಾಣದ ಮೂಕಜ್ಜಿಯ ಅಪಾರ ಜೀವನಾನುಭವದ ಮೂಸೆಯಲ್ಲಿ ಮೂಡಿಬಂದ ಜಾನಪದ ಹಾಡುಗಳನ್ನು ಹೊರಜಗತ್ತಿಗೆ ಪರಿಚಯಿಸಿದ ಡಾ. ಕನರಾಡಿ ವಾದಿರಾಜ ಭಟ್ ಮೂಕಜ್ಜಿಯ ಸಾದನೆಯನ್ನು ಸಾಹಿತ್ಯಾಸಕ್ತರಿಗೆ ಸಾದ್ಯಂತವಾಗಿ ಉಣಬಡಿಸಿದರು. ‘ಕಟ್ಟುವೆವು ನಾವು ಹೊಸ ನಾಡೊಂದನು…’ ಹಾಡಿನ ಗೋಪಾಲಕೃಷ್ಣ ಅಡಿಗರ ಪ್ರಖರ ವ್ಯಕ್ತಿತ್ವ ಮತ್ತು ಹೊಂದಾಣಿಕೆ ಮಾಡಿಕೊಳ್ಳದ ಸ್ವಭಾವ ಹಾಗೂ ಅವರ ಸಾಹಿತ್ಯದ ಒಳ ಹೊರಹುಗಳನ್ನು ಡಾ. ವಸಂತ ಕುಮಾರ್ ಪೆರ್ಲ ಮತ್ತು ಸಾಗರದ ವಿ ಗಣೇಶ್ ತೆರೆದಿಟ್ಟರು. ಭುವನೆಶ್ವರಿ ಹೆಗಡೆ ಮತ್ತು ಕುಮಟಾದ ಡಾ. ಶ್ರೀಧರ ಬಳಗಾರ ಎಚ್ ಶ್ರೀಧರರ ಪ್ರಚಂಡ ಸಾಹಿತ್ಯ ದರ್ಶನವನ್ನು ಅಭಿಮಾನಿಗಳಿಗೆ ಮನ ಮುಟ್ಟುವಂತೆ ತಲುಪಿಸಿದರು.

ಖ್ಯಾತ ಘಟಂ ವಾದಕ ಗಿರಿಧರ ಉಡುಪರಿಗೆ ಸನ್ಮಾನ ಮಾಡುವುದರೊಂದಿಗೆ ಅವರ ಸಂಗೀತ ಸಮಾರಾಧನೆಯೂ ನಡೆಯಿತು. ಅಡಿಗರ ಹಾಡುಗಳನ್ನು ಹಾಡಿದ ಚಂದ್ರಶೇಖರ ಕೆದ್ಲಾಯ ಮತ್ತು ಗರ್ತಿಕೆರೆ ರಾಘಣ್ಣ ಸಮಾರಂಭಕ್ಕೆ ಸಂಗೀತದ ಕಳೆ ಕಟ್ಟಿಕೊಟ್ಟರು. ಸ್ಥಳದಲ್ಲೇ ಕೊಟ್ಟ ವಿಷಯಾಧರಿಸಿ ಡಾI ರಾಮಕೃಷ್ಣ ಪೆಜತ್ತಾಯ ಮತ್ತು ಮಹೇಶ ಭಟ್ ಪದ್ಯ ರಚಿಸಿ ಮತ್ತು ಆ ಹಾಡುಗಳಿಗೆ ಚಂದ್ರಶೇಖರ ಕೆದ್ಲಾಯರು ಸಂಗೀತ ಸಂಯೋಜಿಸಿ ಹಾಡಿ ಪ್ರೇಕ್ಷಕರನ್ನು ಬಾವ ವಿಭೋರಗೊಳಿಸಿ ಸಮಾರಂಭವನ್ನು ವರ್ಣರಂಜಿತಗೊಳಿಸಿದರು. ಖ್ಯಾತ ಲೇಖಕಿ ವೈದೇಹಿ ಮತ್ತು ಡಾ. ಶಾಂತಾರಾಮ್ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದ ನಂತರ ನಡೆದ ಮೂಕಜ್ಜಿಯ ಜೀವನಾಧರಿತ ಕಿರು ನಾಟಕ ಹಾಗೂ ಹೇರಂಜಾಲು ಗೋಪಾಲ ಗಾಣಿಗರ ಸಾರಥ್ಯದಲ್ಲಿ ನಡೆದ ಯಕ್ಷನೃತ್ಯಾಭಿನಯ ರೂಪಕ ಸ್ಮೃತಿ ಹಬ್ಬವನ್ನು ಕಲಾಹಬ್ಬವಾಗಿಸಿತು.

ಸಾಹಿತ್ಯ-ಸಂಗೀತ-ಕಲೆಯ ಸೊಬಗಿನೌತಣದ ಜತೆಯಲ್ಲಿ ಉದರದ ಹಸಿವನ್ನು ಹಿಂಗಿಸಲು ರುಚಿಕರ ಉಪಹಾರ, ಸ್ವಾದಿಷ್ಟ ಭೋಜನ ವ್ಯವಸ್ಥೆಯಿಂದ ಕೂಡಿದ ಆಯೋಜಕರ ಆದರಾತಿಥ್ಯಕ್ಕೆ ಎಲ್ಲೂ ಕೊರತೆ ಕಾಣಲೇ ಇಲ್ಲ. ದಿನವಿಡೀ ಬಿಡುವಿಲ್ಲದೇ ನಡೆದ ಸ್ಮೃತಿ ಹಬ್ಬ ನೋಡುಗರ ಸ್ಮೃತಿಪಟಲದಲ್ಲಿ ಬಹುಕಾಲ ಅಚ್ಚಳಿಯದೇ ಉಳಿಯುವಂತಹ ಹಿತಾನುಭವ ಕೊಟ್ಟಿತು. ಗ್ರಾಮೀಣ ಪರಿಸರದಲ್ಲಿ ನಡೆದ ಸ್ಮೃತಿ ಹಬ್ಬವನ್ನು ನೇರ ಪ್ರಸಾರ ಮಾಡುವ ಮೂಲಕ ಅಂತರ್ಜಾಲ ಸುದ್ದಿತಾಣ ಕುಂದಾಪ್ರ ಡಾಟ್ ಕಾಂ ದೇಶ-ವಿದೇಶಗಳಲ್ಲಿರುವ ಆಸಕ್ತ ಕನ್ನಡಿಗರಿಗೂ ಕಣ್ತುಂಬಿಕೊಳ್ಳುವ ಸೌಭಾಗ್ಯ ಒದಗಿಸಿತು. ಕುಂದಾಪ್ರ ಡಾಟ್ ಕಾಂ ಲೇಖನ.

Exit mobile version