Kundapra.com ಕುಂದಾಪ್ರ ಡಾಟ್ ಕಾಂ

ತಂಬೆಲರು 2017: ಕಾರಂತರಿಗೆ ಪಂಚನಮನ ಕಾರ್ಯಕ್ರಮ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾರಂತ ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲ ಆದರೆ ಕಾರಂತ ಥೀಂ ಪಾರ್ಕ್‌ನಲ್ಲಿ ನಿರಂತರವಾಗಿ ನಡೆಯುವ ಕಾರ್ಯಕ್ರಮಗಳ ಮೂಲಕ ಜೀವಂತವಾಗಿರುವಂತೆ ಭಾಸವಾಗುತ್ತದೆ. ಅದರಲ್ಲೂ ಅಕ್ಟೋಬರ್ ೧ರಿಂದ ೧೦ರ ವರೆಗೆ ನಡೆಯುವ ಕಾರತೋತ್ಸವ ಕಾರ್ಯಕ್ರಮಗಳು ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ವಿಚಾರಗಳಿಂದ ಕೂಡಿದ್ದು ಕಾರಂತರ ವಿಚಾರಗಳನ್ನು ಅರಿಯಲು ಮತ್ತಷ್ಟು ನೆರವಾಗುತ್ತದೆ ಎಂದು ಕೋಟ ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಗಣೇಶ್ ಹೊಳ್ಳ ಹೇಳಿದರು.

ಅವರು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಅಕ್ಟೋಬರ್ ೧ರಿಂದ ೧೦ರವರೆಗೆ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಸಾರಥ್ಯದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ ೧೩ನೇ ವರುಷದ ಸಂಭ್ರಮ ತಂಬೆಲರು ೨೦೧೭ ಕಾರ್ಯಕ್ರಮದ ಪ್ರಥಮ ದಿನದ ಕಾರ್ಯಕ್ರಮವಾಗಿ ಕಾರಂತರಿಗೆ ಪಂಚನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಟತಟ್ಟು ಪಂಚಾಯತ್ ಅಧ್ಯಕ್ಷ ಲೋಕೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಕಾರ್ಯಕ್ರಮಕ್ಕೆ ಸಹಕರಿಸಿದ ಮುಖ್ಯ ಶಿಕ್ಷಕ ರಾಜಾರಾಮ ಐತಾಳ್, ಉದ್ಯಮಿ ಪ್ಲೇಸೆಂಟ್ ಇಬ್ರಾಹಿಂ ಸಾಹೇಬ್, ಯಡ್ತಾಡಿ ಯುವ ವಾಹಿನಿ ಉಪಾಧ್ಯಕ್ಷ ಮಹೇಶ್ ಪೂಜಾರಿ, ಇನಿದನಿ ವ್ಯವಸ್ಥಾಪಕ ರವಿ ಕಾರಂತ, ಸಾಂಸ್ಕೃತಿಕ ಚಿಂತಕ ಸಂತೋಷ ಪೂಜಾರಿ ಕದ್ರಿಕಟ್ಟು, ಕೃಷ್ಣ ಸಾಸ್ತಾನ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೋಟ ಗಿಳಿಯಾರು ಶ್ರೀಶಾಂಭವಿ ವಿದ್ಯಾದಾಯಿನಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಂದ ಪಂಚ ನಮನ ಕಾರ್ಯಕ್ರಮ ನಡೆಯಿತು. ಗಾಯಕ ಕೃಷ್ಣ ಸಾಸ್ತಾನ ನಾಡಗೀತೆಯ ಮೂಲಕ ನಾಗ ನಮನ ಸಲ್ಲಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಅಭಿನಂದನಾ ಕಾರ್ಯಕ್ರಮ ನಡೆಸಿದರು. ಕೋಟತಟ್ಟು ಪಂಚಾಯತ್ ಸದಸ್ಯ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಸರಂಗ ಕದ್ರಿಕಟ್ಟು ಇವರಿಂದ ನಿವೃತ್ತ ಶಿಕ್ಷಕ ಜಿ.ರಾಮಚಂದ್ರ ಐತಾಳ್ ನಿರ್ದೇಶನದಲ್ಲಿ ಮಂಜು ಸರಿಯಿತು ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮಕ್ಕೆ ಯುವ ವಾಹಿನಿ(ರಿ.) ಯಡ್ತಾಡಿ ಘಟಕ, ಸಾಬ್ರಕಟ್ಟೆ ಶ್ರೀವಿನಾಯಕ ಯುವಕ ಮಂಡಲ (ರಿ.), ಪ್ಲೇಸೆಂಟ್ ಕುಂದಾಪುರ-ಬ್ರಹ್ಮಾವರ, ಇನಿದನಿ ಕೋಟ ಮತ್ತು ರಸರಂಗ ಕದ್ರಿಕಟ್ಟು ಸಹಕಾರ ನೀಡಿತ್ತು.

 

Exit mobile version