Kundapra.com ಕುಂದಾಪ್ರ ಡಾಟ್ ಕಾಂ

ಭಯ ಹುಟ್ಟಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಸಾಧ್ಯವಿಲ್ಲ: ನಟ ಪ್ರಕಾಶ್ ರೈ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಂದು ಕ್ರೌರ್ಯಕ್ಕಿಂತ ಹೆಚ್ಚಾಗಿ ಭಯ ಹುಟ್ಟಿಸುವ ವ್ಯವಸ್ಥಿತ ಕೆಲಸವಾಗುತ್ತಿದೆ. ಭಯವೆಂಬುದು ಸಾಂಕ್ರಾಮಿಕ ರೋಗವಾಗುತ್ತಿದೆ. ನಮಗೆ ಬೇಕಿರುವುದು ನಾವು ಮತ್ತು ನಮ್ಮ ಮಕ್ಕಳು ನೆಮ್ಮದಿ ಹಾಗೂ ಧೈರ್ಯದಿಂದ ಬದುಕುವ ಸಮಾಜ. ಭಿನ್ನಾಭಿಪ್ರಾಯವಿದ್ದರೆ ಮಾತಿನಿಂದ ಪರಿಹರಿಸಿಕೊಳ್ಳೋಣ ಆದರೆ ಹತ್ಯೆ ಅದಕ್ಕೆ ಉತ್ತರವಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಅವರು ಕೋಟತಟ್ಟು ಗ್ರಾಮ ಪಂಚಾಯತ್ ಪಂಚಾಯತ್ ಸಾರಥ್ಯದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಹಾಗೂ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ ಸಹಯೋಗದೊಂದಿಗೆ ನಡೆದ ತಂಬೆಲರು ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ನಟ, ಕಲಾವಿದ ಪತ್ರಕರ್ತ ಯಾಕೆ ಮಾತನಾಡುತ್ತಾನೆ ಎಂದು ಪ್ರಶ್ನಿಸುವ ಮೊದಲು ಅವರೂ ಜನಸಮುದಾಯದಿಂದ ಬಂದವರು ಎಂಬುದನ್ನು ಮರೆಯಬಾರದು. ಎಲ್ಲವನ್ನೂ ನೋಡುತ್ತಾ ನಾವೇ ಹೇಡಿಯಾಗಿ ಕುಳಿತರೇ ಒಂದು ಸಮಾಜ ಹೇಡಿಯಾಗಲು ನಾವೇ ಕಾರಣವಾಗುತ್ತೇವೆ. ಮನಸಾಕ್ಷಿ ಅನ್ನಿಸಿದ್ದನ್ನು ಹೇಳಬಾರದು ಎಂದು ಹೇಳಲು ಯಾರಿಗೂ ಹಕ್ಕಿಲ್ಲ. ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ತಾನು ನಿಷ್ಠುರವಾಗಿ ಮಾತನಾಡುತ್ತಿದ್ದೇನೆಂದರೆ ತನ್ನನ್ನು ಬೈಯುವ ಬದಲು ಕಾರಂತ, ತೆಜಸ್ವಿ ಲಂಕೇಶರನ್ನು ಬೈಯಬೇಕಾಗುತ್ತದೆ. ಅವರನ್ನು ಓದಿ ಬೆಳೆದವನು ತಾನು ಅವರಂತೆಯೇ ನಡೆಯುತ್ತಿದ್ದೇನೆ. ತಾನೆಂದೂ ಮೌನದಿಂದಿರುವುದಿಲ್ಲ. ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಸಮಾಜದ ಪರವಾಗಿ ಹೋರಾಡುವ ದೊಡ್ಡ ಶಕ್ತಿ ನಮ್ಮೊಂದಿಗಿದೆ ಎಂದವರು ಹೇಳಿದರು.

ಅಜ್ಜನ ಮನೆಗೆ ಬಂದ ಮೊಮ್ಮಗನ ಸಂತೋಷ ನನಗಾಗುತ್ತಿದೆ. ಕಾರಂತರ ಬಗ್ಗೆ ಮಾತನಾಡುವುದೇ ಸಂತೋಷ. ತಾನು ಬರೆದ ಬದುಕನ್ನೇ ಜೀವಿಸಿದವರು. ಅವರು ಪದವಿ ಪಡೆದಿರಲಿಲ್ಲ ಆದರೆ ಡಾಕ್ಟರೇಟ್ ಅರಸಿ ಬಂದವು. ಅವರು ಜೀವನದಲ್ಲಿ ಜ್ಞಾನಾರ್ಜನೆ ಮಾಡಿರಲಿಲ್ಲ ಜ್ಞಾನಪೀಠ ಅವರನ್ನು ಹುಡುಕಿಕೊಂಡು ಬಂತು. ತನ್ನ ತೊಂಬತ್ತಾರನೇ ವಯಸ್ಸಿನಲ್ಲಿ ಹಕ್ಕಿಗಳ ಬಗ್ಗೆ ಬರೆಯುವುದು ಕಾರಂತರಿಂದ ಮಾತ್ರ ಸಾಧ್ಯವಾಗಿತ್ತು. ಕಾರಂತರ ಬಗ್ಗೆ ಗೊತ್ತಿಲ್ಲದವರು ಏನೇನೋ ಮಾತಾಡುತ್ತಾರೆ. ಅದೊಂದು ಫ್ಯಾಶನ್ ಎನಿಸಿಕೊಂಡಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಟತಟ್ಟು ಪಂಚಾಯತ್ ಅಧ್ಯಕ್ಷ ಎಚ್. ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಚಿತ್ರ ನಿರ್ದೇಶಕ ಜಿ.ವಿ ಮೂರ್ತಿ, ಪಿಡಿಒ ಸತೀಶ್ ವಡ್ಡರ್ಸೆ, ಕೋಟ ಪಂಚಾಯತ್ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ತಾಪಂ ಇಓ ಮೋಹನ ರಾಜ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ರತ್ನಾ ಗಾಣಿಗ ಉಪಸ್ಥಿತರಿದ್ದರು.

ಪ್ರತಿಷ್ಠಾನ ಕಾರ್ಯಧ್ಯಕ್ಷ ಆನಂದ ಸಿ ಕುಂದರ್ ಸ್ವಾಗತಿಸಿದರು. ಆಯ್ಕೆ ಸಮಿತಿ ಸದಸ್ಯ ಟಿ.ಬಿ. ಶೆಟ್ಟಿ ಪ್ರಸ್ತಾವನೆಗೈದರು. ಪತ್ರಕರ್ತ ಯು.ಎಸ್ ಶೆಣೈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿದರು. ಪ್ರಸಾದ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.

Exit mobile version