Kundapra.com ಕುಂದಾಪ್ರ ಡಾಟ್ ಕಾಂ

ಭಕ್ತಿ ದೇಗುಲದ ಮುಂದೆ ಜ್ಞಾನ ದೇಗುಲ ತೆರೆದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖಾರ್ವಿ ಸಮಾಜದ ಆರಾಧ್ಯ ದೇವರು ಶ್ರೀ ಮಹಾಕಾಳಿ. ಸಂಕೀರ್ತನೆ, ಪೂಜೆ, ಆರಾಧನೆಯ ಮೂಲಕ ಭಕ್ತಿ ಜ್ಞಾನವನ್ನು ತುಂಬಿದ ಕೀರ್ತಿ ಇಲ್ಲಿಯದು. ಈ ಕೀರ್ತಿಗೆ ಇನ್ನೊಂದು ಗರಿ ಎಂಬಂತೆ ದೇವಳದ ಆವರಣದಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗವೊಂದು ಇಲ್ಲಿ ಸಂಘಟಿತಗೊಂಡು ಸಮಾಜಮುಖಿ ಕಾರ್ಯಗಳ ಮೂಲಕ ಒಗ್ಗಟ್ಟಿನ ಹಾದಿಯಲ್ಲಿ ದಾಪುಗಾಲಿಕ್ಕುತ್ತಾ ಮುನ್ನಡೆಯುತ್ತಿದೆ.

ಭಕ್ತಿ ಜ್ಞಾನವನ್ನು ತುಂಬಿ ಖಾರ್ವಿ ಸಮಾಜವನ್ನು ಧಾರ್ಮಿಕವಾಗಿ ಉನ್ನತಿಯೆಡೆಗೆ ಕೊಂಡೊಯ್ಯುವುತ್ತಿರುವ ಕುಂದಾಪುರ ಖಾರ್ವಿಕೇರಿಯಲ್ಲಿನ ಶ್ರೀಮಹಾಕಾಳಿ ದೇಗುಲವು ತನ್ನ ಅಂಗಳದಲ್ಲಿ ಜ್ಞಾನ ಭಂಡಾರವನ್ನು ಹೊತ್ತಿರುವ ಜ್ಞಾನ ದೇಗುಲವನ್ನು ತೆರೆದು ಓದಿನ ಮೂಲಕ ಸುಜ್ಞಾನದ ಬೆಳಕನ್ನು ಪಸರಿಸುವ ಕಾರ್ಯದಲ್ಲಿ ಇದೀಗ ನಿರತವಾಗಿದೆ. ಇವರ ಇಂಗಿತಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ, ಸರ್ವಸುಸಜ್ಜಿತವಾದ ಗ್ರಂಥಾಲಯವನ್ನು ನಿರ್ಮಿಸಿಕೊಟ್ಟವರು ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್. ರೋಟರಿ ಸನ್‌ರೈಸ್‌ನ ಅಧ್ಯಕ್ಷರಾದ ಅಜಿತ್ ಕೆ ಅವರು ಸುಮಾರು ೧ ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ದೀರ್ಘಕಾಲ ಬಾಳಿಕೆ ಬರುವಂತಹ ಗುಣಮಟ್ಟದ ಗ್ರಂಥಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ.

ದೇವಾಲಯವು ಅಲ್ಲಿನ ಪರಿಸರದ ಜನರಲ್ಲಿ ಶ್ರದ್ಧೆ, ನಂಬಿಕೆಯ ಪ್ರತೀಕವಾಗಿ ಸಜ್ಜನಿಕೆ, ಸಹ್ರದಯತೆ, ಉತ್ತಮ ಗುಣ ಸಂಸ್ಕಾರಗಳನ್ನು ನೀಡಿ ಭಕ್ತಿಮಾರ್ಗದಲ್ಲಿ ಪ್ರಗತಿಯನ್ನು ಕರುಣಿಸಿದರೇ, ಗ್ರಂಥಾಲಯವೆಂಬ ಜ್ಞಾನ ದೇವಾಲಯ ಬೌದ್ಧಿಕ ವಿಕಸನವನ್ನು ಮಾಡಿ ಜನರಲ್ಲಿ ಜಾಗೃತಿ, ಚಿಂತನೆ, ಸ್ವಾವಲಂಬನೆ, ಮಾಹಿತಿ, ಜೀವನ ಮಾರ್ಗದರ್ಶಿಯಾಗಿ ಸಹಕಾರಿಯಾಗಬಲ್ಲದು. ಪುಸ್ತಕ ಉತ್ತಮ ಸ್ನೇಹಿತನಾಗಿ ಒಳಿತಿನ ಮಾರ್ಗದರ್ಶಿಯಾಗುತ್ತದೆ ಎಂಬುವುದು ಸುಳ್ಳಲ್ಲ.

ವಿದ್ಯಾರ್ಥಿಗಳಿಗೆ ಅನುಕೂಲ : ದೇಗುಲಕ್ಕೆ ತಾಗಿಕೊಂಡಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಕೆಳಭಾಗದಲ್ಲಿ ಗ್ರಂಥಾಲಯ ನಿರ್ಮಾಣಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು ಶಾಲಾ ಆಟಪಾಠದ ಜೊತೆಗೆ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಲು ಅನುಕೂಲವಾಗಲಿದೆ. ವಿದ್ಯಾರ್ಜನೆಯ ಜೊತೆಗೆ ಜ್ಞಾನಾರ್ಜನೆಗೆ ಅವಕಾಶ ಸಿಕ್ಕಂತಾಗಿರುವುದು ಇಲ್ಲಿನ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.

ಓದಿನ ಹವ್ಯಾಸ : ಗ್ರಂಥಾಲಯದಲ್ಲಿ ದಿನಪತ್ರಿಕೆಗಳು ವಾರಪತ್ರಿಕೆ, ನಿಯತಕಾಲಿಕ ಮಾಸಿಕಗಳು ಲಭ್ಯವಿರುವುದು ವಿಶೇಷ. ವಿದ್ಯಾರ್ಥಿಗಳ ಜೊತೆಗೆ ಪರಿಸರದ ಜನರಿಗೂ ಈದಿನ ಹವ್ಯಾಸವನ್ನು ಗ್ರಂಥಾಲಯ ಮಾಡಲಿದೆ.

ಧಾರ್ಮಿಕ ಗ್ರಂಥಗಳ ಸಂಗ್ರಹ : ರಾಮಾಯಣ, ಮಹಾಭಾರತ, ಭಗವದ್ಗೀತೆ, ವಚನ, ಕಗ್ಗ, ಶ್ಲೋಕ, ಗುರು ಚರಿತ್ರೆಗಳು, ದೇಗುಲಗಳ ಚರಿತ್ರೆ ಸೇರಿದಂತೆ ಹಲವು ಧಾರ್ಮಿಕ ಚಿಂತನೆ ಜಿಜ್ಞಾಸೆಗಳಿಗೆ ಪೂರಕವಾದ ಕೃತಿಗಳು ಓದುಗರಿಗೆ ಲಭ್ಯವಿದ್ದು ಧರ್ಮಾಸಕ್ತರಿಗೆ ಅಧ್ಯಯನಕ್ಕೆ ಅನುಕೂಲವಾಗಿದೆ.

ಮಾದರಿ ದೇಗುಲ : ಸಾಮಾನ್ಯವಾಗಿ ದೇಗುಲಗಳಲ್ಲಿ ಧಾರ್ಮಿಕ ಆಚರಣೆ, ಪೂಜೆಗಳು ನಡೆಯುತ್ತವೆ. ವಾರ್ಷಿಕ ಉತ್ಸವಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆದರೆ ಅಗಮಿಸುವ ಭಕ್ತಾದಿಗಳ ಜ್ಞಾನ ವಿಸ್ತರಣೆಗೆ ಅನುಕೂಲವಾಗಬಲ್ಲಂತ ಗ್ರಂಥಾಲಯ ನಿರ್ಮಿಸಿರುವುದು ಬಹಳ ವಿರಳ ಎನ್ನಬಹುದು. ಈ ನಿಟ್ಟಿನಲ್ಲಿ ಶ್ರೀ ಮಹಾಕಾಳಿ ದೇವಸ್ಥಾನ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಸರಸ್ವತಿ ಮಂಟಪ ನಿರ್ಮಿಸುವ ಮೂಲಕ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅತ್ಯುತ್ತಮ ಶಾಶ್ವತ ಕೊಡುಗೆ ನೀಡಿ ಕುಂದಾಪುರ ಜನತೆ, ಖಾರ್ವಿ ಸಮಾಜದ ಪ್ರಶಂಸೆಗೆ ಪಾತ್ರವಾಗಿದೆ.

ಗ್ರಂಥಾಲಯ ಲೋಕಾರ್ಪಣೆ : ಗ್ರಂಥಾಲಯವನ್ನು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ಅಜಿತ್ ಕೆ ಲೋಕಾರ್ಪಣೆ ಗೊಳಿಸಿದರು. ದೇವಳದ ಅಧ್ಯಕ್ಷ ಜಯಾನಂದ ಖಾರ್ವಿ, ಮೊಕ್ತೇಸರಾದ ಪಾಂಡು ಸಾರಂಗ, ರವಿ ಟಿ.ನಾಯ್ಕ್, ಪದ್ಮಾವತಿ ರವಿ ಟಿ.ನಾಯ್ಕ್, ಆನ್ಸ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ಅಜಿತ್, ರೋಟರಿ ಸದಸ್ಯರಾದ ದಿನಕರ ಪಟೇಲ್, ಗಣೇಶ್ ಬೆಟ್ಟಿನ್, ವಿಷ್ಣು ಕೆ.ಬಿ. ಬಿ.ಎಂ.ಚಂದ್ರಶೇಖರ್, ಶಿವಾನಂದ, ಕಾರ್ಯದರ್ಶಿ, ಸಿ.ಎಚ್. ಗಣೇಶ್ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ಮಹಾಕಾಳೀ ದೇವಾಲಯ ಧಾರ್ಮಿಕ ವಿಚಾರಗಳಲ್ಲಿ ಸಮಾಜವನ್ನು ಜಾಗ್ರತಗೊಳಿಸಿ ಪ್ರಗತಿ ದಾಯಕವಾಗಿದ್ದು, ಜೊತೆಗೆ ಸಮಾಜದ ಜನರಲ್ಲಿ ಶೈಕ್ಷಣಿಕ ಅರಿವು ಮೂಡಿಸುವ ಸಲುವಾಗಿ ಗ್ರಂಥಾಲಯ ಆರಂಭಿಸಿ ಸದಭಿರುಚಿ ಓದಿಗೆ, ಜ್ಞಾನಾರ್ಜನೆಗೆ ಸಹಕಾರಿಯಾಗಿರುವುದು ಸಂತಸ ತಂದಿದೆ. – ದಿನಕರ ಪಟೇಲ್, ಸ್ಥಳೀಯರು

ಇಲ್ಲಿನ ವಿದ್ಯಾರ್ಥಿಗಳು, ದೇಗುಲವನ್ನು ನಂಬಿಕೊಂಡು ಬಂದಿರುವ ಸಮಾಜದ ಜನರಲ್ಲಿ ಜ್ಞಾನಾಭಿವೃದ್ಧಿಯ ದ್ರಷ್ಠಿಯಿಂದ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಕೊಡುಗೆಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಶ್ರಮ ಸಾರ್ಥಕವಾಗುತ್ತದೆ. ಗ್ರಂಥಾಲಯ ಪರಿಸರದ ಜನತೆಗೆ ಪ್ರೇರಕ ಶಕ್ತಿಯಾಗಲಿದೆ. – ಅಜಿತ್ ಕೆ. ಅಧ್ಯಕ್ಷರು, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್

 

Exit mobile version