Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡಕ್ಕಾಗಿ ಉಡುಪಿಯಿಂದ ಕುಂದಾಪುರಕ್ಕೆ ನಡಿಗೆ! ಸಾಹಿತ್ಯ ಉಳಿವಿಗಾಗಿ ಸಂದೇಶ ಪಾದಯಾತ್ರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಚ್ಚು ಓದಿಕೊಂಡಿಲ್ಲ.. ಕುಲಕಸಬು ಮರಗೆಲಸ.. ಮಾಡುತ್ತಿರುವುದು ಸೆಂಟರಿಂಗ್ ಕೆಲಸ. ಇಷ್ಟೆಲ್ಲಾ ಇದ್ದರೂ ಯುವಕನ ಹೃದಯ ಕನ್ನಡ ಮನಸ್ಸು. ಸಾಹಿತ್ಯ!

ಕನ್ನಡ ರಾಜ್ಯೋತ್ಸವದಂದು ಯುವಕ ನಾಡು ನಡಿಯ ಸಂದೇಶ ಹೊತ್ತು ಪಾದಯಾತ್ರೆ ಮೂಲಕ ಹೊರಟಿದ್ದು ಕುಂದಾಪುರದ ಕಡೆ. ಬೆಳಗ್ಗೆ ೭.೩೦ಕ್ಕೆ ಆರಂಭವಾದ ಕಾಲು ನಡಿಗೆ ಸಂಜೆ ೫ಕ್ಕೆ ಕುಂದಾಪುರಕ್ಕೆ ಬರುವ ಮೂಲಕ ಮುಕ್ತಾಯ. ಉಡುಪಿ ಕುಂದಾಪುರ ನಡುವಿನ ಕನ್ನಡ ಮನಸ್ಸುಗಳು ಮಾತನಾಡಿಸಿದ್ದಾರೆ. ಬೆನ್ನುತಟ್ಟಿ, ಪ್ರೋತ್ಸಾಹಿಸಿ ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಯುವಕನ ಹೆಸರು ಶಿರೂರು ತಾರಾನಾಥ ಮೇಸ್ತ.

ಬೈಂದೂರು ವಿಧಾನ ಸಭಾ ಕ್ಷೇತ್ರ ಶಿರೂರು ನಿತ್ಯಾನಂದ ನಗರ ನಿವಾಸಿ ಜನಾರ್ದನ ಮೇಸ್ತ ಹಾಗೂ ಶಾರದಾ ಮೇಸ್ತ ಮೂವರು ಮಕ್ಕಳಲ್ಲಿ ತಾರಾನಾಥ ಮೇಸ್ತ ಮೊದಲಿಗರು. ಒಬ್ಬ ತಮ್ಮ ಮತ್ತೊಬ್ಬಳಿ ತಂಗಿ ಇದ್ದು, ಮರಗೆಲಸ ಕುಲ ಕಸುಬಾಗಿದ್ದು, ಉಡುಪಿ ಪರಿಸರದಲ್ಲಿ ತಾರಾನಾಥ ಮೇಸ್ತ ಸೆಂಟರಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದರೂ, ಇವರ ಆಸಕ್ತಿ ಕನ್ನಡ ಸಾಹಿತ್ಯ, ನಾಡು-ನುಡಿ ಕಡೆಗೆ.

ಕನ್ನಡ ಶಾಲೆಗಳು ಉಳಿಬೇಕು ಹಾಗೂ ನಾಡು ನುಡಿ ಸಂಸ್ಕೃತಿ ಉಳಿವಿಗಾಗಿ ಕನ್ನಡ ಭಾವುಟ ಹಿಡಿದು ಉಡುಪಿ ಕುಂದಾಪುರ ನಡುವಿನ ಪ್ರದೇಶಗಳ ಭೇಟಿ, ಕರ ಪತ್ರ ಹಂಚಿ, ಕನ್ನಡ ಬಗ್ಗೆ ಜಾಗೃತಿ ಮಾಡಿಸುವ ಮೂಲಕ ಕನ್ನಡಾಭಿಮಾನದ ಕಿಚ್ಚು ಹಚ್ಚಿದ್ದಾರೆ.

ದುಡಿಮೆ ನಡುವೆ ಪಾದಯಾತ್ರೆ ಇವರ ಮತ್ತೊಂದು ಹವ್ಯಾಸ. ದುಡಿದ ಹಣದಲ್ಲೇ ಒಂದಿಷ್ಟು ಹಣ ಎತ್ತಿಟ್ಟು ಕಳೆದ ವರ್ಷ ಹೊರಟಿದ್ದು ಉಡುಪಿಯಿಂದ ಧರ್ಮಸ್ಥಳಕ್ಕೆ. ಉದ್ದೇಶ ಸ್ವದೇಶಿ ಚಿಂಥನೆ, ರಕ್ತದಾನ, ಸಾಹಿತ್ಯ ಪುಸ್ತಕ ಹಾಗೂ ಪರಿಸರ ಜಾಗೃತಿ ಆಗಿತ್ತು. ಇವರ ಸಾಹಸಕ್ಕೆ ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆ ಬೆನ್ನುತಟ್ಟಿ ಹರಸಿ, ಕಳುಹಿಸಿದ್ದಾರೆ. ಈ ಬಾರಿ ಕನ್ನಡಕ್ಕಾಗಿ ಪಾದಯತ್ರೆಗೆ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು,ಹಾಗೂ ವಿಶು ಶೆಟ್ಟಿ ಚಾಲನೆ ನೀಡಿದ್ದು, ಕುಂದೇಶ್ವರ ದೇವಸ್ಥಾನ ಶ್ರೀ ಕುಂದೇಶ್ವರನಿಗೆ ನಮನ ಸಲ್ಲಿಸುವ ಮೂಲಕ ಸಮಾಪನ ಗೊಂಡಿದೆ.

Exit mobile version