Kundapra.com ಕುಂದಾಪ್ರ ಡಾಟ್ ಕಾಂ

ಮಂದಾರ್ತಿ ಮೇಳ: ದಾಖಲೆಯ 14 ಸಾವಿರ ಆಟ ಬುಕ್‌ ಬುಕ್ಕಿಂಗ್‌!

ಕುಂದಾಪ್ರ ಡಾಟ್ ಕಾಂ ವರದಿ.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಕರಾವಳಿಯ ಗಂಡುಕಲೆ ಯಕ್ಷ ಗಾನ ಅಮ್ಮನವರಿಗೆ ಸಲ್ಲಿಸುವ ಪ್ರಸಿದ್ಧ ಸೇವೆ. ಬೆಳಕಿನ ಸೇವೆ ಎಂದೂ ಕರೆಯುತ್ತಾರೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷ ಗಾನ ಮೇಳಕ್ಕೆ ಸುಮಾರು 600 ವರ್ಷಗಳ ಪರಂಪರೆಯಿದೆ.

ಇದೇ ಪ್ರಥಮ ಬಾರಿಗೆ ಮಳೆಗಾಲದಲ್ಲಿ ಆಯೋಜಿಸಿದ್ದ ಸೇವೆ ಆಟ ಯಶಸ್ವೀ 95 ದಿನಗಳ ಕಾಲ ನಡೆದು, 2017-18ನೇ ಸಾಲಿನ ಮೇಳಗಳ ತಿರುಗಾಟಕ್ಕೆ ಭಾನುವಾರ ಚಾಲನೆ ದೊರೆಯಲಿದೆ. 2017-18ನೇ ಸಾಲಿನ ಮಂದಾರ್ತಿಯ 5 ಮೇಳಗಳ ತಿರುಗಾಟ ನ.19ರಂದು ಪ್ರಾರಂಭಗೊಂಡಿದೆ.

14 ಸಾವಿರ ಆಟ ಬುಕ್‌: ಈಗಾಗಲೇ 2039-40ನೇ ಸಾಲಿನ ತನಕ ಭಕ್ತರು ಹರಕೆಯಾಟವನ್ನು ನೋಂದಣಿ ಮಾಡಿಕೊಂಡಿದ್ದಾರೆ. ಅಂದರೆ ಸುಮಾರು 14 ಸಾವಿರದಷ್ಟು ಸೇವೆಯಾಟಗಳು ಮುಂಚಿತವಾಗಿಯೇ ನೋಂದಾಯಿಸ್ಪಟ್ಟಿದೆ. ಮಳೆಗಾಲದ ತಿರುಗಾಟ ಹೊರತುಪಡಿಸಿ 5 ಮೇಳಗಳಿಂದ ವರ್ಷದಲ್ಲಿ 900 ಆಟ ಜರುಗಲಿದೆ.

ಪ್ರಥಮ ದೇವರ ಸೇವೆ ಆಟ: ಮಂದಾರ್ತಿ ಸಮೀಪದ ಬಾರಾಳಿ ಶ್ರೀ ಗಣಪತಿ ದೇಗುಲದಲ್ಲಿ ಮತ್ತು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ನ.19ರಂದು ಬೆಳಗ್ಗೆ ಗಣಹೋಮ ನಡೆಯಲಿದ್ದು, ರಾತ್ರಿ ದೇವಳದ ಎದುರು ಐದೂ ಮೇಳಗಳ ಪ್ರಥಮ ದೇವರ ಸೇವೆಯಾಟ ನಡೆಯಲಿದೆ. ಮೇಳ ಹೊರಡುವ ದಿನ ಪ್ರಥಮ ವೇಷ ಹಾಕುವಾಗ ಬಾರಾಳಿ ಗಣಪತಿ ದೇವಾಲಯದಲ್ಲಿ ಗೆಜ್ಜೆ ಧರಿಸಿ, ವೇಷ ಹಾಕಿಕೊಂಡು ಬಂದು, ಬಳಿಕ ಮಂದಾರ್ತಿಯಲ್ಲಿ ದೇವರ ಸೇವೆ ಆಟ ಆಡುವ ಪದ್ಧತಿ ಈಗಲೂ ಮುಂದುವರಿದಿದೆ.
ಮೇಳದ ಹಿನ್ನಲೆ: ಮೊದಲು ಮೇಳವನ್ನು ಏಲಂ ಮೂಲಕ ನಡೆಸುತ್ತಿದ್ದರೆ, 1987-88ರಿಂದ ದೇವಸ್ಥಾನದ ಮೂಲಕವೇ ನಡೆಸಲು ಆಡಳಿತ ಮಂಡಳಿ ನಿಧÜರ್‍ರಿಸಿತು. ಮಂದಾರ್ತಿ ದೇವಳದ 2ನೇ ಮೇಳವನ್ನು 92-93ರಲ್ಲಿ, 3ನೇ ಮೇಳವನ್ನು 2000-01ರಲ್ಲಿ, 4ನೇ ಮೇಳವನ್ನು 2001-02ರಲ್ಲಿ ಮತ್ತು 2010-11ರಲ್ಲಿ 5ನೇ ಮೇಳವನ್ನು ಪ್ರಾರಂಭಿಸಲಾಯಿತು. ಒಂದು ಮೇಳದಲ್ಲಿ ಹಿಮ್ಮೇಳ, ಮುಮ್ಮೇಳ ಮತ್ತು ಹೊರೆಯಾಳುಗಳನ್ನೊಳಗೊಂಡು ಸುಮಾರು 42 ಜನರು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 5 ಮೇಳಗಳಿಂದ 210 ಜನ ದುಡಿಯುತ್ತಿದ್ದಾರೆ.

ಹರಕೆ ವಿವರ
ಇದರಲ್ಲಿ 28 ಕಟ್ಟು ಕಟ್ಟಳೆ ಆಟ, 166 ಕಾಯಂ ಹಾಗೂ ಉಳಿದವು ಹರಕೆ ಸೇವೆಯಾಟಗಳಾಗಿವೆ. ಭÜಕ್ತರು ಹರಕೆಯಾಟವನ್ನು ತಾವು ಇಚ್ಛಿಸಿದ ಸ್ಥಳದಲ್ಲಿ ಆಡಿಸಲು ಅನುಕೂಲವಾಗುವಂತೆ ಐದು ಬಸ್‌ಗಳನ್ನು ಕ್ಷೇತ್ರ ಹೊಂದಿದೆ. ಯಕ್ಷ ಗಾನ ಕಲಾವಿದರು ಪೌರಾಣಿಕದ ವಿವಿಧ ಪ್ರಸಂಗ(ಕಥಾನಕ)ಗಳಲ್ಲದೆ, ಶ್ರೀದೇವಿಯ ಸ್ಥಳ ಪುರಾಣದ ಕಥೆಗಳನ್ನು ಯಕ್ಷ ಗಾನದ ಮೂಲಕ ಆಡಿ ತೋರಿಸುತ್ತಾರೆ.

ಭಕ್ತಾದಿಗಳ ಸೇವೆ ಆಟವನ್ನು ತ್ವರಿತವಾಗಿ ಪೂರೈಸುವ ನಿಟ್ಟಿನಲ್ಲಿ, ಜತೆಗೆ ಕಡಿಮೆ ಖರ್ಚಿನಲ್ಲಿ ಆಯೋಜಿಸುವ ಉದ್ದೇಶದಿಂದ ಕಳೆದ ಸಾಲಿನಿಂದ ಮಳೆಗಾಲ ತಿರುಗಾಟ ಪ್ರಾರಂಭಗೊಂಡಿದೆ. ಮುಂದಿನ ಸಾಲಿನಿಂದ ಜೂನ್‌ನಲ್ಲೇ ಕ್ಷೇತ್ರದಲ್ಲಿ ಮಳೆಗಾಲದ ಆಟ ಪ್ರಾರಂಭಗೊಳ್ಳಲಿದೆ. ಸೇವಾಕರ್ತರು ಹೆಚ್ಚು ಸ್ಪಂದಿಸಿದಲ್ಲಿ ಮಳೆಗಾಲದಲ್ಲಿ ಎರಡು ಮೇಳಗಳಿಂದ ಆಡಿಸುವ ಯೋಜನೆಯೂ ಇದೆ. ದೇಗುಲದ ಸುತ್ತುಪೌಳಿ, ತೀರ್ಥ ಮಂಟಪ ಕಾಮಗಾರಿಯೂ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, 2018ರ ಫೆಬ್ರವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. -ಎಚ್‌. ಧನಂಜಯ ಶೆಟ್ಟಿ, ಅಧ್ಯಕ್ಷ ರು, ವ್ಯವಸ್ಥಾಪನಾ ಸಮಿತಿ

Exit mobile version