Kundapra.com ಕುಂದಾಪ್ರ ಡಾಟ್ ಕಾಂ

ಅಂದು ಅರಸು ಇಂದು ಸಿದ್ದರಾಮಯ್ಯ: ಮಾಣಿ ಗೋಪಾಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂದು ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿ ಉಳುವವನೇ ಹೊಲದೊಡೆಯ ಖಾಯಿದೆಯನ್ನು ಜಾರಿಗೊಳಿಸಿ ಭೂಮಿಯ ಹಕ್ಕನ್ನು ಬಡ ಗೇಣಿದಾರರಿಗೆ ನೀಡುವ ಮೂಲಕ ಆ ವರ್ಗಕ್ಕೆ ಭೂಮಾಲೀಕರ ಶೋಷಣೆಯಿಂದ ಮುಕ್ತಿ ಕೊಡಿಸಿ ಸ್ವಾವಲಂಭಿ ಬದುಕು ಬದುಕಲು ಹಾದಿ ಮಾಡಿಕೊಟ್ಟರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಅನಾಥ ವೃದ್ಧರು, ಅಂಗವಿಕಲರು, ಖಾಯಿಲೆ ಪೀಡಿತರು, ಮಕ್ಕಳಿಲ್ಲದ ವಿಧವೆಯರು ಮುಂತಾದವರು ತಮ್ಮ ಹಸಿವು ನೀಗಿಸಿಕೊಳ್ಳಲು ಇನ್ನೊಬ್ಬರ ಮುಂದೆ ಕೈ ಚಾಚದೇ ಸ್ವಾಭಿಮಾನಿ ಬದುಕು ಬದುಕಲು ಹಾದಿ ಮಾಡಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುವ ಬಡವರ್ಗದ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದೆಂದು ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತ ಸತತ ಭರದಿಂದ ಕಂಗೆಟ್ಟು ಆತ್ಮಹತ್ಯೆಗೆ ತೊಡಗಿದಾಗ ಅವರ ೫೦,೦೦೦ ತನಕದ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಶೋಷಿತರ, ಧಮನಿತರ ಪರ ಯೋಜನೆಗಳನ್ನು ನೀಡಿದ ಏಕೈಕ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷವಾಗಿದೆ ಎಂದು ಹಿರಿಯ ರಾಜಕಾರಣಿ, ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ್ ಹೇಳಿದ್ದಾರೆ.

ಅವರು ಸಂಜೆ ಕೋಟ ಬ್ಲಾಕ್ ಮಣೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಮೂಡು ಗಿಳಿಯಾರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಸದಸ್ಯೆ ಜಯಂತಿ ಸಾಲಿಯಾನ್‌ರವರ ನೇತೃತ್ವದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಮಹಿಳೆಯರು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರನ್ನು ಬೆಂಬಲಿಸಿ ಬಿಜೆಪಿಯಿಂದ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಕೇಶ್ ಮಲ್ಲಿ  ಕ್ಷೇತ್ರದಾದ್ಯಂತ ಮಹಿಳೆಯರು ಯುವಕರು ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಬದಲಾವಣೆಯ ಸಂಕೇತವಾಗಿದೆ. ಸ್ವತಂತ್ರ ಭಾರತದಲ್ಲಿ ಪ್ರಪಥಮವಾಗಿ ಪ್ರಧಾನಿಯನ್ನಾಗಿ ಮಾಡಿದ ರಾಷ್ಟ್ರಪತಿಯನ್ನಾಗಿ ಮಾಡಿದ ಪಕ್ಷವಿದ್ದರೆ ಅದು ಕಾಂಗ್ರೇಸ್ ಮಾತ್ರ. ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ಅಧಿಕಾರದ ಹಕ್ಕು ನೀಡಿದ ಪಕ್ಷ ನಮ್ಮದು ಎಂದು ಹೇಳಿದರು.

ಕಾಂಗ್ರೆಸ್ ಎಂದರೆ ಅದೊಂದು ಕೇವಲ ರಾಜಕೀಯ ಪಕ್ಷವಲ್ಲ. ಅದೊಂದು ಶೋಷಿತರ ಪರವಾದ ಸಿದ್ಧಾಂತ, ಅದೊಂದು ಕ್ರಾಂತಿ. ಕಾಂಗ್ರೇಸ್ ಎಂದೊಡನೆ ಆ ಕೂಡಲೇ ನಮಗೆ ಭೂಸೂಧಾರಣಾ ಕಾಯಿದೆ ೨೦ ಅಂಶಗಳ ಕಾರ್ಯಕ್ರಮ ಇತ್ತೀಚಿಗಿನ ಮಾಹಿತಿ ಹಕ್ಕು ಖಾಯಿದೆ, ಶಿಕ್ಷಣ ಹಕ್ಕು ಖಾಯಿದೆ, ಆಹಾರ ಭದ್ರತಾ ಖಾಯಿದೆ, ಉದ್ಯೋಗ ಖಾತ್ರಿ ಖಾಯಿದೆ, ಅನ್ನಭಾಗ್ಯ, ಕೃಷಿ ಭಾಗ್ಯ, ಪಶು ಭಾಗ್ಯ, ಆರೋಗ್ಯ ಭಾಗ್ಯ, ಕ್ಷೀರಭಾಗ್ಯ, ಸಾಲಮನ್ನ ಮುಂತಾದವುಗಳು ನೆನಪಾಗುತ್ತದೆ. ಆದರೆ ಬಿಜೆಪಿ ಎಂದರೆ ನೋಟು ನಿಷೇಧ ಜಾರಿ ಮಾಡಿ ಜನಸಾಮಾನ್ಯರನ್ನು ಲೂಟಿ ಮಾಡಿದ ಆ ಕರಾಳ ೫೦ ದಿನಗಳ ನೆನಪಾಗುತ್ತದೆ. ಅವೈಜ್ಞಾನಿಕ ಜಿ.ಎಸ್.ಟಿ ಜಾರಿ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡ ಮೇಲು ಮಾಡಿದ ಘಟನೆಗಳು ನೆನಪಾಗುತ್ತದೆ. ಅದೆಲ್ಲಕ್ಕಿಂತಲೂ ಮುಖ್ಯವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಬಿ.ಜೆ.ಪಿ ನಾಯಕರುಗಳು ನಡೆಸಿದ ಗಣಿ ಲೂಟಿ, ಭೂ ಹಗರಣ, ಜೈಲುವಾಸ ಮುಂತಾದ ಕೊಳಕು ಕೆಲಸ ಮಾಡಿದ ಆ ಕೆಟ್ಟ ದಿನಗಳ ನೆನಪಾಗುತ್ತದೆ. ಮನಮೋಹನ್ ಸಿಂಗ್ ಆಡಳಿತಾವಧಿಯ ಸಮಯದಲ್ಲಿ ಆಧಾರ್ ಕಾರ್ಡ್‌ನ್ನು ಮಹಾನ್ ಭ್ರಷ್ಟಾಚಾರ ಎಂಬಂತೆ ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿದ್ದ ಇದೇ ಬಿ.ಜೆ.ಪಿ ಇದೀಗ ಅದ್ಯಾವ ಮುಖ ಇಟ್ಟುಕೊಂಡು ಎಲ್ಲದಕ್ಕೂ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸುತ್ತಿದ್ದಾರೋ ನನಗಂತೂ ಅರ್ಥವಾಗುತ್ತಿಲ್ಲ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೇಸ್ ಪ್ರಚಾರಸಮಿತಿ ಅಧ್ಯಕ್ಷ ವಿಕಾಸ್ ಹೆಗ್ಡೆ ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಂಕರ್ ಕುಂದರ್, ಕುಂದಾಪುರ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾಂಗ್ರೇಸ್ ಐ.ಟಿ.ಸೆಲ್. ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಅಚ್ಚುತ್ ಪೂಜಾರಿ, ಸಿ.ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಮುಖಂಡರಾದ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ದಿನೇಶ್ ಬಂಗೇರ, ಗಣೇಶ ನೆಲ್ಲಿಬೆಟ್ಟು, ದೇವೆಂದ್ರ ಗಾಣಿಗ, ಮೊಹ್ಮದ್ ಗೌಸ್, ಜಿಲ್ಲಾ ಕಾಂಗ್ರೆಸ್‌ನ ಬಾಲಕೃಷ್ಣ ಪೂಜಾರಿ, ಎ.ಎಸ್. ಶೆಣೈ, ಇಂಟೆಕ್‌ನ ಅಜಿತ್ ಶೆಟ್ಟಿ, ಪ್ರಭಾಕರ ಶೆಟ್ಟಿ, ರಾಘವೇಂದ್ರ ಕುಂದರ್, ಗಿರೀಶ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

Exit mobile version