Kundapra.com ಕುಂದಾಪ್ರ ಡಾಟ್ ಕಾಂ

‘ನಮ್ಮ ಕುಂದಾಪುರ’ ಫೇಸ್ಬುಕ್ ಗುಂಪಿನ ಸಹಮಿಲನ

ಬೆಂಗಳೂರು,ಮೇ.3: ಇಂದು ಬೆಂಗಳೂರಿನಲ್ಲಿಯೂ ಕುಂದಾಪ್ರ ಕನ್ನಡದ ಸದ್ದು ಕೇಳುತ್ತಿತ್ತು. ಜಿ.ಪಿ ನಗರದ ವಿಜಯ ಬ್ಯಾಂಕ್ ಕಾಲನಿಯಲ್ಲಿ ನಡೆದ ‘ನಮ್ಮ ಕುಂದಾಪುರ’ ಫೇಸ್ಬುಕ್ ಗುಂಪಿನ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುಂಪಿನ ಸದಸ್ಯರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಒಂದಿಷ್ಟು ಕುಂದಾಪುರಿಗರು ಸೇರಿ ತಮ್ಮೂರಿನವರನ್ನು ನೇರವಾಗಿಯೇ ಕಂಡು ಮಾತನಾಡಿ ಸಂಭ್ರಮಿಸಿದರು.

ನಮ್ಮ ಕುಂದಾಪುರ ಗುಂಪಿನ ಸಂಸ್ಥಾಪಕ ರಾಧಾಕೃಷ್ಣ ಶೆಟ್ಟಿ ಸದಸ್ಯರನ್ನು ಸ್ವಾಗತಿಸುತ್ತಾ ಮಾತನಾಡಿ ಇಂದು ನಮ್ಮ ಕುಂದಾಪುರ ಗುಂಪು ಸ್ಥಾಪನೆಯಾಗಿ ಐದು ವರ್ಷವಾಗಿದ್ದು ಸದ್ಯ 55,000ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಈವರೆಗೆ ವಿವಿಧ ಕಡೆಗಳಲ್ಲಿ ಗುಂಪಿನ ಸದಸ್ಯರ 11ಕ್ಕೂ ಹೆಚ್ಚು ಸಹಮಿಲನ ನಡೆದಿದೆ. ಕುಂದಾಪುರದ ಭಾಷೆ, ಸಂಸ್ಕೃತಿಗೆ ಪೂರಕವಾದ ಮಾಹಿತಿಗಳನ್ನು ಗುಂಪಿನಲ್ಲಿ ಮತ್ತಷ್ಟು ಹಂಚುವುದರ ಮೂಲಕ ನಮ್ಮೂರಿಗೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಡುವ ಗುರಿ ನಮ್ಮದಾಗಿರಲಿ ಎಂದು ಆಶಿಸಿದರು.

ಸಹಮಿಲನದಲ್ಲಿ 55ಕ್ಕೂ ಹೆಚ್ಚು ಗುಂಪಿನ ಸದಸ್ಯರು ಭಾಗವಹಿಸಿದ್ದರು. ಪರಸ್ಪರ ಪರಿಚಯ ಮಾಡಿಕೊಂಡ ಸದಸ್ಯರು ನಂತರ ಆಟ, ಊಟ, ಮಾತಿನಲ್ಲಿ ತಲ್ಲೀನರಾದರು. ಕುಂದಾಪುರದಲ್ಲಿನ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕುತ್ತಾ, ಗುಂಪಿನ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಾ, ಕುಂದಾಪ್ರ ಕನ್ನಡವನ್ನು ಅರೆಬರೆಯಾಗಿ ಮಾತನಾಡುತ್ತಾ ಸಂಭ್ರಮಿಸಿದರು.

ಮನೋರಂಜನೆಯ ಭಾಗವಾಗಿ ನಾಗ್ ದೇವರ ದರ್ಶನ, ಯಕ್ಷಗಾನ ಕುಣಿತ, ನೃತ್ಯ, ಮೂಕಾಭಿನಯ, ವಿವಿಧ ಆಟೋಟಗಳು ನಡೆದವು. ಕರುಣಾಕರ ಭಂಡಾರಿಯವರು ವ್ಯವಸ್ಥೆ ಮಾಡಿಸಿದ್ದ ಊಟದಲ್ಲಿ ಕೊಟ್ಟೆ ಕಡ್ಬು ವಿಶೇಷವಾಗಿತ್ತು.

ಈ ಭಾರಿಯ ಸಹಮಿಲನದಲ್ಲಿ ಸುವರ್ಣ ವಾಹಿನಿಯ ವಾರ್ತಾವಾಚಕ ರಾಘವೇಂದ್ರ ಕಾಂಚನ್, ವಿಜಯವಾಣಿಯ ಹಿರಿಯ ವರದಿಗಾರ ರವಿಕಾಂತ್ ಕುಂದಾಪುರ, ಸೌತ್ ಇಂಡಿಯಾ ಕ್ವೀನ್ 2015ರ ವಿಜೇತೆ ಸೌಮ್ಯ ಕಾಂಚನ್, ಸೌತ್ ಇಂಡಿಯಾ ಕ್ವೀನ್ 2015ರ ಸುಂದರ ಕಣ್ಣುಗಳ ವಿಭಾಗದ ವಿಜೇತೆ ಸೀಮಾ ಬುಟೆಲ್ಲೊ, ಬರಹಗಾರ ಭಾಸ್ಕರ್ ಬಂಗೇರ ಸೇರಿದಂತೆ ಅನೇಕ ಖ್ಯಾತನಾಮರು ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದ್ದರು.

ಕುಂದಾಪ್ರ ಡಾಟ್ ಕಾಂ ಕಳೆದ ಭಾರಿ ನಮ್ಮ ಕುಂದಾಪುರದ ಬಗ್ಗೆ ಪ್ರಕಟಿಸಿದ ವಿಶೇಷ ಲೇಖನ ಓದಿ > http://bit.ly/Namma-Kundapura 

Exit mobile version