ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮರವಂತೆಯ ಸಮುದ್ರದಲ್ಲಿ ಭಾನುವಾರ ಮಧ್ಯಾಹ್ನದ ಬಳಿಕ ತೀವ್ರ ಗಾತ್ರದ ಉಬ್ಬರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವುದರಿಂದ ಮೀನುಗಾರರ ಮನೆಗಳಿಗೆ ಅಪಾಯ ಉಂಟಾಗಿದೆ. ನಿರ್ಮಾಣ ಹಂತದಲ್ಲಿರುವ ಮೀನುಗಾರಿಕಾ ಹೊರಬಂದರಿನ ಎರಡು ತಡೆಗೋಡೆಗಳ ನಡುವಿನ ಪ್ರದೇಶದಲ್ಲಿರುವ ಕರಾವಳಿ ಮಾರ್ಗದ ಒಂದು ಕಡೆ ಕೊರೆತ ಉಂಟಾಗಿದ್ದು, ರಸ್ತೆ ಕಡಿದು ಹೋಗುವ ಹಂತದಲ್ಲಿದೆ. ಅಲೆಗಳು ಚೆಲ್ಲುವ ನೀರು ರಸ್ತೆಯನ್ನು ದಾಟಿ ವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಆ ಪ್ರದೇಶದಲ್ಲಿರುವ ಬುದ್ಧಿವಂತ ಮಂಜುನಾಥ ಖಾರ್ವಿ, ಸುಬ್ರಹ್ಮಣ್ಯ ಖಾರ್ವಿ, ಅಣ್ಣಪ್ಪ ಖಾರ್ವಿ, ಶೇಷಿ ಖಾರ್ವಿ ಮತ್ತು ಬೊಬ್ಬರ್ಯನಕೊಡಿ ರಾಮಚಂದ್ರ ಖಾರ್ವಿ ಮನೆಯ ಅಂಗಳಕ್ಕೆ ನೀರು ಹರಿಯುತ್ತಿದೆ. ಇದರಿಂದ ಮನೆಯಲ್ಲಿ ರಾತ್ರಿ ಕಳೆಯುವುದು ಅಪಾಯಕಾರಿ ಆದುದರಿಂದ ನೆರೆಹೊರೆಯವರ ಸಹಾಯದಿಂದ ಮನೆಯವರನ್ನು ಮತ್ತು ಸಾಮಗ್ರಿಗಳನ್ನು ಅನ್ಯರ ಮನೆಗೆ ಸ್ಥಳಾಂತರಿಸಲಾಗುತ್ತಿದೆ. ರಸ್ತೆ ಪೂರ್ತಿಯಾಗಿ ಕಡಿದುಹೋದಲ್ಲಿ ಹಲವು ಮನೆಗಳಿಗೆ ಅಪಾಯ ತಟ್ಟಲಿದೆ.
ಸುದ್ದಿ ತಿಳಿದು ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ಪೂಜಾರಿ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಸ್ಥಳಕ್ಕೆ ಭೇಟಿ ನೀಡಿದರು. ಗೋಪಾಲ ಪೂಜಾರಿ ಜಿಲ್ಲಾಧಿಕಾರಿ, ಕುಂದಾಪುರದ ಉಪ ವಿಭಾಗಾಧಿಕಾರಿ, ಬೈಂದೂರು ತಹಶೀಲ್ದಾರ್, ಬಂದರು ಮತ್ತು ಮೀನುಗಾರಿಕಾ ಇಂಜಿನಿಯರ್ ಅವರನ್ನು ಸಂಪರ್ಕಿಸಿ ತುರ್ತು ರಕ್ಷಣಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಪುರಂಧರ ಹೆಗ್ಡೆ ಇಂಜಿನಿಯರ್ ಅವರನ್ನು ಕರೆಸಿ ತಾವೂ ಸ್ಥಳದಲ್ಲಿದ್ದು ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಪರಮೇಶ್ವರ ಗುನಗ, ತ್ರಾಸಿ ಎಸ್‌ಐ ಮಧು ಟಿ.ಎಂ ಮತ್ತು ಸಿಬ್ಬಂದಿ ಕೂಡ ಬಂದಿದ್ದು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಅಗತ್ಯ ಎನಿಸಿದರೆ ಅಗ್ನಿ ಶಾಮಕ ದಳವನ್ನು ಕರೆಸಿಕೊಳ್ಳುವುದಾಗಿ ತಿಳಿಸಿದರು.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವ ಕಾರಣ ಸಮುದ್ರ ಪ್ರಕ್ಷುಬ್ಧ ಆಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಉಬ್ಬರ ನಾಳೆಯೂ ಮುಂದುವರಿಯಲಿದೆ ಎಂದು ಮೀನುಗಾರರಿಗೆ ಬಂದ ಮುನ್ನೆಚ್ಚರಿಕೆ ಸಂದೇಶ ತಿಳಿಸಿದೆ.