ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯ ಮೀನುಗಾರಿಕಾ ಹೊರಬಂದರಿನ ಉತ್ತರ ಭಾಗದಲ್ಲಿ ಮಂಗಳವಾರ ಆರಂಭವಾಗಿ ಗುರುವಾರದ ವರೆಗೆ ಏರುಗತಿಯಲ್ಲಿ ಸಾಗಿದ ಕಡಲ್ಕೊರೆತ, ಶುಕ್ರವಾರ ಗಂಭೀರ ಸ್ವರೂಪ ತಾಳಿದೆ. ಈ ಮೂರು ದಿನಗಳಲ್ಲಿ ಸಮುದ್ರದ ಉಬ್ಬರದ ಅಲೆಗಳು 350 ಮೀಟರು ಉದ್ದದ ದಂಡೆಯ 4 ಮೀಟರು ಅಗಲದ ಭೂಭಾಗವನ್ನು ಕಡಲಿಗೆ ಸೇರಿಸಿವೆ. ಈ ಸ್ಥಳದಲ್ಲಿದ್ದ ಸುಮಾರು ನೂರು ತೆಂಗಿನ ಮರಗಳು ಕಡಲಿಗೆ ಉರುಳಿವೆ. ಇಲ್ಲಿರುವ ಮೀನುಗಾರರ ವಸತಿ ಪ್ರದೇಶದ ಜೀವನಾಡಿಯಾಗಿರುವ ಕರಾವಳಿ ಮಾರ್ಗದ 2 ರಿಂದ 8 ಅಡಿ ಅಂತರದಲ್ಲಿ ಅಲೆಗಳು ಅಪ್ಪಳಿಸುತ್ತಿವೆ. ರಾತ್ರಿ ಹೊತ್ತಿಗೆ ಅಲೆಗಳ ಆರ್ಭಟ ಹೆಚ್ಚಲಿದ್ದು, ಆಗ ರಸ್ತೆ, ಅದರ ಬದಿಯಲ್ಲಿರುವ ವಿದ್ಯುತ್ ಲೈನ್ ಕುಸಿಯುವ ಸಾಧ್ಯತೆ ಇದೆ. ಶನಿವಾರ ಮತ್ತು ಭಾನುವಾರ ’ತೌಕ್ತಿ’ ಚಂಡ ಮಾರುತ ಇಲ್ಲಿಗೆ ಅಪ್ಪಳಿಸಿದರೆ ರಸ್ತೆಯ ಜತೆಗೆ ಅದರ ಪೂರ್ವದಲ್ಲಿರುವ 25 ಮೀನುಗಾರರ ಮನೆಗಳು ಅಪಾಯಕ್ಕೆ ಸಿಲುಕಲಿವೆ ಎಂದು ಮೀನುಗಾರರು ಭೀತಿ ವ್ಯಕ್ತಪಡಿಸುತ್ತಿದ್ದಾರೆ.
ಬುಧವಾರ ಭಾಗಶ: ಕುಸಿದಿದ್ದ ಪಕ್ಕುಮನೆ ದಿನಕರ ಖಾರ್ವಿ ಅವರ ಮೀನುಗಾರಿಕೆ ಶೆಡ್ ಗುರುವಾರ ಸಂಪೂರ್ಣ ಸಮುದ್ರ ಪಾಲಾಗಿದೆ. ಪಕ್ಕುಮನೆಚಂದ್ರ ಖಾರ್ವಿ ತಮ್ಮ ಶೆಡ್ ರಕ್ಷಿಸಿಕೊಳ್ಳಲು ಬುಧವಾರ ಮರಳಿನ ದೊಡ್ಡ ಚೀಲಗಳ ತಡೆ ನಿರ್ಮಿಸಿಕೊಂಡಿದ್ದರು. ಶುಕ್ರವಾರ ಮುಂದೊತ್ತಿ ಬರುತ್ತಿರುವ ಅಲೆಗಳು ಈ ತಡೆಯನ್ನು ಶಿಥಿಲಗೊಳಿಸುತ್ತಿವೆ. ಮರಳು ತುಂಬಿರುವ ಚೀಲಗಳು ಸಮುದ್ರ ಸೇರಿದರೆ ಅವರ ಶೆಡ್ ಕೂಡ ಕುಸಿಯಲಿದೆ.
ಇಲ್ಲಿನ ಕ್ಷಣಕ್ಷಣದ ಬೆಳವಣಿಗೆಯ ಮಾಹಿತಿಯನ್ನು ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ವಿವಿಧ ಸ್ತರದ ಅಧಿಕಾರಿಗಳಿಗೆ, ವೀಡಿಯೊ ಸಹಿತ ಕಳುಹಿಸಲಾಗುತ್ತಿದ್ದರೂ ಯಾರಿಂದಲೂ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಇಲ್ಲಿನ ನಿವಾಸಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ ಖಾರ್ವಿ ಹತಾಶೆಯಿಂದ ಹೇಳುತ್ತಾರೆ.
ಮರವಂತೆಯಲ್ಲಿ ಕಡಲಕೊರತಕ್ಕೆ ಕಾರಣವೇನು?
ಈ ಪ್ರದೇಶದಲ್ಲಿ ಬಂದರಿನ ಉತ್ತರದ ತಡೆಗೋಡೆಯ ಸಮೀಪ ಕಲ್ಲಿನ ಹಾಸು ಇದೆ. ಅದರಿಂದಾಗಿ ಇಲ್ಲಿ ಮಡುವೊಂದು ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಸಮುದ್ರ ಸ್ವಲ್ಪವೇ ಪ್ರಕ್ಷುಬ್ಧವಾದರೂ ಮಡುವಿನಲ್ಲೇ ತೀವ್ರ ಸ್ವರೂಪದ ಅಲೆಗಳು ಉಂಟಾಗಿ ದಡದತ್ತ ಧಾವಿಸುವುದರಿಂದ ಇಲ್ಲಿ ಮಳೆಗಾಲ, ಬೇಸಿಗೆ ಎಂಬ ಅಂತರವಿಲ್ಲದೆ ಕಡಲ್ಕೊರೆತ ಸಂಭವಿಸುತ್ತಿದೆ. ಈ ಭಾರಿ ಮಳೆಗಾಲ ಆರಂಭಕ್ಕೂ ಮೊದಲೇ ನೈರುತ್ಯ ಭಾಗದಿಂದ ಗಾಳಿ ಬೀಸುತ್ತಿರುವುದರಿಂದ ಕಡಲ ಅಲೆಗಳ ಅಬ್ಬರ ಹೆಚ್ಚಿದೆ ಎಂಬುದು ಮೀನುಗಾರರ ಅಂಬೋಣ
ಬಂದರು ನಿರ್ಮಾಣದ ಆರಂಭದ ಹಂತದಲ್ಲಿ ಕಲ್ಲಿನ ಹಾಸಿನಿಂದಾಗಿ ಮಡು ಉಂಟಾಗುವ ಬಗ್ಗೆ ತಂತ್ರಜ್ಞರ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದು ತಡೆಗೋಡೆಯನ್ನು ಇನ್ನೂ ದಕ್ಷಿಣದಲ್ಲಿ ನಿರ್ಮಿಸಬೇಕು ಎಂದು ತಿಳಿಸಲಾಗಿತ್ತು. ಅವರು ಮೀನುಗಾರರ ಪಾರಂಪರಿಕ ಜ್ಞಾನಕ್ಕೆ ಬೆಲೆ ಕೊಡದೆ ಇದ್ದ ಕಾರಣ ಇಲ್ಲಿನ ನಿವಾಸಿಗಳು ನಿರಂತರ ಆತಂಕದಲ್ಲಿ ಬದುಕುವಂತಾಗಿದೆ – ಪಕ್ಕುಮನೆ ಚಂದ್ರ ಖಾರ್ವಿ, ಹಿರಿಯ ಮೀನುಗಾರ ಮುಖಂಡ.
ಕಂಚುಗೋಡು, ಮಡಿಕಲ್, ದೊಂಬೆಯಲ್ಲಿಯೂ ಕಡಲಕೊರೆತ:
ಇನ್ನು ತ್ರಾಸಿಯ ಕಂಚುಗೋಡು ಭಾಗದಲ್ಲಿಯೂ ಕಡಲ ಕೊರೆತ ಮುಂದುವರಿದಿದ್ದು ಈಗಾಗಲೇ ಸುಮಾರು 500 ಮೀಟರಿನಷ್ಟು ತೀರ ಪ್ರದೇಶದಲ್ಲಿ ಕಡಲಕೊರೆತ ಉಂಟಾಗಿದೆ. ಉಪ್ಪುಂದ ಗ್ರಾಮದ ಮಡಿಕಲ್ ಭಾಗದಲ್ಲಿಯೂ ಕಳೆದ ಒಂದು ವಾರದಿಂದ ಕಡಲ ಕೊರೆತ ಉಂಟಾಗಿದ್ದು ತೀರ ಪ್ರದೇಶ ಹಾನಿಯಾಗಿದೆ. ಹೀಗೆಯೆ ಮುಂದುವರಿದರೆ ಇಲ್ಲಿನ ಮನೆಗಳಿಗೆ ಅಪಾಯ ಎದುರಾಗಲಿದೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ದೊಂಬೆ ಭಾಗದಲ್ಲಿಯೂ ಕಡಲಕೊರೆತ ಮುಂದುವರಿದಿದ್ದರು ತೀರ ಪ್ರದೇಶದಲ್ಲಿ ಹಾಕಲಾಗಿದ್ದ ಕಲ್ಲುಗಳು ಕೊಚ್ಚಿಹೊಗಿದೆ.
ಮರವಂತೆಯಲ್ಲಿ ಪದೇಪದೆ ಕಡಲ್ಕೊರೆತ ಸಂಭವಿಸುವುದನ್ನು ತಡೆಯಲು ಶಾಶ್ವತ ತಡೆಗೋಡೆ ನಿರ್ಮಿಸುವುದಕ್ಕೆ ಸಮಯ ತಗಲುವುದರಿಂದ ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರ ಸೂಚನೆಯಂತೆ ತುರ್ತಾಗಿ ಸಿಲೆ ಕಲ್ಲುಗಳ ತಡೆಗೋಡೆ ನಿರ್ಮಿಸುವ ಕಾಮಗಾರಿ ತಕ್ಷಣ ಆರಂಭಿಸಲಾಗುವುದು – ಉದಯಕುಮಾರ ಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್