Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಮರಳುಗಾರಿಕೆ : ನೆಮ್ಮದಿಯ ಬದುಕಿಗೆ ನಿವಾಸಿಗಳ ಮನವಿ

ಕುಂದಾಪುರ: ತಾಲೂಕಿನ ಬಸ್ರೂರು ಗ್ರಾಮದ ಹಟ್ಟಿಕುದ್ರು ಎಂಬಲ್ಲಿ ಮರಳುಗಾರಿಕೆಗೆ ನಿಷೇಧಿವಿದ್ದರೂ ಕೂಡ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸ.ನಂ.1 ಮತ್ತು 239ನೇ ಸ್ಥಳದ 400 ಎಕರೆ ಪ್ರದೇಶದಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸ್ಥಳೀಯರು ಮನವಿ ಮಾಡಿದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇಲಾಖೆ ದಿವ್ಯ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಸ್ರೂರು ಗ್ರಾಮದ ಆನಗಳ್ಳಿ ರಸ್ತೆಯ ರೈಲ್ವೇ ಸೇತುವೆ 10ಮೀ. ಕೆಳಭಾಗದಲ್ಲಿ ಹಟ್ಟಿಕುದ್ರು ಭಾಗದ 10 ಎಕರೆ ಜಾಗವನ್ನೊಳಗೊಂಡಿರುವ ಜಾನುವಾರುಗಳ ಮೇವಿಗಾಗಿ ಖಾರೀದಿಸಿದ ಹಾಗೂ ಕೃಷಿ ಚಟುವಟಿಕೆ ನಡೆಯುವ ಸ್ಥಳಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮತ್ತು ಹಿರಿಯ ಭೂವಿಜ್ಞಾನ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ, ಮನವಿ ನೀಡಿದ್ದರೂ ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸ್ರೂರು ಮತ್ತು ಹಟ್ಟಿಕುದ್ರು ನಡುವೆ ಇರುವ ಕುದ್ರು(ದ್ವೀಪ)ನಲ್ಲಿ ಈ ಹಿಂದೆ ಭತ್ತ ಬೆಳೆಯಲಾಗುತ್ತಿತ್ತು. ಬಳಿಕ ಕಂದಾಯ ಮತ್ತು ಅರಣ್ಯ ಇಲಾಖೆ ಜಾನುವಾರುಗಳ ಮೇವಿಗಾಗಿ ಗೋಮಾಳವಾಗಿ ಪರಿವರ್ತಿಸಿದ್ದರು. ಅಕ್ರಮ ಮರಳುಗಾರಿಕೆಯ ಹಿನ್ನಲೆಯಲ್ಲಿ ನದಿಯಲ್ಲಿ 25 ರಿಂದ 30 ಅಡಿ ಆಳವಾಗಿರುವುದರಿಂದ ಜಾನುವಾರುಗಳನ್ನು ನದಿ ದಾಟಿಸಿ ಮೇಯಲು ಬಿಡಲು ಕಷ್ಟವಾಗುತ್ತಿದೆ. ಇದೇ ಭಾಗದಲ್ಲಿ ಕೊಂಕಣ ರೈಲ್ವೇ ಹಾದುಹೋಗುತ್ತಿದೆ. ರೈಲ್ವೇ ಹಳಿಯ ಕೆಳ ಭಾಗದಲ್ಲಿ ಹಗಲು ರಾತ್ರಿ ನಿರಂತರ ಮರಳುಗಾರಿಕೆ ನಡೆಯುತ್ತಿರುವುದರಿಂದ ಹಳಿಗೆ ಆಧಾರವಾಗಿ ಹಾಕಲ್ಪಟ್ಟ ಕಂಬಗಳು ಅಪಾಯದಂಚಿನಲ್ಲಿದೆ. ರೈಲ್ವೆ ಹಳಿ ಹಾದು ಹೋಗುವ ಆಸು ಪಾಸಿನಲ್ಲಿ ನೂರಾರು ಮನೆಗಳಿದ್ದು ಆತಂಕದ ಜೀವನ ನಡೆಸುತ್ತಿದ್ದಾರೆ. ಬೆಳಗಿನ ಜಾವ 5ರಿಂದ ರಾತ್ರಿ 8ರವರೆಗೆ ಐದಾರು ಗುಂಪುಗಳಲ್ಲಿ ದಿನವೋಂದಕ್ಕೆ 50ರಿಂದ 60 ಲೋಡ್ ಮರಳು ಸಾಗಾಟವಾಗುತ್ತಿದ್ದು ಭಾರಿ ಗಾತ್ರದ ಲಾರಿಗಳ ಒಡಾಟದಿಂದ ರಸ್ತೆಗಳು ಹದಗೆಟ್ಟಿವೆ. ಕಿರಿದಾದ ರಸ್ತೆಗಳ ಅಕ್ಕಪಕ್ಕದಲ್ಲಿ ನೂರಾರು ಮನೆಗಳಿದ್ದು ಸ್ಥಳೀಯರು ಮುಂದಾಗುವ ಅಪಾಯವನ್ನರಿತು ಕಂಗಾಲಾಗಿದ್ದಾರೆ

ಕುಡಿಯುವ ನೀರಿನ ಸಮಸ್ಯೆ: ಹಟ್ಟಿಕುದ್ರುವಿನಲ್ಲಿ 250 ಮನೆಗಳಿದ್ದು, 2500ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಪ್ರತಿ ಮನೆಯವರು ಬಾವಿ ನೀರನ್ನೆ ಅವಲಂಬಿಸ ಬೇಕಾಗಿದ್ದು, ನಳ್ಳಿ ನೀರಿನ ವ್ಯವಸ್ಥೆ ಇರುವುದಿಲ್ಲ. ಇದೀಗ ಆಳವಾದ ಮರಳುಗಾರಿಕೆಯಿಂದ ಬಾವಿ ನೀರು ಉಪ್ಪು ಮಿಶ್ರಿತವಾಗಿ ನೀರು ಕುಡಿಯಲು ಸಾಧ್ಯವಾಗದೇ ಭವಣೆ ಪಡುವ ಸ್ಥಿತಿ ನಿರ್ಮಾಣವಾಗಿದೆ. ನಳ್ಳಿ ನೀರಿನ ವ್ಯವಸ್ಥೆಯನ್ನು ಕಲ್ಪಸುವಂತೆ ಹಟ್ಟಿಕುದ್ರು ಗ್ರಾಮಸ್ಥರ ಪರವಾಗಿ ಮಾಜಿ ತಾ. ಪಂ. ಸದಸ್ಯ ಹಟ್ಟಿಕುದ್ರು ಬಾಬು ಪೂಜಾರಿಯವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಮನಿವಿ ಮಾಡಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

ಅರಣ್ಯ ಇಲಾಖೆ ಭೇಟಿ: ಹಟ್ಟಿಕುದ್ರು ಗ್ರಾಮಸ್ಥರ ಮನವಿ ಮೇರೆಗೆ ಕುಂದಾಪುರ ಉಪ ವಿಭಾಗದ ಅರಣ್ಯ ವಲಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೋರಾಟದ ಎಚ್ಚರಿಕೆ: ಅಕ್ರಮ ಮರಳುಗಾರಿಕೆಯಿಂದ ಜನ ಸಾಮಾನ್ಯರ ನೆಮ್ಮದಿ ಹಾಳಾಗಿದ್ದು, ಬದುಕು ದುಸ್ತರವಾಗಿದೆ. ದನ ಕರು ಹಾಗೂ ಕೋಣಗಳನ್ನು ಮೇಯಿಸಲು ಜಾಗವಿಲ್ಲದೇ ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೋಂಕಣ ರೈಲ್ವೆ ಹಳಿಯ ಕಂಬಗಳ ಭದ್ರತೆಯ ದೃಷ್ಠಿಯಿಂದ, ಹಟ್ಟಿಕುದ್ರು-ಬಸ್ರೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಶೀಘ್ರವಾಗಿ ಅಕ್ರಮ ಮರಳುಗಾರಿಕೆಯನ್ನು ಸಂಬಂಧಪಟ್ಟ ಇಲಾಖೆಗಳು ಮಟ್ಟಹಾಕ ಬೇಕು. ತನ್ಮೂಲಕ ಬಸ್ರೂರು-ಹಟ್ಟಿಕುದ್ರು ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗ ಬೇಕಿದೆ. ಅಕ್ರಮ ಮರಳುಗಾರಿಕೆಯನ್ನು ತಡೆಯುವಲ್ಲಿ ಇಲಾಖೆ ಕಾರ್ಯೋನ್ಮುಖವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾದಿತು ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಎಚ್ಚರಿಸಿದ್ದಾರೆ.

Exit mobile version