Kundapra.com ಕುಂದಾಪ್ರ ಡಾಟ್ ಕಾಂ

ಸಾಧನ ಕಲಾ ಸಂಸ್ಥೆಗೆ ದಶಮಾನ ಸಂಭ್ರಮ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಕುಂದಾಪುರದ ಹೆಮ್ಮೆಯ ಸಂಸ್ಥೆಯಾದ ಸಾಧನ ಕಲಾ ಸಂಗಮ ರಿ, 2009 ಪ್ರಾರಂಭವಾಗಿ, ಈ ವರ್ಷ ತನ್ನ ದಶಮಾನ ವರ್ಷ ಆಚರಣೆಯ ಸಂಭ್ರಮದಲ್ಲಿದೆ. ಕರಾವಳಿಯಲ್ಲೆ ವಿಶಿಷ್ಟ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಂಸ್ಥೆ ಒಂದೇ ಸೂರಿನಡಿ ಭಾರತೀಯ ಲಲಿತ ಕಲೆಗಳ ವಿವಿಧ ಪ್ರಕಾರವನ್ನು ಆಸಕ್ತ ಸಾಧಕರಿಗೆ ಉಣಬಡಿಸುತ್ತಿದೆ.

ಈ ದಶಮಾನ ವರ್ಷಾಚರಣೆಯನ್ನು ಅರ್ಥ ಪೂರ್ಣವಾಗಿಸಲು, ಈ ವರ್ಷ ಪೂರ್ತಿ ನಿರಂತರ ಲಲಿತಕಲೆಗಳಿಗೆ ಸಂಭಂದಪಟ್ಟ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ನಮ್ಮ ಹೆಮ್ಮೆಯ ಕಾರ್ಯಕ್ರಮಗಳಾದ ಗಜವರ್ಣ, ಸಂಕಲನ ಹಾಗೂ ತ್ರಿಮಧುರದ ಜೊತೆಯಲ್ಲಿ ನಿಮ್ಮ ವೇದಿಕೆ – ನಮ್ಮ ಪ್ರತಿಭೆಗಳು, ನಿಮ್ಮಂಗಳದಲ್ಲಿ ಚಿತ್ರಕಲೆ, ನವಸಾಹಿತ್ಯ ವೇದಿಕೆ ಕಥಾ ಕಮ್ಮಟ, ಉಡುಪಿ ಜಿಲ್ಲಾ ಮಟ್ಟದ ಭಾವಗಾನ ಸ್ಪರ್ಧೆ, ಹೀಗೆ ಹಲವಾರು ಸರಣಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಹಲವಾರು ಕಲಾವಿದರ ಕೊಡುಗೆಯಿಂದ ಈ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮುಖ್ಯವಾಗಿ ಹಿಂದುಸ್ಥಾನಿ ಸಂಗೀತದಲ್ಲಿ ವಿದ್ವಾನ್ ಗಜಾನನ ಹೆಬ್ಬಾರ್, ಹಿನ್ನೆಲೆ ಗಾಯನದಲ್ಲಿ ಶ್ರೀಮತಿ ಕೆ. ಎಸ್. ಸುರೇಖಾ, ಬೆಂಗಳೂರೂ, ಕರ್ನಾಟಕ ಸಂಗೀತದಲ್ಲಿ ವಿದ್ವಾನ್ ಕೆ. ವಿ ರಮಣ್ ಹಾಗೂ ಡಾ| ಶ್ರಾವ್ಯ ಚಿಪ್ಲುಂಕರ್, ಭರತನಾಟ್ಯದಲ್ಲಿ ವಿದುಷಿ ಮೋನಿಕಾ ರಾವ್, ಕೊಳಲಿನಲ್ಲಿ ಶ್ರೀ ಸುಬ್ರಾಯ ಭಂಡಾರಿ, ತಬಲಾದಲ್ಲಿ ಶ್ರೀ ರಾಘವೇಂದ್ರ ಹೆಗಡೆ, ಕೀಬೋರ್ಡನಲ್ಲಿ ಶ್ರೀ ಪ್ರಕಾಶ್ ರಾವ್, ಗಿಟಾರ್‌ನಲ್ಲಿ ಶ್ರೀ ಅನುಜ್, ಚಿತ್ರ ಕಲೆಯಲ್ಲಿ ಶ್ರೀ ಮಂಜುನಾಥ ಮೈಯ್ಯ, ಶ್ರೀ ಸುಪ್ರೀತ್ ಹಾಗೂ ಕು. ಮೆಘನಾ ಇವರ ಕೊಡುಗೆ ಶ್ಲಾಘನೀಯ. ಇವರ ಗರಡಿಯಲ್ಲಿ ಪಳಗಿದ ಸಾಕಷ್ಟು ವಿದ್ಯಾರ್ಥಿಗಳು ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.

ಈ ದಶಮಾನ ಸಂಭ್ರಮದ ಸಂದರ್ಭದಲ್ಲಿ ಈ ಕುಂದಾಪುರದ ಜನತೆಗೆ ಇನ್ನೊಂದು ಕೊಡುಗೆಯಾಗಿ ವೈಯಲಿನ್ ವಾದನದ (ಕರ್ನಾಟಕ ಶಾಸ್ತ್ರೀಯ) ತರಗತಿ ಪ್ರಾರಂಬಿಸಲಾಗುತಿದೆ. ಈ ತರಗತಿಯನ್ನು ಹೆಸರಾಂತ ಕಲಾವಿದ ವಿದ್ವಾನ್ ಜಿ. ರವಿಕುಮಾರ್ ಮೈಸೂರು ಇವರು ನಡೆಸಿಕೊಡಲಿದ್ದಾರೆ.

ಮೂಲತಃ ಮೈಸೂರಿನವರಾದ ವಿದ್ವಾನ್ ಜಿ. ರವಿಕುಮಾರ್ ಮೈಸೂರು ಇವರು ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸದಾರ ಪಿಟೀಲು ವಾದಕ ವಿದ್ವಾನ್ ಟಿ. ಗೋವಿಂದರಾಜು ಮೊದಲಿಯಾರ್ ಮತ್ತು ಶ್ರೀಮತಿ ರಾಜೇಶ್ವರಿ ಗೋವಿಂದರಾಜು ಮೊದಲಿಯಾರ್ ದಂಪತಿಯ ಸುಪುತ್ರ. ಇವರು ತಮ್ಮ ಕಲಾಕುಟುಂಬದಲ್ಲಿ ಬೆಳೆದು ತಮ್ಮ ತಂದೆ, ವಿದ್ವಾನ್ ಟಿ. ಗೋವಿಂದರಾಜು ಮೊದಲಿಯಾರ್ ಅವರಲ್ಲಿ ವಯಲಿನ್‌ನಲ್ಲಿ ಜೂನಿಯರ್ ಹಾಗೂ ಸೀನಿಯರ್ ಅನ್ನು ಮುಗಿಸಿ, ನಂತರ ವಿದ್ವಾನ್ ಹೆಚ್. ಕೆ. ನರಸಿಂಹ ಮೂರ್ತಿ ಅವರಲ್ಲಿ ವಿದ್ವತ್ ಅನ್ನು ಪೂರ್ಣಗೊಳಿಸಿರುತ್ತಾರೆ. ತಮ್ಮ ತವರು ನೆಲದ ಬಾಂಧವ್ಯದಲ್ಲಿದ್ದು ಕೊಂಡೇ ಉಡುಪಿಯಲ್ಲಿ ವೃತ್ತಿ ನಡೆಸುತ್ತಿದ್ದಾರೆ. ಇವರು 1997ರಲ್ಲಿ ಡಾ| ಕೋಟ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯ ತಂಡದಲ್ಲಿ ಪಿಟೀಲು ವಾದಕರಾಗಿ ಸೇರ್ಪಡೆಗೊಂಡರು. ಯಕ್ಷಗಾನಬ್ಯಾಲೆ, ಭರತನಾಟ್ಯ ಹಾಗೂ ಸಂಗೀತ ತಂಡದೊಂದಿಗೆ ಪಿಟೀಲುವಾದಕರಾಗಿ ಪ್ರಪಂಚದ ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ. ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಸೋಲೋ ಹಾಗೂ ಪಕ್ಕವಾದ್ಯಗಳಲ್ಲಿ ಪಿಟೀಲುವಾದನವನ್ನು ನುಡಿಸಿದ್ದಾರೆ.

ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಗಳನ್ನು ಮಾಡಿದ್ದಾರೆ. ಹರಿಯರಪುರದ ಸಂಗೀತ ಸಂಸ್ಥೆಯೊಂದು ಇವರಿಗೆ ನಾದಲಯಾನಂದ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. ಇವರು ಉಡುಪಿಯಲ್ಲೊಂದು ವಯೋಲಿನ್ ತರಬೇತಿ ಕೇಂದ್ರ ಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿದ ನಿನಾದ ಮ್ಯೂಸಿಕ್ ಅಕಾಡೆಮಿ(ರಿ.) ಯಶಸ್ವಿಯಾಗಿ ಮುಂದುವರಿಯುತ್ತಾ ತನ್ನ ಸಾರ್ಥಕತೆಯ ಹನ್ನೊಂದನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇವರು ಇನ್ನು ಮುಂದೆ ಕುಂದಾಪುರದ ಪ್ರತಿಷ್ಟಿತ ಸಂಸ್ಥೆಯಾದ ಸಾಧನದಲ್ಲಿ ತಮ್ಮ ವಯಲಿನ್ ತರಗತಿಗಳನ್ನು ನಡೆಸಿಕೊಡಲಿದ್ದಾರೆ.

Exit mobile version