Kundapra.com ಕುಂದಾಪ್ರ ಡಾಟ್ ಕಾಂ

ಡಿ. 22-23: ನಾಗೂರಿನಲ್ಲಿ ಅದ್ದೂರಿ ಸಾಂಸ್ಕೃತಿಕ ಉತ್ಸವ – ಕುಸುಮಾಂಜಲಿ 2018

ಕೆರೆಮನೆ ಶಿವಾನಂದ ಹೆಗಡೆ ‘ಕುಸುಮಾಶ್ರೀ’ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಆಯೋಜಿಸುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕುಸುಮಾಂಜಲಿಯ ಐದನೇ ಆವೃತ್ತಿ ‘ಕುಸುಮಾಂಜಲಿ-2018’ ಡಿಸೆಂಬರ್ 22 ಹಾಗೂ 23 ರಂದು ಎರಡು ದಿನಗಳ ಕಾಲ ನಾಗೂರಿನಲ್ಲಿ ಬೆಳಗ್ಗೆ 10 ರಿಂದ ರಾತ್ರಿ 10:30 ರವರೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿಶೇಷ ಸಾಂಸ್ಕೃತಿಕ ನೃತ್ಯ ವೈಭವ, ದಿಕ್ಸೂಚಿ ಭಾಷಣ, ‘ಕುಸುಮಾಶ್ರೀ’ ಪ್ರಶಸ್ತಿ ಪ್ರಧಾನ, ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ದಿಕ್ಸೂಚಿ ಭಾಷಣಕಾರರಾಗಿ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎನ್. ಸಂತೋಷ ಹೆಗ್ಡೆ ಆಗಮಿಸಲಿದ್ದಾರೆ. ಈ ವರ್ಷ ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಾಶ್ರೀ’ ಪ್ರಶಸ್ತಿಯನ್ನು ಕೆರೆಮನೆ ಶಿವಾನಂದ ಹೆಗಡೆಯವರಿಗೆ ಯಕ್ಷಗಾನ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಪರಿಗಣಿಸಿ ಪ್ರದಾನ ಮಾಡಲಾಗುವುದು.

ಪ್ರಸಿದ್ದ ಕುಚಿಪುಡಿ ಪ್ರವೀಣೆ ಹಾಗೂ ನೃತ್ಯ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿ ಹಾಗೂ ತಂಡ ಬೆಂಗಳೂರು, ಇವರಿಂದ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದೆ. ಕಲಾತ್ಮಕ ಹಾಗೂ ಸಾಂಸ್ಕೃತಿಕ ಮೌಲ್ಯಗಳಿರುವ ಅಪರೂಪದ ಚಿತ್ರಕಲೆಗಳ ಸಂಗ್ರಹ ಹಾಗೂ ಪ್ರದರ್ಶನದ ಪೆಟಲ್ಸ್ ಆರ್ಟ ಗ್ಯಾಲರಿ ಲೋಕಾರ್ಪಣಗೊಳ್ಳಲಿದೆ.

‘ಕುಸುಮಾಂಜಲಿ-2018’ ರ ಪೂರ್ವಭಾವಿಯಾಗಿ ನಡೆದ ಸಂಗೀತ ಸ್ಪರ್ಧೆ ಗಾನಕುಸುಮ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮವು ನಡೆಯಲಿದ್ದು, ನಂತರ ಗಾನಕುಸುಮ ಪ್ರಶಸ್ತಿಯನ್ನು ನೀಡಲಾಗುವುದು.

ಕೆರೆಮನೆ ಶಿವಾನಂದ ಹೆಗಡೆ ತಂಡದಿಂದ ವಿಶೇಷ ಯಕ್ಷಗಾನ ಪ್ರದರ್ಶನ ನಡೆಯಲಿದೆ. ‘ಕುಸುಮ ಫೌಂಡೇಶನ್’ನ ಒಂದು ಘಟಕವಾದ ‘ಬ್ಲೋಸಮ್ ಸ್ಕೂಲ್ ಆಪ್ ಮ್ಯೂಸಿಕ್ & ಡಾನ್ಸ್’ ನ ವಿದ್ಯಾರ್ಥಿಗಳಿಂದ ವಿಶೇಷ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

‘ಕುಸುಮ ಫೌಂಡೇಶನ್’ನ ದತ್ತು ಶಾಲೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗೂರು ಕನ್ನಡ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಇನ್ನು ಅನೇಕ ವಿಶೇಷತೆಗಳಿದ್ದು ಕಾರ್ಯಕ್ರಮವನ್ನು ಸ್ಥಳೀಯರ ಸಹಕಾರದಿಂದ ಅದ್ದೂರಿಯಾಗಿ ನಡೆಯಲಿದ್ದು ಎರಡು ದಿನಗಳ ಕಾಲ ಸುಮಾರು 3000 ರಿಂದ 5,000 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮದ ಪ್ರವರ್ತಕರಾದ, ಕುಸುಮ ಸಂಸ್ಥೆಯ ಆಡಳಿತ ನಿರ್ದೇಶಕ ನಳಿನ ಕುಮಾರ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

Exit mobile version