ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ಪಾರ್ವತಿ ಜಿ.ಐತಾಳ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2018ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ಮಲೆಯಾಳ ಮತ್ತು ತುಳು-ಹೀಗೆ ಐದು ಭಾಷೆಗಳಲ್ಲಿ ಬರೆಯುವ ಪಾರ್ವತಿ ಐತಾಳ್ ಈ ಭಾಷೆಗಳ ನಡುವೆ ಪ್ರಸಿದ್ಧ ಲೇಖಕರ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರಲ್ಲದೆ, ಸ್ವತಂತ್ರವಾಗಿಯೂ ಸಣ್ಣಕಥೆ, ಕಾದಂಬರಿ, ವಿಮರ್ಶೆ, ನಾಟಕ ಮತ್ತು ವೈಚಾರಿಕ ಪ್ರಬಂಧ ಕೃತಿಗಳನ್ನು ಪ್ರಕಟಿಸಿದ್ದಾರೆ. ಇದುವರೆಗೆ 40 ಅನುವಾದಿತ ಕೃತಿಗಳು, 23 ಸ್ವತಂತ್ರ ಕೃತಿಗಳು, ನಾಲ್ಕು ಸಂಪಾದಿತ ಮತ್ತು ಸಹಲೇಖಕರಾಗಿ ೯ಕೃತಿಗಳನ್ನು ಪ್ರಕಟಿಸಿದ್ದಾರೆ. ೮ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಾರ್ಚ್ 3 ರಂದು ಜರಗಲಿರುವ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಇವರು ಆಯ್ಕೆಯಾಗಿದ್ದಾರೆ.