ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುದೂರು ತಪ್ಪೆಗುಡ್ಡೆಯಲಿ ಗಿರಿಜಾ ಮಂಜಯ್ಯ ಶೆಟ್ಟಿ ಮತ್ತು ಮಕ್ಕಳು ಏರ್ಪಡಿಸಿದ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಸೇವೆ ಆಟದ ಮೊದಲು ನಿವೃತ್ತ ಯೋಧ, ಅಂಕಣಕಾರ ಬೈಂದೂರು ಚಂದ್ರಶೇಖರ ನಾವಡ ಮತ್ತು ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಳದ ಮೊಕ್ತೇಶರ ಸಚ್ಚಿದಾನಂದ ಚಾತ್ರರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಚ್ಚಿದಾನಂದ ಚಾತ್ರ ಮಾತನಾಡಿ ದೈವಭಕ್ತಿ , ದೇಶಭಕ್ತಿ ಹಾಗೂ ಪ್ರಾಮಾಣಿಕತೆಯಿಂದ ನಡೆಸುವ ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸು ಸಿಗುತ್ತದೆ ಎಂದರು. ಯಕ್ಷಗಾನ ನಮ್ಮ ಪ್ರಾಚೀನ ಕಲೆಯಾಗಿದ್ದು ಅದನ್ನು ಪ್ರೋತ್ಸಾಹಿಸುವಂತೆ ಅವರು ಕರೆ ನೀಡಿದರು.
ಬಳಿಕ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ ನಮ್ಮ ದೇಶದ ಸೇನೆಯಲ್ಲಿ ಇಂದಿಗೂ ಕೃಷಿ ಹಾಗೂ ಗ್ರಾಮೀಣ ಹಿನ್ನೆಲೆಯ ಯೋಧರೆ ಅಧಿಕ ಸಂಖ್ಯೆಯಲ್ಲಿದ್ದಾರೆ. ಅನ್ನ ಕೊಡುವ ರೈತ ಹಾಗೂ ಸೈನಿಕರ ತ್ಯಾಗದಿಂದಲೇ ಇಂದು ದೇಶ ಸುಭದ್ರವಾಗಿದೆ. ರೈತ ಮತ್ತು ಯೋಧರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸದಿಂದ ದೇಶ ವಿಶ್ವ ಶಕ್ತಿಶಾಲಿಯಾಗಲಿದೆ ಎಂದು ಹೇಳಿದರು.
ಸಚ್ಚಿದಾನಂದ ಚಾತ್ರರು ಕುಟುಂಬದವರಿಗೆ ಶ್ರೀ ದೇವಿಯ ಪ್ರಸಾದ ನೀಡಿ ಗೌರವಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನ ಪ್ರಾಧ್ಯಾಪಕ ರಘು ನಾಯ್ಕ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಬಳಿಕ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ ದೇವಿ ಮಹಾತ್ಮೆ ಕಾಲಮಿತಿ ಯಕ್ಷಗಾನ ಪ್ರಸ್ತುತ ಪಡಿಸಲಾಯಿತು.