Kundapra.com ಕುಂದಾಪ್ರ ಡಾಟ್ ಕಾಂ

ಚಂದ್ರಶೇಖರ್ ಪಾಲೆತ್ತಾಡಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೊಡಮಾಡುವ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಮುಂಬೈನ ಪ್ರತಿಷ್ಠಿತ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಆಯ್ಕೆಯಾಗಿದ್ದಾರೆ

ಈ ಬಗ್ಗೆ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ತಿಳಿಸಿದರು.

ದಕ್ಷಿಣಕನ್ನಡ ಜಿಲ್ಲೆಯ ಮಲೆನಾಡು ಪುತ್ತೂರಿನ ಬಜತ್ತೂರು ಗ್ರಾಮದವರಾದ ಚಂದ್ರಶೇಖರ್ ಪಾಲೆತ್ತಾಡಿಯವರು ರೈತಪರ ಚಳವಳಿ, ನಾಟಕ,ಯಕ್ಷಗಾನ, ಭಾಷಣ ಹೀಗೆ ನಾನಾ ರೂಪದಲ್ಲಿ ತನ್ನ ಬಹುತ್ವಗಳಲ್ಲಿ ಕಾಣಿಸಿಕೊಂಡವರು. ವಡ್ಡರ್ಸೆ ರಘುರಾಮ ಶೆಟ್ಟರಂತೆಯೇ ಪತ್ರಿಕಾರಂಗದಲ್ಲಿ ಭಿನ್ನ ದೃಷ್ಠಿಕೋನದೊಂದಿಗೆ ಸಾಗಿದ ಇವರು, ಹೊಸದಿಗಂತ, ಮಂಗಳೂರು ಮಿತ್ರ, ಕರ್ನಾಟಕ ಮಲ್ಲ, ಉದಯದೀಪ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ಅನಂತರ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದರು. ಮರಾಠಿ ಮಣ್ಣು ಮುಂಬೈನಲ್ಲಿ ಕನ್ನಡದ ಕಂಪನ್ನು ಧಟ್ಟವಾಗಿ ಹಲವಾರು ಸವಾಲುಗಳ ನಡುವೆಯೂ ಪಸರಿಸಿದ ಪಾಲೆತ್ತಾಡಿಯವರು ಪರರಾಜ್ಯವೊಂದರಲ್ಲಿ ಕನ್ನಡ ಭಾಷೆಯ ಪ್ರಾದೇಶಿಕ ಪತ್ರಿಕೆಯೊಂದು ಆ ರಾಜ್ಯದ ಪತ್ರಿಕೆಗಳಿಗೆ ಸರಿಸಮಾನವಾಗಿ ಪ್ರಸರಣವನ್ನ ಹೊಂದುವಲ್ಲಿ ಶ್ರಮಿಸಿದ್ದಾರೆ. ಪತ್ರಿಕಾರಂಗದಲ್ಲಿ ಇವರ ಈ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದರು.

ಆ.4ರಂದು ಅಪರಾಹ್ನ 2:30ರಿಂದ ಬ್ರಹ್ಮಾವರದ ಬಂಟರ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಸಾಮಾಜಿಕ ಹೋರಾಟಗಾರರ ರವೀಂದ್ರನಾಥ ಶ್ಯಾನುಭಾಗ್ ಅವರು ಪ್ರಶಸ್ತಿ ಪ್ರದಾನಗೈಯಲಿದ್ದಾರೆ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವವರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಬಿ.ಎಲ್. ಶಂಕರ್, ಜಯಪ್ರಕಾಶ್ ಹೆಗ್ಡೆಯವರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಪ್ರತಿಕೋದ್ಯಮ ಎನ್ನುವ ವಿಚಾರದ ಕುರಿತು ಮಾಧ್ಯಮ ಸಂವಾದ ನಡೆಯಲಿದೆ ಎಂದರು.

ಕಾರ್ಯಕ್ರಮದ ಸಂಚಾಲಕ ವಸಂತ್ ಗಿಳಿಯಾರ್, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ, ಖಜಾಂಚಿ ಮೋಹನ ಉಡುಪ ಹಾಗೂ ಸದಸ್ಯರಾದ ಕೆ.ಜಿ.ವೈಧ್ಯ, ಹರೀಶ್ ಕಿರಣ್ ತುಂಗ, ಪ್ರವೀಣ್ ಮುದ್ದೂರು ಮುಂತಾದವರು ಉಪಸ್ಥಿತರಿದ್ದರು.

Exit mobile version