ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪ್ರ ಕನ್ನಡದ್ ತಾಕತ್ತೇ ಹಾಂಗ್ ಕಾಣಿ. ಅದ್ರ ಹೆಸ್ರಂಗ್ ಎಂತ ಮಾಡುಕ್ ಹ್ವಾರೂ ಸುದ್ದಿ ಆತ್ತ್. ಅಂತದ್ರಗೆ ನಮ್ ಯುವಕ್ರೆಲ್ಲಾ ಸೇರ್ಕಂಡ್ ನಮ್ ಕುಂದಾಪ್ರ ಕನ್ನಡಕ್ಕೂ ಒಂದು ದಿನು ಇಲ್ರಿ, ಕುಂದಾಪ್ರ ಭಾಷಿ ಮಾತಾಡ್ವರ್ ಯಾರ್ ಯಾರ್ ಎಲ್ಲೆಲ್ಲಿದ್ರೋ ಅಲ್ಲಲ್ಲೇ ಕುಂದಾಪ್ರ ಕನ್ನಡದ್ ಸಲುವಾಯಿ ಒಂಚೂರ್ ಆರೂ ಸಮಯ್ ಕೊಡ್ಲಿ ಅಂದೇಳಿ ಆಟಿ ಅಮಾಸಿ ದಿನವೇ ’ವಿಶ್ವ ಕುಂದಾಪ್ರ ಕನ್ನಡ ದಿನ’ಅಂದೇಳಿ ಮಾಡುಕ್ ಹೊರ್ಟಿರ್. ನಮ್ ಕುಂದಾಪ್ರದರ್ ಬಗ್ಗೆ ಕೇಣ್ಕಾ? ಸು ಅಂದ್ರೆ ಸುಕ್ಕಿನುಂಡಿ ಅಂತ್ರ್. ಅಂತದ್ರಗ್ ಕುಂದಾಪ್ರ ಕನ್ನಡ ದಿನು ಅಂದಂದೆ ಸೈ, ಬ್ರಹ್ಮಾವರದಿಂದ್ ಬೈಂದೂರು ಶಿರೂರ್ ತನಕ್ ಎಲ್ಲಾ ಕಡೆ ಕಾರ್ಯಕ್ರಮ ಮಾಡುಕ್ ತಯಾರಿ ಮಾಡ್ಕಂತಿದ್. ಸೋಶಿಯಲ್ ಮೀಡಿಯಾದಗಂತೂ ಭಾರಿ ಸದ್ದ್ ಮಾಡ್ತಿತ್.
ವಿಶ್ವ ಕುಂದಾಪ್ರ ಕನ್ನಡ ದಿನ:
ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಕನ್ನಡ ಭಾಷೆಯ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ರೂಪವೆನಿಸಿಕೊಂಡಿರುವ ಕುಂದಾಪ್ರ ಕನ್ನಡ ಸರಿಸುಮಾರು ಬ್ರಹ್ಮಾವರದಿಂದ ಶಿರೂರಿನ ತನಕ ಮೂರು ತಾಲೂಕುಗಳಲ್ಲಿ ವ್ಯಾಪಿಸಿಕೊಂಡಿದೆ. ಕುಂದಾಪ್ರ ಕನ್ನಡ ಭಾಷಿಕರು ರಾಜ್ಯ ರಾಜಧಾನಿ ಸೇರಿದಂತೆ ಪ್ರಪಂಚದ ವಿವಿಧ ದೇಶಗಳಲ್ಲಿ ನೆಲೆನಿಂತಿದ್ದಾರೆ. ಇಷ್ಟ ಮಧ್ಯೆಯೂ ಭಾಷೆಗೊಂದು ಐಡೆಂಟಿಟಿ ಬೇಕು. ಹಾಸ್ಯದ ಕಾರಣಕ್ಕಾಗಿ ಮಾತ್ರ ಬಳಸುವ ಭಾಷೆ, ಕುಂದಾಪುರಿಗರ ಬದುಕಿನ ಭಾಷೆಯೂ ಹೌದು ಎಂಬುದನ್ನು ವಿಶ್ವಕ್ಕೆ ಸಾರಬೇಕು ಎಂಬ ಸದುದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಮುನ್ನುಡಿ ಬರೆಯಲಾಗಿದೆ.

ಅದ್ಭುತ ಪ್ರತಿಕ್ರಿಯೆ:
ಭಾಷೆ ಬಗೆಗಿನ ಅಭಿಮಾನವೇ ಅಂತದ್ದು. ಅದು ಭಾಷಿಕರನ್ನು ಭಾವನಾತ್ಮಕವಾಗಿ ಒಗ್ಗೂಡಿಸುತ್ತದೆ. ಕುಂದಪ್ರ ಕನ್ನಡ ದಿನದ ವಿಚಾರದಲ್ಲಿ ಅದು ಅಕ್ಷರಶಃ ಸತ್ಯವಾಗಿದೆ. ಸಮಾನ ಮನಸ್ಕರೊಂದಿಷ್ಟು ಜನ ಜೊತೆಗೂಡಿ ಹುಟ್ಟುಹಾಕಿದ ಒಂದು ಸಣ್ಣ ಆಲೋಚನೆ ಇಂದು ಅಭಿಯಾನದ ರೂಪ ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಧಾನಕ್ಕೆ ವೈರಲ್ ಆಗುತ್ತಿದೆ. ವಿಶೇಷವಾಗಿ ಯುವ ಜನರು ಅಂತಹದ್ದೊಂದು ಕಾರ್ಯದಲ್ಲಿ ಸ್ವಪ್ರೇರಣೆಯಿಂದಲೇ ಮುನ್ನುಗುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕುಂದಾಪ್ರ ಕನ್ನಡ ದಿನ ಕಾವು ಪಡೆಯುತ್ತಿದ್ದಂತೆ ಲೋಗೋ ಮುಂತಾದವುಗಳನ್ನು ಸ್ವಯಂ ಸ್ಪೂರ್ತಿಯಿಂದ ತಯಾರಿಸುತ್ತಿದ್ದಾರೆ. ಹಲವಡೆ ಕಾರ್ಯಕ್ರಮಗಳು ಸಿದ್ಧತೆ ನಡೆಯುತ್ತಿದೆ. ಕುಂದಾಪ್ರ ಕನ್ನಡಕ್ಕಾಗಿ ಊರ್ಮನಿ ಅಂಗಡಿ ಅವರ ಟಿ – ಶರ್ಟ್‌ಗಳು ಕೂಡ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಕುಂದಾಪ್ರ ಡಾಟ್ ಕಾಂ.
ಆಷಾಡ ಅಮವಾಸ್ಯೆ ದಿನ ಆಚರಣೆ:
ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಪ್ರತಿವರ್ಷ ಆಷಾಡ ಅಮಾವಾಸ್ಯೆ (ಕರ್ಕಾಟಕ ಅಮವಾಸ್ಯೆ -) ದಿನ ಅಗಸ್ಟ್ 1ರಂದು ಆಚರಿಸಲು ನಿರ್ಧರಿಸಲಾಗಿದೆ. ಪ್ರಾದೇಶಿಕ ಹಬ್ಬಗಳೊಂದಿಗಿನ ಭಾಷೆಯ ನಂಟು ಹೆಚ್ಚಿರುವ ಕಾರಣಕ್ಕೆ ಹಬ್ಬದ ದಿನವೇ ಕಾರ್ಯಕ್ರಮ ಆಯೋಜಿಸುವ ಇರಾದೆ ಯುವ ಮನಸ್ಸುಗಳದ್ದು. ಕರ್ನಾಟಕ ಅಮವಾಸ್ಯೆಯಂದು ಮರವಂತೆ ಹಾಗೂ ಬೈಂದೂರಿನ ಸೋಮೇಶ್ವರದಲ್ಲಿ ಹಬ್ಬ ಹಾಗೂ ಸಮುದ್ರ ಸ್ನಾನ ಜೋರಾಗಿರುತ್ತೆ. ಅಂದೇ ಕುಂದಾಪ್ರ ಕನ್ನಡ ದಿನ ಆಚರಿಸಿದರೆ, ಆಚರಣೆಗೂ ಒಂದು ಅರ್ಥ ಬರುತ್ತೆ ಎನ್ನುವ ಉದ್ದೇಶ ಅವರದ್ದು. ಕುಂದಾಪ್ರ ಡಾಟ್ ಕಾಂ.
ಭಾಷೆ ಗಟ್ಟಿಗೊಳ್ಳಲಿ. ಆಚರಣೆ ಯಶಸ್ವಿಯಾಗಲಿ:
ಕುಂದಾಪ್ರ ಕನ್ನಡ ಭಾಷೆಗೆ ನಮ್ಮ ಹಿರಿಕರ ಕೊಡುಗೆ ದೊಡ್ಡದಿದೆ. ಅದು ಅಷ್ಟಾಗಿ ಗ್ರಾಂಥಿಕ ರೂಪ ಪಡೆದುಕೊಳ್ಳದೇ ಇದ್ದರೂ, ಆಡುಭಾಷೆಯಾಗಿ ಉಳಿದಿದೆ. ಆದರೆ ಕೆಲವೊಂದಿಷ್ಟು ವರ್ಷಗಳ ಈಚೆಗೆ ಕುಂದಾಪ್ರ ಕನ್ನಡ ದಾಖಲೀಕರಣ ಪ್ರಕ್ರಿಯೆಗಳು ನಡೆದಿವೆ. ನಿಘಂಟು, ಜಾನಪದ ಕೋಶಗಳಲ್ಲಿ ಕುಂದಾಪ್ರ ಕನ್ನಡವನ್ನು ದಾಖಲಿಸುವ ಕಾರ್ಯ ನಡೆದಿದೆ. ಕುಂದಾಪ್ರ ಕನ್ನಡದ ಸಾಹಿತ್ಯ, ಹಾಡು, ಸಿನೆಮಾ ಭಾಷೆಯ ಸೊಬಗನ್ನು ಹೆಚ್ಚಿಸುತ್ತಲೇ ಯುವಜನರಿಗೆ ಆಪ್ತವಾಗುವಂತೆ ಮಾಡಿದೆ. ಆದರೆ ಅಷ್ಟಕ್ಕೇ ನಿಂತರೆ ಸಾಲದು. ಭಾಷಾ ಸಂಪತ್ತು ಸಂಪನ್ನಗೊಳಿಸುವ ಹಾಗೂ ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆಗಳು ಹೆಚ್ಚೆಚ್ಚು ನಡೆಯಬೇಕಿದೆ. ಆ ನೆಲೆಯಲ್ಲಿ ಕುಂದಾಪ್ರ ಕನ್ನಡ ದಿನಾಚರಣೆ ಒಂದು ವೇದಿಕೆಯಾಗಲಿ ಎಂಬುದು ’ಕುಂದಾಪ್ರ ಡಾಟ್ ಕಾಂ’ನ ಆಶಯ. ಕುಂದಾಪ್ರ ಡಾಟ್ ಕಾಂ.
ಕುಂದಾಪ್ರ ಕನ್ನಡವನ್ನು ಹಾಸ್ಯದ ನೆಲಗಟ್ಟಿನಲ್ಲಷ್ಟೇ ನೋಡುತ್ತಿದ್ದೇವೆ. ಆದರೆ ಅದನ್ನು ಮೀರಿ ಅದು ಬದುಕಿನ ಭಾಷೆಯೂ ಹೌದೆಂಬುದು ವಿಶ್ವಕ್ಕೆ ತಿಳಿಯಬೇಕು ಮತ್ತು ವಿಶ್ವದಾದ್ಯಂತ ಇರುವ ಕುಂದಾಪ್ರ ಕನ್ನಡಿಗರು ಒಂದು ದಿನವಾದರೂ ಭಾಷೆಗಾಗಿ ಮೀಸಲಿರಿಸಬೇಕು ಎಂಬ ಉದ್ದೇಶದಿಂದ ಒಂದಿಷ್ಟು ಸಮಾನ ಮನಸ್ಕರೊಂದಿಗೆ ಹುಟ್ಟಿದ ಆಲೋಚನೆ ಕುಂದಾಪ್ರ ಕನ್ನಡ ದಿನ. ಇಲ್ಲಿ ಯಾರೂ ನಾಯಕರಿಲ್ಲ. ಯಾರಿಗೂ ನಿರ್ದೇಶನ ನೀಡುವುದಿಲ್ಲ. ಗುರಿಯೊಂದೇ ನಾಯಕ. ಅವರವರ ಅನುಕೂಲಕ್ಕೆ ತಕ್ಕಂತೆ ಈ ದಿನ ಒಂದಿಷ್ಟು ಕುಂದಾಪ್ರ ಕನ್ನಡದ ಬಗ್ಗೆ ಚರ್ಚೆ ನಡೆಯಲಿ ಎಂಬುದಷ್ಟೇ ನಮ್ಮೇಲ್ಲರ ಆಶಯ – ವಸಂತ ಗಿಳಿಯಾರ್, ಪತ್ರಕರ್ತರು.