Kundapra.com ಕುಂದಾಪ್ರ ಡಾಟ್ ಕಾಂ

ಕತಾರ್‌ನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ/ಕತಾರ್: ಎಲ್ಲಾದರೂ ಇರು. ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಉದ್ಯೋಗಕ್ಕಾಗಿ ತಾನು ನೆಲೆನಿಂತ ದೇಶದಲ್ಲಿಯೇ ಕನ್ನಡದ ಕಂಪನ್ನ ಪಸರಿಸುತ್ತಾ, ಹೊರದೇಶದ ಕನ್ನಡಿಗರಲ್ಲಿನ ಭಾಷಾಭಿಮಾನವನ್ನು ಹುರಿದುಂಬಿಸುತ್ತಾ ಕನ್ನಡದ ಕಟ್ಟಾಳುವಾಗಿ ಬೆಳೆದಿದ್ದಾರೆ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು.

ಕಳೆದ 13 ವರ್ಷಗಳಿಂದ ಇಂಜಿನಿಯರ್ ಆಗಿ ಕತಾರಿನಲ್ಲಿ ನೆಲೆಸಿರುವ ಅವರು ಪ್ರಸ್ತುತ ಇಂಡಿಯನ್ ಕಮ್ಯುನಿಟಿಬೆ ನ್ವೆಲೆಂಟ್ (ಐ.ಸಿ.ಬಿ.ಎಫ್) ಫೋರಂ ಜಾಯಿಂಟ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಾದ್ದಾರೆ.

ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಬೈಂದೂರು ತಗ್ಗರ್ಸೆಯ ಗುರುದತ್ತ ಶೇರುಗಾರ್ ಹಾಗೂ ಮೂಕಾಂಬು ದಂಪತಿ ಪುತ್ರರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮಯ್ಯಾಡಿಯ ಧ.ಮ.ಹಿ.ಪ್ರಾ ಶಾಲೆಯಲ್ಲಿಯೂ, ಪ್ರೌಢ ಶಿಕ್ಷಣವನ್ನು ದಾವಣಗೆರೆ ಬಾಪೂಜಿ ಫ್ರೌಢಶಾಲೆಯಲ್ಲಿಯೂ ಬಳಿಕ ದಾವಣಗೆರೆಯಲ್ಲಿಯೇ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಅವರು ರಾಷ್ಟ್ರೀಯ ಹೆದ್ದಾರಿ-8ರಲ್ಲಿ ಮೇಲುಸ್ತುವಾರಿ ಅಭಿಯಂತರಾಗಿ ಸೇವೆಸಲ್ಲಿಸಿ ಬಳಿಕ ಪ್ರಸ್ತುತ ಕತಾರ್ ನ ಗಲ್ಪಾರ್ಆಲ್ಮಿಸ್ನಾದ್ ಕಂಪನಿಯಲ್ಲಿಅಭಿಯಂತರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಕತಾರಿನಲ್ಲಿ ಕನ್ನಡ ಸಿನೆಮಾ ಪ್ರದರ್ಶಕ:
ಕನ್ನಡದ ಸಿನಿಮಾಗಳಾದ ‘ಒಂದು ಮೊಟ್ಟೆಯ ಕಥೆ, ‘ಕಾಫಿತೋಟ’, ಕೋಟಿಗೊಬ್ಬ-2, ‘ಹೆಬ್ಬುಲಿ’, ‘ಕಿರಿಕ್ ಪಾರ್ಟಿ’, ‘ದೊಡ್ಮನೆ ಹುಡ್ಗ’, ‘ಚೌಕ’, ‘ರಾಜಕುಮಾರ’, ‘ಮಾಸ್ಲೀಡರ್’, ‘ರಂಗಿತರಂಗ’, ‘ರುಸ್ತುಂ’, ‘ಒಂದಲ್ಲಾ ಎರಡಲ್ಲಾ’, ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ‘ನಟ ಸಾರ್ವಭೌಮ’, ‘ಬೆಲ್ ಬಾಟಮ್’, ಗಿರ್ ಗಿಟ್ (ತುಳು ಸಿನಿಮಾ) ಸೇರಿದಂತೆ ಅನೇಕ ಚಿತ್ರಗಳು ಕತಾರಿನಲ್ಲಿ ತೆರೆಕಾಣುವಂತೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕತಾರ್ ನಲ್ಲಿ ಶಿವರಾಜ್ ಕುಮಾರ್ ಅವರ ‘ಮಾಸ್ ಲೀಡರ್’ ಚಿತ್ರದ ‘ದೀಪವೇ ನಿನ್ನ ಕಣ್ಣು’ ಹಾಡಿನ ಚಿತ್ರೀಕರಣದ ಸಂಪೂರ್ಣ ಜವಾಬ್ದಾರಿ ವಹಿಸಿದರು. ಈ ಹಾಡು ಕತಾರ್ ನ ಪ್ರವಾಸೋದ್ಯಮ ಇಲಾಖೆಯ ಮತ್ತು ಭಾರತೀಯ ದೂತವಾಸ ಕೇಂದ್ರದ ಪ್ರಶಂಸೆಗೆ ಭಾಜನವಾಗಿದೆ.

ಕರ್ನಾಟಕ ಚಲನಚಿತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ದಿಗ್ಗಜರನ್ನು ಕತಾರಿಗೆ ಆಹ್ವಾನಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಹಾಗೂ ಗೌರವಿಸುವುದರಲ್ಲಿ ಪ್ರಮುಖಪಾತ್ರ ನಿರ್ವಹಿಸಿದ್ದಾರೆ.

ಈ ವರ್ಷ ಕತಾರ್’ನಲ್ಲಿ ನಡೆದ ಸೈಮಾ ಅವಾರ್ಡ್ ನಲ್ಲಿ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಬೆರೆತು, ಅವರ ಯೋಗಕ್ಷೇಮವನ್ನು ವಿಚಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರೀಯ:
ಹೀಗೆ ನಾಟಕ, ಸಾಂಸ್ಕ್ರತಿಕ ಕಾರ್ಯಕ್ರಮ, ಶೈಕ್ಷಣಿಕ ಹಾಗೂ ಮನೋರಂಜನಾ ಕಾರ್ಯಕ್ರಮದ ಆಯೋಜನೆ, ವಿವಿಧ ಸಂಘ ಸಂಸ್ಥೆಗಳ ಸಮನ್ವಯತೆಯೊಂದಿಗೆ ಕಾರ್ಯಕ್ರಮ ಪ್ರಸ್ತುತಿ, ಕತಾರ್ ಚಲನಚಿತ್ರ ಬಿಡುಗಡೆ ಸೇರಿದಂತೆ ವಿವಿಧ ಗಣ್ಯರ ಕಾರ್ಯಕ್ರಮದ ಪ್ರಮುಖ ಉಸ್ತುವಾರಿ ವಹಿಸಿದ್ದಾರೆ.

ಬರೀ ಮನರಂಜನೆ ಕ್ಷೇತ್ರ ಮಾತ್ರವಲ್ಲದೇ ಸುಬ್ರಹ್ಮಣ್ಯ ಹೆಬ್ಬಾಗಿಲುರವರು, ತಮ್ಮ ಸಂಘಟನೆಗಳ ಮೂಲಕ ಅನಿವಾಸಿ ಭಾರತೀಯರ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಂಡವರಿಗೆ ಆಹಾರ, ವೈದ್ಯಕೀಯ ನೆರವು ಮುಂತಾದ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ.

 

ಕತಾರ್ ಸೇರಿದಂತೆ ಜಾಗತಿಕ ಮಟ್ಟದ ಹಲವಾರು ಸಂಘಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಸುಬ್ರಮಣ್ಯ ಹೆಬ್ಬಾಗಿಲು ಅವರು ಕರ್ನಾಟಕ ಸಂಘ ಕತಾರ್ ಉಪಾಧ್ಯಕ್ಷರಾಗಿ ಹಾಗೂ ಖಜಾಂಚಿಯಾಗಿ, ತುಳುಕೂಟ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಕತಾರ್ ಕರ್ನಾಟಕ ಪ್ರೆಂಡ್ಸ್ ಸದಸ್ಯರಾಗಿದ್ದಾರೆ.

ವಿಶೇಷವೆಂದರೆ, ಇವರು ಕತಾರ್ ನಲ್ಲಿ ಸುಮಾರು 50 ಜನ ಕನ್ನಡಿಗರಿಗೆ ಕೆಲಸವನ್ನು ದೊರಕಿಸಿಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದಿಂದ ಗೌರವ ಧನ ಸಿಗುವಲ್ಲಿ ಪ್ರಮಾಣಿಕ ಪ್ರಯತ್ನ ನಡೆಸಿದ್ದಾರೆ. ದೇಶ-ವಿದೇಶಗಳಲ್ಲಿ ಹಲವಾರು ಸಾಧಕರನ್ನು ಇವರು ಭೇಟಿ ಮಾಡಿದ್ದು, ಇವರ ಪ್ರೀತಿಗೆ ಪಾತ್ರರಾಗಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರ ಮೆಚ್ಚುಗೆ ಗಳಿಸಿರುವುದು ವಿಶೇಷ.

 

ಕೇರಳ ಮತ್ತು ಕೂರ್ಗ್’ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ರೂ 15 ಲಕ್ಷ ಹಣವನ್ನು ಇಂಡಿಯನ್ ಕಮ್ಯೂನಿಟಿ ಬೆನೆವಲೆಂಟ್ ಫೋರಮ್’ನ ವತಿಯಿಂದ ಇವರು ಮತ್ತು ಇವರ ಸದಸ್ಯರು, ಪದಾಧಿಕಾರಿಗಳು ಸೇರಿಕೊಂಡು ಸಿ.ಎಂ ಫಂಡ್’ಗೆ ನೀಡಿದ್ದಾರೆ. ಇತ್ತಿಚೆಗಷ್ಟೇ ಬಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಬಗ್ಗೆ ಸಿಎಂ ಯಡಿಯೂರಪ್ಪನವರೂ ಸಹ ಭೇಟಿಯಾಗಿ ನೆರೆ ಸಂತ್ರಸ್ತರ ನೆರವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಹೀಗೆ ಗ್ರಾಮೀಣ ಭಾಗದಲ್ಲಿ ಜನಿಸಿ ಕತಾರ್ ದೇಶದಲ್ಲಿ ಮಹತ್ವದ ಹುದ್ದೆ ಅಲಂಕರಿಸಿದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ತಾನು ಹುಟ್ಟಿದ ನೆಲದ ಭಾಷೆ ಮತ್ತು ಸಂಸ್ಕೃತಿಯ ಕಂಪನ್ನು ವಿದೇಶಿ ನೆಲದಲ್ಲಿ ಪಸಿರಿಸಿ ಸದಾ ಬೆಳಗುವಂತೆ ಮಾಡುತ್ತಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ಅವರ ಸೇವೆ ಈಗೆಯೇ ಮುಂದುವರಿಯಲಿ ಎಂಬದು ಎಲ್ಲರ ಆಶಯ.

Exit mobile version