ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಬೈಂದೂರು ತಾಲೂಕು ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಹಂತದ ಅನುದಾನ ಮಂಜೂರಾಗಿದ್ದು, ಸೋಮೇಶ್ವರದಲ್ಲಿ ಸೀವಾಕ್, ರೋಪ್ ಬ್ರಿಜ್ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಚಾಲನೆ ದೊರೆಯಲಿದೆ.
ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೊದಲ ಹಂತದಲ್ಲಿ ಸೋಮೇಶ್ವರ ಬೀಚ್ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ರೋಪ್‌ಬ್ರಿಜ್ (ತೂಗು ಸೇತುವೆ) ಶೌಚಾಲಯ, ಸೀವಾಕ್, ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ಕಾಮಗಾರಿಗಳು ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಸೋಮೇಶ್ವರ ಕಡಲ ಕಿನಾರೆ ಬಗ್ಗೆ ಮಾಹಿತಿ ನೀಡಲು ಶಿರೂರಿನಲ್ಲಿ ದೊಡ್ಡ ಸ್ವಾಗತ ಕಮಾನು ನಿರ್ಮಿಸಲಾಗುತ್ತದೆ. ಕಾಮಗಾರಿ ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಎರಡನೇ ಹಂತದ ಕಾಮಗಾರಿಗೆ 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೈಂದೂರು ತಾಲೂಕಿನ ಪ್ರವಾಸಿ ತಾಣಗಳನ್ನೊಮ್ಮೆ ನೋಡಿ (Video)
ಬೈಂದೂರು ತಾಲೂಕಿನ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗಾಗಿ ಬೈಂದೂರಿನ ನಾಗರಿಕರು ಹಾಗೂ ಜನಪ್ರತಿನಿಧಿಗಳು ನಿರಂತರವಾಗಿ ಸರಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಹಾಲಿ ಸಂಸದರಾಗಿರುವ ಬಿ. ವೈ. ರಾಘವೇಂದ್ರ ಅವರು ಕೂಡ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರ ಪರಿಣಾಮ ದೊಡ್ಡ ಮೊತ್ತದ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳ್ಳುತ್ತಿದೆ ಎನ್ನಲಾಗಿದೆ. ಕ್ಷೇತ್ರ ಹಾಲಿ ಶಾಸಕರಾಗಿರುವ ಬಿ. ಎಂ. ಸುಕುಮಾರ ಶೆಟ್ಟಿ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಶ್ರಮಿಸಿದ್ದರೇ, ಈ ಹಿಂದೆ ಶಾಸಕರಾಗಿದ್ದ ಕೆ. ಗೋಪಾಲ ಪೂಜಾರಿ ಅವರ ಶ್ರಮವೂ ದೊಡ್ಡದಿದೆ.
ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸೋಮೇಶ್ವರ ಕಡಲ ಕಿನಾರೆಗೆ ವ್ಯವಸ್ಥಿತ ಸೌಲಭ್ಯ ಕಲ್ಪಿಸುವ ಮೂಲಕ ಪ್ರವಾಸಿಗರಿಗೆ ಇನ್ನಷ್ಟು ಸೌಕರ್ಯ ದೊರಕಿಸಿ ಕೊಡಲು ಸಾಧ್ಯವಾಗುತ್ತದೆ – ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿಗಳು
ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ರೂ.200 ಕೋಟಿ ಅನುದಾನ ಘೋಷಣೆಯಾಗಿದೆ. ಪ್ರಮುಖ ಕಛೇರಿ ಕೆಲಸಗಳು ಸದ್ಯದಲ್ಲೇ ಆರಂಭವಾಗಲಿದೆ. ಬಂದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲಾಗುತ್ತದೆ. – ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ
ಕನಸಿನ ಬೈಂದೂರು ಯೋಜನೆ ಸಾಕಾರದತ್ತ… (Video)
ಸೋಮೇಶ್ವರಕ್ಕೆ ಜಿಲ್ಲಾಧಿಕಾರಿ ಭೇಟಿ:
ಮೊದಲ ಹಂತದ ಕಾಮಗಾರಿ ಮಂಜೂರಾಗಿರುವ ಬೈಂದೂರು ಸೋಮೇಶ್ವರ ಕಡಲತೀರಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಬಂದೂರು ತಹಶೀಲ್ದಾರ ಬಸಪ್ಪ ಪಿ. ಪೂಜಾರ್, ಕೆಆರ್‌ಡಿಎಲ್ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಎಡಿ ಚಂದ್ರಶೇಖರ, ಎಇಇ ಪ್ರಭಾಕರ, ಪಿಡಬ್ಲ್ಯೂಡಿ ಎಇಇ ರಾಘವೇಂದ್ರ, ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಬೆಸುಗೆ ಫೌಂಡೇಶನ್ ಅಧ್ಯಕ್ಷ ಕುಂಜಾಲು ವೆಂಕಟೇಶ ಕಿಣಿ, ದೀಪಕ್ ಕುಮಾರ್ ಶೆಟ್ಟಿ, ಉದ್ಯಮಿ ಜಯಾನಂದ ಹೋಬಳಿದಾರ್, ಶಿವಕುಮಾರ್, ಪಡುವರಿ ಗ್ರಾಮ ಕರಣಿಕ ಆದರ್ಶ ಮೊದಲಾದವರು ಇದ್ದರು.