Kundapra.com ಕುಂದಾಪ್ರ ಡಾಟ್ ಕಾಂ

ಬಾಬು ಶೆಟ್ಟಿ ಕೊಲೆ ಪ್ರಕರಣ: ಸಂಬಂಧಿ ಸೇರಿದಂತೆ 6 ಮಂದಿ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಡಿ.26: ತಾಲೂಕಿನ ಕನ್ಯಾನ ಕಲ್ಕಂಬ ಎಂಬಲ್ಲಿ ಡಿ.17ರಂದು ಹಗಲು ಹೊತ್ತಿನಲ್ಲಿಯೇ ನಡೆದ ಜೋರ್ಮಕ್ಕಿ ಬಾಬು ಶೆಟ್ಟಿಯವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಕುಂದಾಪುರ ಉಪವಿಭಾಗದ ಎಎಸ್‌ಪಿ ಹರಿರಾಂ ಶಂಕರ್ ನೇತ್ರತ್ವದ ಪೊಲೀಸರ ತಂಡ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಬಾಬು ಶೆಟ್ಟಿ ಕೊಲೆ ಪ್ರಕರಣಕ್ಕೆ ವೈಯುಕ್ತಿಕ ದ್ವೇಷವೇ ಕಾರಣ. ಈ ಹಿಂದೆ ಹರೀಶ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿಗೆ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ ಹಾಗೂ ಬಾಬು ಶೆಟ್ಟಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಬಾಬು ಶೆಟ್ಟಿಯನ್ನು ಕೊಲ್ಲಬೇಕು ಎಂದು ತೀರ್ಮಾನಿಸಿದ ತೇಜಪ್ಪ ಶೆಟ್ಟಿ ಸಂಚು ರೂಪಿಸಿದ್ದರು. ಕೊಲೆ ನಡೆದ ದಿನ ಮಧ್ಯಾಹ್ನ ಬಾಬು ಶೆಟ್ಟಿಗೆ ಕರೆ ಮಾಡಿದ ಆರೋಪಿಗಳು ಗೊಬ್ಬರ ಸಾಗಾಟ ಮಾಡಬೇಕಿದ್ದು ಅದನ್ನು ತೋರಿಸುತ್ತೇವೆ ಕರೆಸಿ, ಬೈಕಿನಲ್ಲಿ ಬಂದ ಬಾಬು ಶೆಟ್ಟಿಯನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದರು. ಆರೋಪಿಗಳನ್ನು ಒಂಬತ್ತು ದಿನದಲ್ಲಿ ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಬಾಬು ಶೆಟ್ಟಿಯ ಸಂಬಂಧಿಕ ತೇಜಪ್ಪ ಶೆಟ್ಟಿ (68), ಶೆಟ್ರಕಟ್ಟೆ ನಿವಾಸಿ ಉದಯರಾಜ್ ಶೆಟ್ಟಿ(55), ಕೆಂಚನೂರು ನಿವಾಸಿ ರಮೇಶ್ ಪೂಜಾರಿ(25), ಆನಗಳ್ಳಿ ನಿವಾಸಿ ಪ್ರವೀಣ್ ಪೂಜಾರಿ(25), ಬಸ್ರೂರು ನಿವಾಸಿ ಸಚಿನ್ ಪೂಜಾರಿ(21) ಹಾಗೂ ಆನಗಳ್ಳಿ ನಿವಾಸಿ ರಾಘವೇಂದ್ರ ಪೂಜಾರಿ(24) ಕೊಲೆ ಆರೋಪಿಗಳು.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ, ಎಎಸ್ಪಿ ಹರಿರಾಂ ಶಂಕರ್, ಡಿಸಿಐಬಿ ಇನ್ಸ್‌ಪೆಕ್ಟರ್ ಕಿರಣ್, ಕುಂದಾಪುರ ವೃತ್ತನಿರೀಕ್ಷಕ ಡಿ. ಆರ್ ಮಂಜಪ್ಪ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ರಾಜಕುಮಾರ್, ಶಂಕರನಾರಾಯಣ ಠಾಣೆ ಪಿಎಸ್‌ಐ ಶ್ರೀಧರ್ ನಾಯ್ಕ್, ಕುಂದಾಪುರ ಪಿಎಸ್‌ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:
► ಕುಂದಾಪುರ: ಹಾಡಹಗಲೇ ಹರಿದ ನೆತ್ತರು – https://kundapraa.com/?p=34281

 

Exit mobile version