ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ.ಡಿ17: ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವಾಪ್ತಿಯಲ್ಲಿ ಮಧ್ಯಾಹ್ನದ ಹೊತ್ತಿಗೆ ನೆತ್ತರು ಹರಿದ ಘಟನೆ ನಡೆದಿದ್ದು, ವ್ಯಕ್ತಿಯೋರ್ವನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದಿರುವ ಬಗ್ಗೆ ವರದಿಯಾಗಿದೆ. ಮೃತನನ್ನು ಕಂಡ್ಲೂರು ಸಮೀಪದ ಜೋರ್‌ಮಕ್ಕಿ ನಿವಾಸಿ ಬಾಬು ಶೆಟ್ಟಿ (55) ಎಂದು ಗುರುತಿಸಲಾಗಿದೆ.
ಹೆಮ್ಮಾಡಿ – ಕೊಲ್ಲೂರು ರಾಜ್ಯ ಹೆದ್ದಾರಿ ಹಾಗೂ ತಲ್ಲೂರು ನೇರಳಕಟ್ಟೆ ಸಂಪರ್ಕ ರಸ್ತೆಯ ಜಾಡಿ ಕಲ್ಕಂಬ ಎಂಬಲ್ಲಿನ ಮಣ್ಣಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ದಾರಿಹೋಕರೊಬ್ಬರು ರಕ್ತಸಿಕ್ತ ದೇಹವನ್ನು ಕಂಡು ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ ಶೆಟ್ಟಿ ಅವರ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
ಲಾರಿ ಚಾಲಕರಾಗಿರುವ ಮೃತ ಬಾಬು ಶೆಟ್ಟಿ ತಮ್ಮ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಹೀರೋ ಹೋಂಡಾ ಬೈಕಿನಲ್ಲಿ ತೆರಳಿದ್ದರು. ಇದರ ನಡುವೆಯೇ ಮಾರ್ಗಮಧ್ಯೆ ಈ ದುಷ್ಕೃತ್ಯ ನಡೆದಿದೆ. ಮೃತರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಇರಿತದ ಗುರುತುಗಳು ಪತ್ತೆಯಾಗಿದ್ದು, ಹತ್ಯೆ ನಡೆಸಿರುವುದು ದೃಢವಾಗಿದೆ. ಮಣ್ಣಿನ ರಸ್ತೆಯ ತನಕವೂ ಅಟ್ಟಿಸಿಕೊಂಡು ಬಂದು ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ. ಬಾಬು ಶೆಟ್ಟಿಯ ಲುಂಗಿ ಹಾಗೂ ಮೊಬೈಲ್ ನಾಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹತ್ಯೆ ಯಾವ ಕಾರಣಕ್ಕೆ ಆಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಅವರ ನಡೆಸುತ್ತಿದ್ದ ಬಡ್ಡಿ ವ್ಯವಹಾರ ಅಥವಾ ತಮ್ಮ ಕುಟುಂಬಿಕರೊಂದಿಗೆ ಇದ್ದ ಜಾಗದ ತಕರಾರು ಕೊಲೆಗೆ ಕಾರಣವಾಗಿರಬಹುದೇ ಎಂಬ ಶಂಕೆ ಇದ್ದು ತನಿಕೆ ನಡೆಸುತ್ತಿದ್ದೇವೆ ಎಂದು ಉಡುಪಿ ಎಸ್ಪಿ ತಿಳಿಸಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ವೃತ್ತ ನಿರೀಕ್ಷಕ ಮಂಜಪ್ಪ, ಠಾಣಾಧಿಕಾರಿ ರಾಜಕುಮಾರ್ ಸ್ಥಳಕ್ಕೆ ಭೇಟಿ ತನಿಕೆ ಆರಂಭಿಸಿದ್ದಾರೆ. ಶ್ವಾನದಳ, ಬೆರಳಚ್ಚು ಹಾಗೂ ಫೊರೆನ್ಸಿಕ್ ತಜ್ಞರೂ ಸ್ತಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಭೇಟಿ ನೀಡಿ ಪ್ರಕರಣವನ್ನು ಶೀಘ್ರ ಭೇಧಿಸುವಂತೆ ತಿಳಿಸಿದ್ದಾರೆ. ಕಂಡ್ಲೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.