Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನ ರತ್ತುಬಾಯಿ ಜನತಾ ಪ್ರೌಢಶಾಲೆಗೆ ಸುವರ್ಣ ಸಂಭ್ರಮ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿ ಬೈಂದೂರು ಎಂಬ ಗ್ರಾಮೀಣ ಪ್ರದೇಶದಲ್ಲಿ ನಿಜಾರ್ಥದಲ್ಲಿ ಸಾಕಾರಗೊಳ್ಳುವ ದಿನಗಳು ಆರಂಭಗೊಂಡದ್ದುಎಪ್ಪತ್ತರ ದಶಕದಲ್ಲಿ. 1970 ಅಂತಾರಾಷ್ಟ್ರೀಯ ಶೈಕ್ಷಣಿಕ ವರ್ಷ. ಮಹಿಳಾ ವಿಮೋಚನಾ ಆಂದೋಲನ ಮುನ್ನೆಲೆಗೆ ಬಂದ ಕಾಲಘಟ್ಟ. ಅದು ಬೈಂದೂರು ಸುತ್ತಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿಯೇ ಪ್ರೌಢಶಾಲೆಯೊಂದು ಅಸ್ತಿತ್ವಕ್ಕೆ ಬಂದ ವರ್ಷವೂ ಹೌದು.

ಅಂದು ಹೆಮ್ಮಾಡಿಯ ಶ್ರೀ ವಿ. ವಿ. ವಿ. ಮಂಡಳಿ (ರಿ) ಇದರ ಸ್ಥಾಪಕಾಧ್ಯಕ್ಷರಾದ ದಿವಂಗತ ಕೆ. ಎಸ್ ರಾಮ್‌ರಾವ್ ಅವರು; ಬೈಂದೂರು ಆಸುಪಾಸಿನ ಶಿಕ್ಷಣಾಭಿಮಾನಿಗಳ ಇಚ್ಛಾಶಕ್ತಿಯನ್ನು ಸಂಘಟಿಸಿ ‘ಜನತಾ ಗರ್ಲ್ಸ್ ಹೈಸ್ಕೂಲ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಪ್ರಾರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಶಾಲೆ ಆರಂಭಗೊಂಡರೂ, ಆ ಸಂದರ್ಭ ಮುಖ್ಯೋಪಾಧ್ಯಾಯರಾಗಿದ್ದ ದಿವಂಗತ ಸದಾಶಿವ ಭಟ್ಟರು ಹಾಗೂ ಸಹೋದ್ಯೋಗಿಗಳ ಶ್ರಮದ ಫಲ ಹಾಗೂ ದಾನಿಗಳ ನೆರವಿನಿಂದ ಸ್ವಂತ ನಿವೇಶನದ ಕಟ್ಟಡಕ್ಕೆ ಸ್ಥಳಾಂತರಗೊಂಡು ರತ್ತುಬಾಯಿ ಜನತಾ ಗರ್ಲ್ಸ್ ಹೈಸ್ಕೂಲ್ ಎಂದು ಎಂದು ಮರುನಾಮಕರಣ ಮಾಡಲಾಯಿತು.

ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಶಾಲೆಯು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿ ಸಾವಿರಾರು ಹೆಣ್ಣುಮಕ್ಕಳ ವಿದ್ಯಾರ್ಜನೆಗೆ ಸಾಕ್ಷಿಯಾಯಿತು. ಶಾಲೆಯ ಮುಖ್ಯೋಪಾಧ್ಯಾಯರುಗಳಾಗಿದ್ದ ಬಿ. ವಿಶ್ವೇಶ್ವರ ಅಡಿಗ, ಟಿ. ಆರ್. ಹುದಾರ್ ಹಾಗೂ ಜಿ. ಎಸ್. ಭಟ್ ಹಾಗೂ ಸಹೋದ್ಯೋಗಿಗಳ ಕಾರ್ಯತತ್ಪರತೆಯಿಂದ ಸಂಸ್ಥೆಯು ದಿನದಿಂದ ದಿನಕ್ಕೆ ಏಳಿಗೆಯನ್ನು ಕೊಂಡುಕೊಳ್ಳುವಲ್ಲಿ ಮುಂದಡಿಯಿಟ್ಟಿತು. ಕುಂದಾಪ್ರ ಡಾಟ್ ಕಾಂ ವರದಿ.

ಬದಲಾವಣೆಯ ಕಾಲಘಟ್ಟಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ೨೦೦೯ರಲ್ಲಿ ಸಹಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಂಡು ರತ್ತುಬಾಯಿ ಜನತಾ ಪ್ರೌಢಶಾಲೆ ಎಂದು ಮರುನಾಮಕರಣಗೊಂಡು ಹೆಣ್ಣು ಹಾಗೂ ಗಂಡು ಮಕ್ಕಳೀರ್ವರಿಗೂ ಜ್ಞಾನಾರ್ಜನೆಗೈಯುತ್ತಾ ಮುನ್ನೆಡೆಯುತ್ತಿದೆ.

ಪ್ರಸ್ತುತ ಶಿಕ್ಷಣ ಪ್ರೇಮಿ ಹಾಗೂ ಜನಾನುರಾಗಿ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿಯವರ ಅಧ್ಯಕ್ಷತೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು, ಮುಖ್ಯೋಪಧ್ಯಾಯರಾದ ಮಂಜು ಕಾಳವಾರ ಹಾಗೂ ಸಹೋದ್ಯೋಗಿಗಳ ಕ್ರೀಯಾಶೀಲ ತಂಡದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಆಂಗ್ಲ ಮಾಧ್ಯಮ ಶಿಕ್ಷಣ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳ ಆರ್ಷಣೆಯ ನಡುವೆಯೂ ಬೈಂದೂರು ಸುತ್ತಲಿನ ಹಾಗೂ ಹೊರ ಜಿಲ್ಲೆಗಳ ಗ್ರಾಮೀಣ ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಯು ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಯಲ್ಲಿ ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಎಸ್.ಎಸ್.ಎಲ್.ಸಿಯಲ್ಲಿ ಶೇಕಡಾ 100 ಫಲಿತಾಂಶ

ರತ್ತುಬಾಯಿ ಜನತಾ ಹೈಸ್ಕೂಲಿಗೆ ಸುವರ್ಣ ಸಂಭ್ರಮ:
1970ರ ದಶಕದಲ್ಲಿ ಆರಂಭಗೊಂಡ ಸಂಸ್ಥೆಯು ಸಾರ್ಥಕ 49 ವರ್ಷಗಳನ್ನು ಪೂರೈಸಿ 50ವರ್ಷಕ್ಕೆ ದಾಪುಗಾಲಿರಿಸಿದ್ದು, ಸುವರ್ಣ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಆಚರಿಸಲು ಜನವರಿ 3 ಮತ್ತು 4 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸುವರ್ಣ ಮಹೋತ್ಸವದ ಅಂಗವಾಗಿ ವಾರ್ಷಿಕ ಕ್ರೀಡಾಕೂಟ, ಶೈಕ್ಷಣಿಕ ವಿಜ್ಞಾನ ವಸ್ತುಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ಅಂಬುಲೆನ್ಸ್ ಸೇವೆ ಪ್ರಾತ್ಯಕ್ಷಿಕೆ, ಅಗ್ನಿಶಾಮಕ ದಳ ಪ್ರಾತ್ಯಕ್ಷಿಕೆ, ಪ್ರೇರಣಾ ಮಾರ್ಗದರ್ಶನ ಶಿಬಿರಗಳನ್ನು ಈಗಾಗಲೇ ಯಶಸ್ವಿಯಾಗಿ ಜರುಗಿವೆ.

ಸುವರ್ಣ ಸಂಭ್ರಮ ಉದ್ಘಾಟನಾ ಹಾಗೂ ಸಮಾರೋಪದಲ್ಲಿ ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ, ಪದ್ಮಭೂಷಣ ಡಾ|| ಬಿ. ಎಂ. ಹೆಗಡೆ ಹಾಗೂ ಕವರ್‌ಸ್ಟೋರಿ ಖ್ಯಾತಿಯ ವಿಜಯಲಕ್ಷ್ಮೀ ಶಿಬರೂರು ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ.

ಎರಡು ದಿನಗಳ ಕಾಲ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಶಿಕ್ಷಕರೊಂದಿಗೆ ಸಂವಾದ, ಶಿಕ್ಷಣ ಮತ್ತು ಸಂಸ್ಕಾರ, ಶಿಕ್ಷಣ ಮತ್ತು ಮಾಧ್ಯಮ ವಿಚಾರಗೋಷ್ಠಿಗಳು, ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿದೆ. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ನೃತ್ಯ, ಯಕ್ಷಗಾನ, ನಾಟಕ, ಬಾಲನಟಿ ಶ್ಲಾಘ ಸಾಲಿಗ್ರಾಮ ಹಾಗೂ ಕುಂದಾಪುರ ನೃತ್ಯವಸಂತ ನಾಟ್ಯಾಲಯದಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ.

 

Exit mobile version