ಮಗಳೇ,
“ಹೇಗಿದ್ದೀಯ? ನಿನ್ ಜೊತೆ ತುಂಬಾ ತುಂಬಾ ಮಾತಾಡ್ಬೇಕು, ಏನೇನೆಲ್ಲಾ ಹೇಳ್ಕೋಬೇಕು ಅನ್ನಿಸ್ತಿದೆ. ಆದ್ರೆ ಮೊನ್ನೆ ಇದೇ ಕೊನೆಯ ಬಾರಿಯೇನೋ ಎಂಬಂತೆ ನೀನು ನನ್ನ ಜೊತೆ ಮಾತನಾಡಿದ ರೀತಿಯನ್ನು ನೋಡಿದರೆ ನೀನು ಅದಾವುದನ್ನು ಕೇಳಿಸಿಕೊಳ್ಳಲು ಸಾಧ್ಯವಾಗದೆ ಇರುವಷ್ಟು ದೂರ ಹೋಗಿಬಿಟ್ಟಿದ್ದೀಯ ಅಂತ ಅನ್ನಿಸುತ್ತೆ. ಬಹುಶಃ ಮುಂದೊಂದು ದಿನ ನಾನು ಅದನ್ನೆಲ್ಲಾ ನಿನ್ನಲ್ಲಿ ಹೇಳಿಕೊಳ್ಳಬಲ್ಲೆನೆಂಬ ಭರವಸೆ ನನ್ನಲ್ಲಿ ಉಳಿದಿಲ್ಲ. ಯಾರದೋ ಮನೆಯ ಹುಡುಗಿಯೊಬ್ಬಳು ಅದ್ಯಾರದೋ ಹುಡುಗನ ಜೊತೆಯಲ್ಲಿ ಮನೆಬಿಟ್ಟು ಓಡಿಹೋದಳು ಅಂದ್ರೆ ಮನಸ್ಸು ತುಂಬಾ ಬೇಜಾರು ಮಾಡಿಕೊಳ್ಳುತ್ತೆ. ಅಂತಾದ್ದರಲ್ಲಿ ನನ್ನ ಪ್ರೀತಿಯ ಮಗಳು, ನಾನು ಅಪಾರ ನಂಬಿಕೆ ನೀರೀಕ್ಷೆಗಳನ್ನಿರಿಸಿದ್ದ ನನ್ನ ಮಗಳು ಒಂದು ಕ್ಷಣದ ಗುಟ್ಟನ್ನು ಬಿಟ್ಟುಕೊಡದೆ ಹೀಗೆ ಏಕಾಏಕಿ ಯಾವುದೋ ಹುಡುಗನ ಜೊತೇಲಿ ಹೋಗಿ ಮದುವೆಯಾಗಿಬಿಟ್ಟಳು ಅಂದ್ರೆ…!!!”
“ಮಗಳೇ ನಿನ್ನನ್ನು ನೋಯಿಸುವ ಉದ್ದೇಶವಾಗಲಿ, ನೀನು ನಮ್ಮ ಪರಿಸ್ಥಿತಿಯ ಬಗೆಗೆ ಕನಿಕರಗೊಂಡು ನಮ್ಮನ್ನು ಸಮಾಧಾನಿಸಬೇಕು ಎನ್ನುವ ಆಸೆಯಾಗಲಿ ನಿನ್ನ ತಪ್ಪನ್ನು ಒಪ್ಪಿಕೊಂಡುಬಂದು ನಮ್ಮ ಕಾಲುಗಳಿಗೆ ಬೀಳಬೇಕು ಎನ್ನೋ ಯೋಚನೆಯಾಗಲಿ ಅಥವಾ ಆ ಹುಡುಗನನ್ನು ಬಿಟ್ಟು ಬಾ ಆದೇನೇ ಆಗಲಿ ಏನನ್ನೇ ಎದುರಿಸಿಯಾದರೂ ನಿನಗೆ ಬೇರೊಂದು ಮದುವೆ ಮಾಡಿಸುತ್ತೇನೆ ಎನ್ನುವ ಭಂಡ ಧೈರ್ಯದ ಆಶ್ವಾಸನೆಯನ್ನು ನೀಡುವ ಉದ್ದೇಶವಾಗಲಿ ಯಾವೊಂದು ಕೂಡ ಈ ಪತ್ರದ ಉದ್ದೇಶವಲ್ಲ. ಒಂದಂತೂ ಸತ್ಯ. ಕುರುಡು ಪ್ರೀತಿಗೆ ಬಲಿಬಿದ್ದು ಅದೂ ತೀರಾ ಓದುವ ಸಮಯದಲ್ಲೇ ,ಅಷ್ಟೂ ವರುಷಗಳು ತಮ್ಮನ್ನು ಪ್ರೀತಿಯಿಂದ, ಮುದ್ದಿನಿಂದ ಸಾಕಿ ಸಲಹಿ ಪೋಷಿಸಿ ಬೆಳೆಸಿದ ಹೆತ್ತವರನ್ನು ಜೊತೆಜೊತೆಯಲ್ಲೆ ಆಡಿಬೆಳೆದ ಒಡಹುಟ್ಟಿದವರನ್ನು ಏನೇನೂ ಅಲ್ಲವೆಂಬಂತೆ ತಿರಸ್ಕರಿಸಿ, ಕೊನೆಗೊಂದು ಮಾತು ಕೂಡ ಹೇಳದೆ ಮನೆಬಿಟ್ಟು ನಿನ್ನೆ ಮೊನ್ನೆ ಪರಿಚಯವಾದ ಹುಡುಗನೊಂದಿಗೆ ಬಾಳುತ್ತೇನೆ ಎಂದು ಹೊರಟುಹೋಗಿಬಿಡುತ್ತಾರಲ್ಲ ನಿನ್ನಂತಹ ಹುಡುಗಿಯರು, ಅಂತಹ ಹುಡುಗಿಯರಿಗೆ ನನ್ನಂತಹ ಅಪ್ಪಂದಿರ ಯಾತನೆ, ನಿಮ್ಮಿಂದಾಗಿ ಅನುಭವಿಸುವ ಅವಮಾನ ಕುಸಿದ ಆತ್ಮವಿಶ್ವಾಸ, ಕಳೆದುಕೊಂಡ ಗೌರವ, ನಂಬಿಕೆಗಳು ಕಿಂಚಿತ್ತಾದರೂ ಅರ್ಥವಾಗಲಿ ಅನ್ನೋ ಕಾರಣಕ್ಕಾಗಿ ಇದೊಂದು ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.”
“ನಿನಗೆ ಗೊತ್ತೇನಮ್ಮಾ? ನಿನ್ನ ಬಗೆಗೆ ಅದೆಷ್ಟೊಂದು ಭರವಸೆ ಇಟ್ಟಿದ್ದೆ ನಾನು. ನೀನು ಹೀಗೆ ಮಾಡಬಹುದೆಂಬ ಪುಟ್ಟದೊಂದು ಕಲ್ಪನೆ ಕೂಡ ನನಗಿರಲಿಲ್ಲ. ಅಷ್ಟೇ ಯಾಕೆ ಆ ಬಗೆಗೊಂದು ಸಣ್ಣ ಸಂದೇಹ ಕೂಡ ನಿನ್ನ ಬಗ್ಗೆ ನನಗಿರಲಿಲ್ಲ. ನೀನು ಕೂಡ ಹಾಗೆ ಇದ್ದಿದ್ದೀಯಲ್ವಾ? ನೀನು ಹಾಗೆ ಇದ್ದಕ್ಕಿದ್ದ ಹಾಗೆ ಹೊರಟು ಹೋಗುವ ಮೊದಲು ಆ ಬಗೆ ಗೆ ಸಣ್ಣದೊಂದು ಸುಳಿವನ್ನಾದರೂ ಕೊಟ್ಟಿದ್ದಿದ್ದರೆ ಬೇರೆ ಏನಾದರು ಘಟಿಸುತಿತ್ತಾ?! ಗೊತ್ತಿಲ್ಲ. ಆದರೆ ಸಾಧ್ಯತೆಗಳಂತೂ ಇದ್ದವು. ಆದರೆ ನೀನು ಮಾಡಿದ್ದೇನು…?”
“ತಿಂಗಳ ಹಿಂದೆ ಅದೊಂದು ಶುಕ್ರವಾರ ಅಮ್ಮಾ ದೇವಸ್ಥಾನಕ್ಕೆ ಹೋಗಿ ಬರ್ತೇನೆ ಅಂತ ಹೊರಟುಹೋದ ನೀನು ಹಾಗೇ ನಾಪತ್ತೆ ಆಗಿಬಿಟ್ಟೆ. ಕೊನೆಗೊಂದು ಫೋನು ಮಾಡಿ ನಾನು ಹೀಗೆ ಈ ಪರಿ ಇಂತವರ ಜೊತೆ ಹೋಗುತ್ತಿದ್ದೇನೆ ಅಂತ ತಿಳಿಸುವ ಸೌಜನ್ಯವು ನಿನಗಿಲ್ಲದೆ ಹೋದದ್ದು ಹೇಗೆ? `ಸಾರಿ’ಯಂತೂ ದೂರದ ಮಾತು ಬಿಡು. ಹಾಗೆ ನೀನು ಆ ರಾತ್ರಿ ಗಂಟೆ ಎಂಟಾದರೂ ಮನೆಗೆ ಬರದಿದ್ದಾಗ, ನಿನ್ನ ಫೋನು ಸ್ವಿಚ್ ಆಫ್ ಆದಾಗ ನಾನು ನಿನ್ನಮ್ಮ ಎಷ್ಟೊಂದು ಒದ್ದಾಡಿ ಹೋದೆವು ಗೊತ್ತಾ? ರಾತ್ರಿ ಹತ್ತರವರೆಗೂ ಊರಿನ ಅಷ್ಟೂ ದೇವಸ್ಥಾನಗಳ ಬಾಗಿಲು ಎಡತಾಕಿ ಬಂದೆ. ನಿನ್ನ ಸ್ನೇಹಿತರ ಮನೆಗಳಿಗೆ, ಪರಿಚಯದವರ ಮನೆಗೆ ಕೊನೆಗೆ ಮುಚ್ಚಿದ್ದ ಕಾಲೇಜಿನ ಹೊರಬಾಗಿಲಿಗೂ ದುಗುಡಗೊಂಡು ಹೋಗಿ ಬಂದೆ. ಎಲ್ಲ ಕಡೆಗೂ ಅದೇ ಗೊತ್ತಿಲ್ಲ ಅನ್ನೋ ಉತ್ತರ. ಜೊತೆಗೆ ಕೆಲವರ ಕೆಟ್ಟ ಕೂತುಹಲದ ಪ್ರಶ್ನೆಗಳು..! ಪದೇ ಪದೇ ಬಂದ್ಲಾ? ಬಂದಳಾ? ಅಂತ ನಿಮಿಷಕ್ಕೊಂದು ಫೋನು ಮನೆಗೆ. ಆ ಕಡೆಯಿಂದ ಸಿಕ್ಕಿದ್ಲಾ? ಸಿಕ್ಕಿದ್ಲಾ? ಏನಾಯ್ತು ರೀ? ಅಂತ ನಿನ್ನಮ್ಮನ ಆತಂಕದ ಫೋನು. ತಂಗಿಯ ಫೋನು…. ಆ ದಿನ ತಡರಾತ್ರಿ ಎರಡರವರೆಗೂ ನನ್ನದೊಂದು ಹಳೇ ಬೈಕನ್ನೇರಿ ಇಡೀ ಊರ ತುಂಬೆಲ್ಲಾ ಹುಚ್ಚನಂತೆ ನಿನ್ನನ್ನು ಹುಡುಕಿದ್ದೆ ಕಣಮ್ಮಾ. ಅದ್ಹೇಗೊ ಮರುದಿನ ಬೆಳಗಿನ ಹೊತ್ತಿಗೆ ಊರು ಗುಸುಗುಸು ಅನ್ನತೊಡಗಿತ್ತು. ತೀರಾ ಅಪರಿಚಿತ ಮುಖಗಳೆಲ್ಲಾ ನಮ್ಮ ಮನೆಯೆದುರು ಸುಳಿದು ಹೋಗತೊಡಗಿದವು. ಅದೆಷ್ಟೋ ಹೊತ್ತಿನ ಬಳಿಕ ಇಡೀ ಊರು ತಿರುಗಾಡಿ ಬಂದ ಸುದ್ದಿ ಕೊನೆಗೂ ನನ್ನ ಕಿವಿಗೆ ಬಂದಪ್ಪಳಿಸಿತ್ತು….ಇಂತವರ ಮಗಳು ಓಡಿಹೋದಳಂತೆ!”
“ಸತ್ಯ ಹೇಳ್ತೀನಿ ಮಗಳೇ ನಾನು ಆ ಸುದ್ದಿಯನ್ನು ಮೊದಲು ಅರೆಕ್ಷಣಕ್ಕೂ ನಂಬಲಿಲ್ಲ. ನಿನ್ನ ಮೇಲಿಟ್ಟ ನನ್ನ ನ0ಬಿಕೆ ಅಂತಹುದಿತ್ತು. ತನ್ನ ಮಗಳೇ ತನ್ನನ್ನು ಮೋಸಗೊಳಿಸಬಹುದೆಂದು ಯಾವ ತಂದೆ ತಾನೇ ಊಹಿಸಿಯಾನು? ಹೇಳಮ್ಮಾ! ಬೆಳಿಗ್ಗೆ ಹತ್ತಾದರೂ ನೀನು ಬರದಿದ್ದಾಗ ಬಂಧುಗಳೊಬ್ಬರ ಸಲಹೆ ಮೇರೆಗೆ ಯಾವತ್ತೂ ಠಾಣೆಯ ಮೆಟ್ಟಿಲು ಹತ್ತದವ ಆವತ್ತು ಪೋಲಿಸ್ ಸ್ಟೇಷನ್ ಗೆ ನಿನ್ನದೊಂದು ವರ ಹುಡುಕಲಿಕ್ಕೆ ಇರಲಿ ಅಂತ ಮೊನ್ನೆ ಮೊನ್ನೆಯಷ್ಟೇ ಸೀರೆಯುಟ್ಟು ತೆಗೆಸಿದ್ದ ಫೋಟೊವೊಂದನ್ನ ನೀಡಿ ಮಗಳು ಕಳೆದು ಹೋಗಿದ್ದಾಳೆ ಅಂತ ದೂರು ನೀಡಿ ಬಂದೆ. ( ಆ ಫೋಟೊ ತೆಗೆಸುವಾಗಲಾದರೂ ನೀನು ನಿಜ ಹೇಳಬಹುದಿತ್ತು! ) ಅವತ್ತಿಡೀ ಅಮ್ಮ, ತ0ಗಿ, ನಾನು ನೀರು ಬಿಟ್ಟು ಬೇರೇನೂ ಕುಡಿದಿರಲಿಲ್ಲ. ಸಂಜೆ ನಾಲ್ಕರ ಹೊತ್ತಿಗೆ ಸ್ಟೇಷನ್ ನಿಂದ ಕರೆ ಬಂದಿತ್ತು.”
“ನಾವೂ ಬರ್ತೀವಿ ಅಂತ ನಿನ್ನನ್ನು ಕಾಣೋ ಖುಷಿಯಲ್ಲಿ ಹೊರಟುನಿಂತ ನಿನ್ನಮ್ಮ ತಂಗಿಯರನ್ನು ಗದರಿಸಿ ನಿನ್ನ ಮಾವನ ಜೊತೆಯಲ್ಲಿ ಸ್ಟೇಷನ್ನಿಗೆ ಒಳಗೊಳಗೆ ಅಳುತ್ತಾ ಬಂದಿದ್ದೆ. ಒಳಹೋಗುತ್ತಿದ್ದಂತೆ ನಿನ್ನ ಮುಖ ನೋಡಿ ಆದ ಸಂತೋಷಕ್ಕಿಂತ ನಿನ್ನ ಕೊರಳಲ್ಲಿ ತೂಗುತಿದ್ದ ತಾಳಿ ನೀಡಿದ ಶಾಕ್ ಇದೆಯಲ್ಲಾ…! ಆ ಕ್ಷಣದ ನನ್ನ ಅವಮಾನವನ್ನು, ಯಾರೋ ಕುತ್ತಿಗೆ ಹಿಡಿದು ಅಮುಕಿ ಇಡೀ ಶರೀರ ಕಂಪಿಸಿದಂತಹ ಅನುಭವವನ್ನು ನನ್ನ ಜೀವನಪೂರ್ತಿ ಮರೆಯಲಾರೆನೇನೋ! ಕ್ಷಮಿಸು ಮಗಳೇ. ಯಾರೋ ಒಬ್ಬ ತೀರಾ ಅಪರಿಚಿತ ಹುಡುಗನೊಬ್ಬನನ್ನು ಇದ್ದಕ್ಕಿದ್ದ ಹಾಗೆ ಅಳಿಯ ಎಂದು ಸ್ವೀಕರಿಸುವಷ್ಟು ಹೃದಯ ವೈಶಾಲ್ಯತೆ ನನ್ನಲ್ಲಿಲ್ಲ. ನಾನು ಒಬ್ಬ ಸಮಾನ್ಯ ಮನುಷ್ಯ. ಒಬ್ಬ ತಂದೆ.”
“ನಿನಗ್ಗೊತ್ತಾ ಮಗಳೇ, ಅದಕ್ಕಿಂತ ಹೆಚ್ಚು ಅವಮಾನ ಅಂತನ್ನಿಸಿದ್ದು ನಿನ್ನ ಇಡೀ ಮುಖದಲ್ಲಿ ಕಿಂಚಿತ್ ಪಶ್ಚಾತ್ತಾಪವಾಗಲೀ, ತಪ್ಪಿನ ಅರಿವಾಗಲಿ ಕಾಣಿಸದೇ ಹೋದದ್ದು! ಎಷ್ಟೊಂದು ಸರಾಗವಾಗಿ ಹೇಳಿಬಿಟ್ಟೆ ನೀನು ; `ಸರ್ ಐ ಯಾಮ್ ಮೆಚ್ಯೂರ್ಡ್. ನಾನು ಇವರನ್ನ ಮದ್ವೆ ಆಗಿದ್ದೀನಿ. ಐ ವಾಂಟ್ ಟು ಲಿವ್ ವಿದ್ ಹಿಮ್. ಐ ಡೋಂಟ್ ವಾಂಟ್ ಟು ಗೊ ಹೋಮ್.’ ಜೊತೆಗೆ ಸ್ಕೂಲ್ ಸರ್ಟಿಫಿಕೇಟುಗಳನ್ನು ಎಸ್.ಐಗೆ ಒಪ್ಪಿಸಿ ವಾರೆ ಕಣ್ಣಲ್ಲಿ ನನ್ನನ್ನು ತಿರಸ್ಕರಿಸಿದ್ದೀನಿ ಎಂಬಂತೆ ದಿಟ್ಟಿಸಿದ್ದೀಯಲ್ಲಾ…ಬಹುಶಃ ಅಲ್ಲಿಗೆ ಎಲ್ಲವೂ ಮುಗಿದಿತ್ತು ಅಂತನ್ನಿಸಿತ್ತು. ಅಷ್ಟಾಗಿಯೂ ಅದೆಷ್ಟೊಂದು ಬೇಡಿಕೊಂಡೆ ನಿನ್ನನ್ನು…! ನೀನು ಅದಾವುದಕ್ಕೂ ಕ್ಯಾರೇ ಅನ್ನದೇ, `ಸರ್ ನನ್ನ ನಿರ್ಧಾರ ಹೇಳಿದ್ದೀನಿ. ಅದು ಅಚಲ. ನನಗೆ ಯಾರ ಬಳಿಯೂ ಏನೂ ಮಾತಾನಾಡಲಿಕ್ಕೆ ಉಳಿದಿಲ್ಲ.’ ಅಂತ ನೀನು ಪದೇ ಪದೇ ಹೇಳುತ್ತಿದ್ದರೆ ನಾನು ನಿಂತಲ್ಲೇ ಕುಸಿಯ ತೊಡಗಿದ್ದೆ. ನೀನು `ಅಪ್ಪ’ ಅಂತ ಆ ಹೊತ್ತು ಒಂದೇ ಒಂದು ಸಲ ಕರೆದರೂ ಸಾಕಿತ್ತು ಕಣೆ. ನಾನು ಈ ಹೊತ್ತು ಇರುತಿದ್ದ ರೀತಿಯೇ ಬೇರೆ ಆಗಿರುತಿತ್ತೇನೊ………!”
“ನಿಜ ಹೇಳು ಮಗಳೆ. ನಾನೇನು ಕಡಿಮೆ ಮಾಡಿದ್ದೆ ನಿನಗೆ? ಪ್ರೀತಿ, ಮಾತು, ಕಾಳಜಿ, ತಿನಿಸು, ಬಟ್ಟೆ, ಒಡವೆ, ಹಣ, ಮೊಬೈಲು…ಮತ್ತೆ ಮೊನ್ನೆ ಮೊನ್ನೆ ನೀನು ಹಠ ಮಾಡಿದಿಯೆಂದು ಓಡಾಡಲಿಕ್ಕೊಂದು ಸ್ಕೂಟಿ… ಇದರಲ್ಲೆಲ್ಲಾ ತಪ್ಪಿತ್ತಾ? ನಿನಗೆ ಇಷ್ಟು ವರುಷಗಳ ಕಾಲ ಸುಂದರವಾದ ಒಂದು ಬದುಕನ್ನ ಕಟ್ಟಿಕೊಟ್ಟ ನಿನ್ನ ಅಪ್ಪನಿಗೆ ನಿನಗೊಂದು ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿಸುವ ಅರ್ಹತೆ ಇಲ್ಲ ಅಂತ ನೀನು ಅಂದುಕೊಂಡಿದ್ದಾದರೂ ಹೇಗೆ? ನಿನಗೆ ಗೊತ್ತಾ ಮಗಳೇ, ನೀನು ಹೋದ ಮೇಲೆ ನಮ್ಮ ಮನೆಯಲ್ಲಿ ಮೊದಲಿನ ನಗುವಾಗಲಿ, ಸಂತೋಷವಾಗಲಿ ಉಳಿದಿಲ್ಲ. ನಿನ್ನ ತಂಗಿ ಅದೆಷ್ಟು ಒಳ್ಳೆಯವಳು ಅಂತ ನಿನಗೆ ಗೊತ್ತು. ಆದರೆ ಅದೇಕೋ ಗೊತ್ತಿಲ್ಲ. ನಿನ್ನ ತಂಗಿಯ ಒಳ್ಳೆಯ ಗುಣಗಳನ್ನೇ ನಾನೀಗ ಅನುಮಾನಿಸಲಾರಂಭಿಸಿದ್ದೇನೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಅವಳ ಮೇಲೆ ವಿನಾಕಾರಣ ರೇಗಾಡುತ್ತಿದ್ದೇನೆ. ದಿನನಿತ್ಯ ಅದೆಷ್ಟೋ ಬಾರಿ ಪದೆ ಪದೇ ಎನ್ನುವಂತೆ ನಿನ್ನನ್ನು ನೆನಪಿಸಿಕೊಂಡು ಅಳುತ್ತಾ ಮೂಲೆಯಲ್ಲಿ ಕುಳಿತುಕೊಳ್ಳುವ ನನ್ನ ಪ್ರೀತಿಯ ಮಡದಿಯನ್ನು ಸಮಧಾನಿಸಲಾರದೆ ಸೋತು ಹೋಗುತ್ತಿದ್ದೇನೆ. ಕೆಲವೊಮ್ಮೆಯಂತೂ ಅವಳ ಗಾಢವಾದ ಮೌನ ನನ್ನಲ್ಲಿ ಭಯ ಹುಟ್ಟಿಸುತ್ತಿದೆ. ನೀನು ದಿನಾರಾತ್ರಿ ಓದುತ್ತಿದ್ದ ಕುರ್ಚಿ, ನಿನ್ನ ರೂಮಿನಲ್ಲಿನ ಹಗ್ಗದ ಮೇಲೆ ನೇತಾಡುತ್ತಿರುವ ನಿನ್ನ ಬಟ್ಟೆಗಳು, ಕಪಾಟಿನಲ್ಲಿ ಅನಾಥವಾಗಿ ಬಿದ್ದುಕೊಂಡಿರುವ ಪುಸ್ತಕಗಳು, ಬಳೆಸ್ಟ್ಯಾಂಡಿನಲ್ಲಿರುವ ಬಣ್ಣಬಣ್ಣದ ಬಳೆಗಳು, ಕಪಾಟಿನ ಮೇಲೆ ಕುಳಿತುಕೊಂಡು ಇನ್ನೂ ಕೂಡ ನಗುತ್ತಿರುವ ನಿನ್ನ ಮುದ್ದಿನ ಟೆಡ್ಡಿಬೇರ್‍ಗಳು, ಬಾಗಿಲ ಸಂದಿಯಲ್ಲಿ ನೀನು ಬಿಟ್ಟು ಹೋಗಿರುವ ಎರಡು ಜೊತೆ ಚಪ್ಪಲಿಗಳು… ಎಲ್ಲವೂ ನನ್ನನ್ನು ಅಣಕಿಸುತ್ತಿರುವಂತೆ ಅನ್ನಿಸುತ್ತಿವೆ ಆದರೂ ಪದೇ ಪಧೇ ಅವುಗಳನ್ನು ನೋಡಿ ಕಣ್ಣೀರಾಗುತ್ತೇನೆ. ನೀನು ಪುಟ್ಟ ಹುಡುಗಿಯಾಗಿದ್ದಾಗ ಹಬ್ಬಕ್ಕೆ ಕರೆದುಕೊಂಡು ಹೋಗಿದ್ದು, ಬಿದ್ದದ್ದು, ಎದ್ದದ್ದು, ಅತ್ತಿದ್ದು, ನಕ್ಕಿದ್ದು, ಪರೀಕ್ಷೇಲಿ ಫೇಲ್ ಆಗಿದ್ದು, ಆಮೇಲೆ ರ್ಯಾಂಕ್ ಬಂದಿದ್ದು, ಹೈಸ್ಕೂಲಿನಲ್ಲಿ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಪಡೆದದ್ದು, ತಂಗಿಯನ್ನು ಬೆನ್ನಿಗೇರಿಸಿಕೊಂಡು ಉಪ್ಪಿನಮೂಟೆಯಾಡಿದ್ದು… ನೀನು ಅಪ್ಪ ಎಂದು ಕರೆಯುತಿದ್ದ ರೀತಿ, ಅಮ್ಮನನ್ನು ನೀನು ಮುದ್ದಾಡುತ್ತಿದ್ದ ಕ್ಷಣಗಳು……. ಎಲ್ಲವೂ ಮತ್ತೆ ಮತ್ತೆ ನೆನಪಾಗುತ್ತಲೇ ಇವೆ. ಅದರ ಹಿಂದೆಯೇ ಆ ಕ್ಷಣಗಳು ಇನ್ನೆಂದೂ ಬರುವುದಿಲ್ಲವಲ್ಲ ಎಂದು ಯೋಚಿಸಿಯೇ ತಲೆ ಧೀಂ ಅನ್ನಿಸಲಾರಂಭಿಸುತ್ತದೆ. ಇದೀಗ ಮನೆಯಲ್ಲಿ ತಿಂಡಿ, ಊಟ, ನಿದ್ರೆ, ಟ.ವಿ.ಗಳೆಲ್ಲಾ ಬರೇ ಯಾಂತ್ರಿಕವಾಗಿಯಷ್ಟೇ ಉಳಿದುಬಿಟ್ಟಿದೆ. ಇನ್ನೆಷ್ಟು ದಿನ ಹೀಗೆ ಸಾಗಬೇಕಿದೆ ಗೊತ್ತಿಲ್ಲ!.”
“ಮನೆಯಿಂದ ಹೊರಬಿದ್ದರೆ ಸಾಕು ಎದುರಾಗುವ ಅದೇ ಮಾಮೂಲಿ ಜನಗಳು ಕೊಡುವ ನಮಸ್ಕಾರಗಳಲ್ಲಿ, ನಗುವಲ್ಲಿ ವ್ಯಂಗ್ಯ ಕಾಣಿಸುತ್ತಿದೆಯಾ ಅಂತ ಅನವಶ್ಯಕ ಹುಡುಕಲಾರಂಭಿಸಿದ್ದೇನೆ. ಹೆಜ್ಜೆಗೆರಡು ಮಾತುಗಳು ಕೇಳಿಬರುತ್ತಲೇ ಇದೆ. ಈಗಂತೂ ನನಗೆ ಬೀದಿಗಳಲ್ಲಿ ತಲೆ ತಗ್ಗಿಸಿಕೊ0ಡು ತಿರುಗಾಡುವುದು ಅಭ್ಯಾಸವಾಗಿಬಿಟ್ಟಿದೆ. ಯಾರ್ಯಾರದೋ ಮನೆಯ ಹತ್ತಾರು ಸಮಸ್ಯೆಗಳಿಗೆ ಓಗೊಟ್ಟು ಬುದ್ಧಿಹೇಳಿ ಬರುತ್ತಿದ್ದ ನಾನು ಅದೆಲ್ಲಾ ನ್ಯೆತಿಕತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ಮಗಳೇ ಸತ್ಯ ಹೇಳ ಬೇಕೆಂದರೆ ಆಂತಹ ವಿಚಾರಗಳಿಗೆ ಈಗ ಜನ ನನ್ನನ್ನು ಕೇಳುತ್ತಿಲ್ಲ..! ಇದು ವಾಸ್ತವ. ಒಂದಂತೂ ಸತ್ಯ. ನಿನ್ನ ವಿಷಯದಲ್ಲಿ ನಾನು ಯಾವ ತಪ್ಪನ್ನೂ ಮಾಡಿಲ್ಲ. ಸ್ವಂತ ಮಕ್ಕಳನ್ನು ನಂಬುವುದೇ ತಪ್ಪು ಎನ್ನುವುದಾದಲ್ಲಿ ನಾನು ಖಂಡಿತ ತಪ್ಪಿತಸ್ಥನೆ. ಓರ್ವ ತಂದೆಯಾಗಿ ನಾನೇನು ಮಾಡಬೇಕಿತ್ತೋ ಅದೆಲ್ಲವನ್ನೂ ನಾನು ಮಾಡಿದ್ದೇನೆ ಎಂಬ ಆತ್ಮತೃಪ್ತಿಯೊಂದು ನನ್ನ ಜೊತೆಗಿದೆ. ತೀರಾ ನನ್ನ ಮಗಳನ್ನೇ ಅದೂ ಒಳ್ಳೆಯತನದ ಪ್ರತಿರೂಪದಂತೆ ಇದ್ದವಳನ್ನ ನಾನು ಅನುಮಾನಿಸಿದ್ದರೆ ನಾನು ತಂದೆಯಾಗಿ ಉಳಿಯಿತ್ತಿರಲಿಲ್ಲ. ಇರಲಿ ಬಿಡು. ಯಾವತ್ತಾದರೂ ನಿನಗೆ ನೀನು ತಪ್ಪು ಮಾಡಿದೆ ಅಂತ ಒಂದು ಕ್ಷಣಕ್ಕಾದರೂ ಅನ್ನಿಸಿದರೆ ನನಗಷ್ಟೇ ಸಾಕು. ನೀವೆಲ್ಲೇ ಇರಿ. ಸುಖದಿಂದ ಜೀವಿಸಿರಿ ಅನ್ನುವುದಷ್ಟೇ ನಮ್ಮೆಲ್ಲರ ಹಾರೈಕೆ. ಮಗಳೇ ನಿನಗೆ ಗೊತ್ತಿರಲಿ ಯಾವ ತಂದೆತಾಯಿಗಳು ತಮ್ಮ ಮಕ್ಕಳಿಗೆ ಕೆಟ್ಟದ್ದನ್ನು ಬಯಸೋದಿಲ್ಲ.”
ಕೊನೆಗೊಂದು ಮಾತು : ಅಪ್ಪಿತಪ್ಪಿ ನಿನಗೆ ಹೊಸಜೀವನ ತೀರಾ ತೊಂದರೆ ಅನ್ನಿಸಿದಲ್ಲಿ ನಾವುಗಳು ನಿನ್ನ ಸಹಾಯಕ್ಕೆ ಇದ್ದೀವಿ ಅನ್ನೋದನ್ನ ಮರೀಬೇಡ. ಎಷ್ಟಾದರೂ ನೀನು ನನ್ನ ಮಗಳು..ಹ್ಞಾಂ! ಅವನ ಹೆ0ಡತಿಯಾಗುವ ಮೊದಲೇ. ನನ್ನ ಮಗಳು ಕಷ್ಟಪಡೋದನ್ನ ನಾನು ಯಾವತ್ತೂ ಇಷ್ಟಪಡುವುದಿಲ್ಲ. ಅಹಂ ಅಳಿದರೆ ಅಮ್ಮನಿಗೊಂದು ಫೋನು ಮಾಡು.”
ಇಂತೀ ನಿರೀಕ್ಷೆಗಳಿಲ್ಲದೆ,
-ನಿನ್ನ ಅಪ್ಪ.