ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಆತ್ಮವಿಶ್ವಾಸವನ್ನು ಮೂಡಿಸಬೇಕು ನಿಮ್ಮೊಳಗೆ ಅದ್ಬುತವಾದ ಒಂದು ಶಕ್ತಿ ಅದನ್ನು ಬಳಸಿಕೊಂಡು ಎನು ಬೇಕಾದರೂ ಮಾಡಬಹುದು ಎನ್ನುವುದನ್ನು ಹೇಳಿಕೊಡಿ, ಆಗ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಪತ್ರಕರ್ತ ರವಿಬೆಳಗೆರೆ ತಿಳಿಸಿದರು.
ಅವರು ಕೋಟ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ಜರಗಿದ ಅದ್ದೂರಿಯ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ‘ಅಭಿಮತ ಸಂಭ್ರಮ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೀರ್ತಿ ಕಲಶ ಪ್ರಶಸ್ತಿಗೆ ಭಾಜನರಾದ ಯೋಗರಾಜ್ ಭಟ್ಟರು ಕನ್ನಡ ಚಿತ್ರರಂಗದ ಮಾಂತ್ರಿಕ ಸ್ವರೂಪಿ ಸಾಹಿತಿ. ಸ್ವಂತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಿದ ಸಾಧಕ. ಇವರ ಪ್ರತಿಯೊಂದು ಸಾಲುಗಳು ಜೀವನೋತ್ಸಹವನ್ನು ತುಂಬುತ್ತದೆ ಎಂದರು.
ಹುಟ್ಟೂರ ಗೌರವ ಸಂತಸ ತಂದಿದೆ:
ಈ ಸಂದರ್ಭ ಚಿತ್ರ ಸಾಹಿತಿ ಯೋಗರಾಜ್ ಭಟ್ ಅವರಿಗೆ ಜನಸೇವಾ ಟ್ರಸ್ಟ್‌ನ ಕೀರ್ತಿ ಕಳಸ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಟ್ಟರು, ನಾನು ಮೂಲತಃ ಮಂದಾರ್ತಿಯವನು ಹೀಗಾಗಿ ಈ ಪ್ರದೇಶ ನನ್ನ ಹುಟ್ಟೂರು. ಇಂದು ನನ್ನ ಹುಟ್ಟೂರಿನಲ್ಲಿ ಅಭಿನಂದನೆ ಪಡೆಯುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ ಇಂತಹ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ ಜನಸೇವಾ ಟ್ರಸ್ಟ್‌ನ ಈ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಯುವ ಜನಾಂಗದಲ್ಲಿ ಅದ್ಬುತವಾದ ಶಕ್ತಿ ಇದೆ. ಅದನ್ನು ಪರಿಪೂರ್ಣವಾಗಿ ಬಳಸಿಕೊಂಡಾಗ ಜನಸೇವಾ ಟ್ರಸ್ಟ್ ರೀತಿಯ ಉತ್ತಮ ಸಾಮಾಜಿಕ ಕಾರ‍್ಯಗಳನ್ನು ಮಾಡಲು ಸಾಧ್ಯ ಎಂದರು.
ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಯಶೋಗಾಥೆ ಗೌರವ:
ಈ ಸಂದರ್ಭ ಸ್ಥಳೀಯ ಶ್ರಮ ಜೀವಿ ಕೂಸ ಪೂಜಾರಿ ಗಿಳಿಯಾರು, ಕರಕುಶಲ ಕಲೆಯಲ್ಲಿ ಸಾಧನೆ ಮಾಡಿದ ವಿಕಲಚೇತನ ಲಲಿತಾ ಪೂಜಾರಿ ಕೊರವಡಿ, ಕ್ರೀಡಾ ಸಾಧಕ ಸೀತಾರಾಮ ಶೆಟ್ಟಿ ಗುಳ್ಳಾಡಿಯವರಿಗೆ ಯಶೋಗಾಥೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ರತ್ನಾಕರ ಶೆಟ್ಟಿ ಬಡಾಮನೆ, ದೈನಾಡಿ ಪ್ರಕಾಶ್ ಶೆಟ್ಟಿ, ಮಾರ್ಕೋಡು ಸುಽರ್ ಕುಮಾರ್ ಶೆಟ್ಟಿ, ಸುರೇಂದ್ರ ಶೆಟ್ಟಿ ಸಹಾನ ಕೋಟೇಶ್ವರ, ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ಟಿ.ಮಂಜುನಾಥ ಗಿಳಿಯಾರು, ರತ್ನಾಕರ ಶೆಟ್ಟಿ ಬಡಾಮನೆ, ಕಲ್ಗದ್ದೆ ಸುರೇಶ್ ಶೆಟ್ಟಿ ಹಾಗೂ ಟ್ರಸ್ಟ್‌ನ ಅಧ್ಯಕ್ಷ ಅರುಣ್ ಶೆಟ್ಟಿ ಉಳ್ತೂರು ಉಪಸ್ಥಿತರಿದ್ದರು.
ಪ್ರವೀಣ್ ಯಕ್ಷಿಮಠ ಸ್ವಾಗತಿಸಿ, ಕಾರ್ಯಕ್ರಮದ ಸಂಘಟಕ ವಸಂತ್ ಗಿಳಿಯಾರು ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ಶೆಟ್ಟಿ ನೈಕಂಬ್ಳಿ ವಂದಿಸಿದರು.
ಸಭಾ ಕಾರ್ಯಕ್ರಮದ ಅನಂತರ ಜನ್ಸಾಲೆ, ಮೊಗೆಬೆಟ್ಟು, ಕಡಬಾಳ ಹಾಗೂ ಅಶ್ವಿನಿ ಕೊಂಡದಕುಳಿಯವರ ಯಕ್ಷ ನಾಟ್ಯ ವೈಭವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

