Kundapra.com ಕುಂದಾಪ್ರ ಡಾಟ್ ಕಾಂ

ಗಾನಯಾನದಲ್ಲಿ ಹಿಂದೂಸ್ತಾನಿ ಸಂಗೀತ ಪರಿಚಯಿಸುವ ಪ್ರಾತ್ಯಕ್ಷಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ನಾಗೂರಿನ ಕುಸುಮ ಫೌಂಡೇಶನ್ ನಡೆಸುತ್ತಿರುವ ಬ್ಲಾಸಂ ಸಂಗೀತ ನೃತ್ಯ ಶಾಲೆಯ ಫೆಬ್ರವರಿ ತಿಂಗಳ ’ಗಾನಯಾನ-5’ ಕಾರ್ಯಕ್ರಮದಲ್ಲಿ ಸಂಗೀತದ ಬದಲು ಶ್ರೋತೃಗಳಿಗೆ ಹಿಂದೂಸ್ಥಾನಿ ಸಂಗೀತವನ್ನು ಪರಿಚಯಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ಭಾನುವಾರದ ಈ ಕಾರ್ಯಕ್ರಮದಲ್ಲಿ ಹಾಜರಿದ್ದವರು ಹೆಚ್ಚು ಆಸಕ್ತರೂ, ಸಹೃದಯಿ ಶ್ರೋತೃಗಳೂ ಆಗಬೇಕೆನ್ನುವುದು ಅದರ ಉದ್ದೇಶವಾಗಿತ್ತು.

ಗೋಪಾಡಿಯಲ್ಲಿ ನೆಲೆಸಿ ಗುರುಪರಂಪರಾ ಸಂಗೀತ ಪ್ರತಿಷ್ಠಾನದ ಆಶ್ರಯದಲ್ಲಿ ಸಂಗೀತ ಕಲಿಸುತ್ತಿರುವ, ಪಂ. ಗಣಪತಿ ಭಟ್ ಹಾಸಣಗಿ ಅವರ ಶಿಷ್ಯರೂ, ಆಕಾಶವಾಣಿ ಗ್ರೇಡ್ ಕಲಾವಿದರೂ ಆಗಿರುವ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ಮಾಳಕೊಪ್ಪ ದಂಪತಿ ತಮ್ಮ ಹಿರಿಯ ಕಿರಿಯ ಶಿಷ್ಯರನ್ನು ಕೂಡಿಕೊಂಡು ಸಂಗೀತದ ವಿವಿಧ ಮಜಲು ಮತ್ತು ಆಯಾಮಗಳನ್ನು ಶ್ರೋತೃಗಳ ಮುಂದೆ ತೆರೆದಿಟ್ಟರು. ಜತೀಂದ್ರ ಮರವಂತೆ ಮತ್ತು ಗುರುದಂಪತಿಯ ನಡುವಿನ ಸಂವಾದ ಮತ್ತು ವಿಷಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಹಾಡುಗಾರಿಕೆ, ಶಶಿಕಿರಣ ಮಣಿಪಾಲ ಅವರ ತಬಲಾ ವಾದನದ ಮೂಲಕ ನಡೆದ ಕಾರ್ಯಕ್ರಮ ಸೇರಿದ್ದ ಸಂಗೀತಾಸಕ್ತರ ಕುತೂಹಲ ಮತ್ತು ಜಿಜ್ಞಾಸೆ ತಣಿಸಿ ಉದ್ದೇಶಿತ ಗುರಿ ಸಾಧಿಸಿತು.

ಭಾರತೀಯ ಸಂಗೀತದ ಪ್ರಮುಖ ಪ್ರಕಾರಗಳ ಮಾಹಿತಿಯೊಂದಿಗೆ ಲಘು ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ನಡುವಿನ ಅಂತರವನ್ನು ತಿಳಿಸಿಕೊಡಲಾಯಿತು. ಶ್ರುತಿ, ಸ್ವರ, ಲಯ ಸೇರಿ ಆಗುವ ಸಂಗೀತದಲ್ಲಿ ಬಳಕೆಯಾಗುವ ಸ್ವರಗಳನ್ನು, ಅವುಗಳ ಬದಲಾವಣೆ, ಸಂಯೋಗಗಳಿಂದ ಹುಟ್ಟುವ ವಿವಿಧ ರಾಗಗಳನ್ನು, ವಿಲಂಬಿತ್, ಮಧ್ಯ ಮತ್ತು ದೃತ್ ಲಯಗಳನ್ನು ವಿದ್ಯಾರ್ಥಿಗಳು ಹಾಡಿ ತೋರಿಸಿದರು.

ಹಿಂದುಸ್ಥಾನಿ ಶಾಸ್ತ್ರೀಯ ಗಾಯನದಲ್ಲಿ ಹೆಚ್ಚು ಪ್ರಚಾರದಲ್ಲಿರುವ ಮತ್ತು ಗುರು ದಂಪತಿ ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಖಯಾಲ್ ಗಾಯಕಿ ಹೇಗೆ ಪ್ರಸ್ತುತಗೊಳ್ಳುತ್ತದೆ ಎನ್ನುವುದನ್ನು ಪ್ರದರ್ಶಿಸಲಾಯಿತು. ಹಿಂದೂಸ್ಥಾನಿ ಸಂಗೀತದ ಅಷ್ಟಾಂಗಗಳಾದ ಮುಖವಿಲಾಸ, ಸ್ಥಾಯಿ, ಅಂತರ, ಆಲಾಪ್, ಬೋಲ್, ತಾನ್, ಸರ್ಗಮ್ ತಾನ್, ತರಾನಾಗಳ ತುಣುಕುಗಳನ್ನು ವಿದ್ಯಾರ್ಥಿಗಳು ಹಾಡಿ ಶ್ರೋತೃಗಳಿಗೆ ಮನದಟ್ಟು ಮಾಡಿದರು. ಖಯಾಲ್‌ನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುರುಗಳು ಹಾಡುಗಾರರು ಒಂದು ರಾಗದ ಚೌಕಟ್ಟಿನಲ್ಲಿ ಹಾಡುವಾಗ ಆ ಕ್ಷಣದ ಮನೋಧರ್ಮಕ್ಕೆ ಅನುಗುಣವಾಗಿ ರಾಗವನ್ನು ವಿಸ್ತರಿಸುತ್ತಾರೆ. ಹಾಗಾಗಿ ಅದು ಹಾಡುಗಾರನಿಂದ ಹಾಡುಗಾರನಿಗೆ ಮತ್ತು ಒಬ್ಬನೇ ಹಾಡುಗಾರ ಇನ್ನೊಮ್ಮ ಹಾಡುವಾಗ ಬದಲಾಗುತ್ತದೆ ಎಂದರು.

ಪೋಷಕರ ಪರವಾಗಿ ಜಯಲಕ್ಷ್ಮೀ ಹತ್ವಾರ್ ಅನುಭವ ಹಂಚಿಕೊಂಡರೆ, ಉಳಿದವರು ಪ್ರಾತ್ಯಕ್ಷಿಕೆ ಉಪಯುಕ್ತವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ವಿಜಯಾ ಪಡಿಯಾರ್, ವೇದಿಕಾ ಪಡಿಯಾರ್, ಜಾನ್ವಿ ಪ್ರಭು, ವಂದನಾ ಪೈ, ವಂದಿತಾ ಪೈ, ಪಲ್ಲವಿ ಪಡಿಯಾರ್, ದೃತಿ, ಜ್ಯೋತಿ ಭಟ್ಟ, ವಿಜಯಾ ಓಂ ಗಣೇಶ್, ಪೂರ್ಣಿಮಾ, ಸಂಕಲ್ಪಕುಮಾರ್, ಈಶ್ವರಿ, ತುಷಾರ, ನಾಗರಾಜ ಭಟ್, ನೇಹಾ ಹೊಳ್ಳ, ಕೇದಾರ ಮರವಂತೆ ಭಾಗಿಗಳಾಗಿದ್ದರು. ಫೌಂಡೇಶನ್ ಆಡಳಿತ ವಿಶ್ವಸ್ಥ ನಳಿನ್‌ಕುಮಾರ ಶೆಟ್ಟಿ ಕಲಾವಿದರನ್ನು ಸನ್ಮಾನಿಸಿದರು.

Exit mobile version