Kundapra.com ಕುಂದಾಪ್ರ ಡಾಟ್ ಕಾಂ

ಇಲ್ಲಗಳ ನಡುವೆಯೇ ಇದೆ ಕಪ್ಪಾಡಿ ಸರ್ಕಾರಿ ಶಾಲೆ

ಸುನಿಲ್ ಎಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. 29 ಜೂನ್ 2015
ಬೈಂದೂರು: ಕನ್ನಡ ಶಾಲೆಗಳಿಗೆ ಮಕ್ಕಳೇ ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವ ಶಿಕ್ಷಣ ಇಲಾಖೆ ಹಾಗೂ ಸರಕಾರ, ಮಕ್ಕಳು ಬರುವ ಕನ್ನಡ ಶಾಲೆಗಳನ್ನು ಸುಸ್ಥಿತಿಯಲ್ಲಿಡುವುದನ್ನು ಮಾತ್ರ ಮರೆತು ಬಿಟ್ಟಂತಿದೆ. ಬೈಂದೂರು ವಲಯದ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪಾಡಿ-ಮೂರೂರಿನ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮಕ್ಕಳಿದ್ದರೂ ಸಹಿತ ಕಳೆದ ಒಂದೆರಡು ವರ್ಷಗಳಿಂದ ಸರಕಾರಿ ಶಿಕ್ಷಕರು ಹಾಗೂ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುತ್ತಿದೆ.

ಸರಕಾರಿ ಶಿಕ್ಷಕರೇ ಇಲ್ಲ:

ಕಪ್ಪಾಡಿ ಶಾಲೆಯಲ್ಲಿ 1ರಿಂದ 5 ನೇ ತರಗತಿಯ ವರೆಗೆ ಒಟ್ಟು 33 ವಿದ್ಯಾರ್ಥಿಗಳಿದ್ದಾರೆ. ಸುತ್ತಲಿನ ಗುಂಡ್ವಾಣ, ಆಚಾರಿಕೇರಿ, ಮೂರೂರಿನ ಮಕ್ಕಳು ಇದೇ ಶಾಲೆಗೆ ಬರುತ್ತಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ 8 ಮಕ್ಕಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷಕ್ಕೆ ಹೊಲಿಸಿದರೆ ಪ್ರಸಕ್ತ ಸಾಲಿನಲ್ಲಿ 6 ಮಕ್ಕಳು ಹೆಚ್ಚಿಗೆ ಸೇರ್ಪಡೆಗೊಂಡಿದ್ದಾರೆ. ಇಷ್ಟು ಮಕ್ಕಳಿದ್ದರೂ ಕೂಡ ಶಾಲೆಗೆ ಸರಕಾರಿ ಶಿಕ್ಷಕರು ಮಾತ್ರ ಬರುತ್ತಿಲ್ಲ. ಊರವರು ಗಲಾಟೆ ಮಾಡಿದ ಮರುದಿನ ಬರುವ ಶಿಕ್ಷಕರು ಒಂದೆರಡು ವಾರದಲ್ಲಿ ನಾಪತ್ತೆಯಾಗುತ್ತಾರೆ. ಕಳೆದ ವರ್ಷದ ವರೆಗೆ ನೆಲ್ಲಿಕಟ್ಟೆಯಿಂದ ಬರುತ್ತಿದ್ದ ಶಿಕ್ಷಕಿಯೊಬ್ಬರು ಹೆರಿಗೆ ರಜೆಯ ಮೇಲೆ ಹೋದವರು ಮತ್ತೆ ಇತ್ತ ಕಡೆ ಬಂದಿಲ್ಲ. ಸದ್ಯ ನಕ್ಸಲ್ ಪ್ಯಾಕೇಜ್‌ನಲ್ಲಿ ನೇಮಕಗೊಂಡ ಶಿಕ್ಷಕರೊಬ್ಬರೇ ಶಾಲೆಯನ್ನು ನೋಡಿಕೊಳ್ಳುಬೇಕು. ಕಳೆದ ವರ್ಷದಿಂದ ಅತಿಥಿ ಶಿಕ್ಷಕಿಯೊಬ್ಬರನ್ನು ನೇಮಿಸಿದ್ದಾರೆ. ಕೆಲಸದ ಭದ್ರತೆ ಇಲ್ಲದಿರುವುದರಿಂದ ಅವರೂ ಕೂಡ ಯಾವಾಗಾಲಾದರೂ ಕೆಲಸ ಬಿಡಬಹುದು. ಮಹಿಳಾ ಶಿಕ್ಷಕರಿಗೆ ಸೂಕ್ತ ವಾಹನ ಸೌಲಭ್ಯ ಇಲ್ಲದಿರುವುದರಿಂದ ಈ ಶಾಲೆಗೆ ಬರಲು ಅನಾನೂಕೂವಾದಿತು. ಆದರೆ ಪುರುಷರು ಬಾಳಂಬಳ್ಳಿಯ ಮೂಲಕ ಶಾಲೆಯ ತನಕವೂ ಬರಬಹುದು ಎನ್ನುತ್ತಾರೆ ಊರವರು. ಕುಂದಾಪ್ರ ಡಾಟ್ ಕಾಂ ವರದಿ.

ಹಳೆಯ ಕಟ್ಟಡದಲ್ಲಿ ಮಕ್ಕಳಿಗೂ ರಕ್ಷಣೆ ಇಲ್ಲ:

ಶಾಲೆಯು ಸುಮಾರು 50 ವರ್ಷಗಳ ಹಿಂದಿನ ಮಣ್ಣಿನ ಕಟ್ಟಡವಾದ್ದರಿಂದ ಗೋಡೆಗಳು ಶಿಥಿಲಗೊಂಡಿವೆ. ವರಲೆಯ ಹುತ್ತಗಳು ಗೋಡೆಯ ಮೇಲೆ ಕಟ್ಟುತ್ತಲೇ ಇರುತ್ತದೆ. ಮಳೆ ಬಂದರೆ ಒಂದು ಬದಿ ಮಾಡು ಸೋರಿದರೇ, ಇನ್ನೊಂದು ಬದಿಯ ಮಾಡು ಗಟ್ಟಿ ಗಾಳಿಗೆ ಹಾರಿ ಹೋಗುವಂತಿದೆ. ಗಾಳಿ ಮಳೆ ಬರುವಾಗ ಮಕ್ಕಳನ್ನು ಪಕ್ಕದ ದೇವಸ್ಥಾನದ ಆವರಣದಲ್ಲಿ ಕುಳ್ಳಿರಿಸಿಕೊಂಡು ಪಾಠ ಮಾಡಬೇಕಾದ ಅನಿವಾರ್ಯತೆ ಇದೆ. ಶಾಲೆಗೆ ಭೇಟಿ ನೀಡಿದ ಸರಕಾರಿ ಅಧಿಕಾರಿಗಳು ಸದ್ಯಕ್ಕೆ ಇದೇ ಕಟ್ಟಡದಲ್ಲಿ ಮುಂದುವರಿಸಿ ಎಂದು ಹೇಳಿ ನಡೆದಿದ್ದಾರೆ. ಸ್ಥಳೀಯ ಗ್ರಾ.ಪಂ. ಸಹಕಾರದಲ್ಲಿ ಮಾಡು ಕೆಳಗೆ ಬೀಳದಂತೆ ತಾತ್ಕಾಲಿಕವಾಗಿ ಆಧಾರಕ್ಕೆ ಕಂಬವನ್ನು ನಿಲ್ಲಿಸಲಾಗಿದೆಯಾದರೂ ಗಾಳಿಯ ರಭಸಕ್ಕೆ ಅದು ಕೂಡ ಹೆಚ್ಚು ದಿನ ಉಳಿಯುವ ಸಾಧ್ಯತೆ ಇಲ್ಲ. ಇನ್ನು ಕಟ್ಟಡದಲ್ಲಿ ವಿದ್ಯುತ್ ಕಾಮಗಾರಿಗಳನ್ನು ನಡೆಸಿದ್ದರು ಕೂಡ ಈವರೆಗೆ ಶಾಲೆಯ ಮಕ್ಕಳು ಬೆಳಕನ್ನು ಕಂಡಿಲ್ಲ.

ಸರ್ಕಾರಿ ಶಿಕ್ಷಕರಿಲ್ಲದೇ ಅಕ್ಷರ ದಾಸೋಹದ ಹಣವಿಲ್ಲ:

ಒಟ್ಟು 33 ಮಕ್ಕಳಿರುವ ಶಾಲೆಯಲ್ಲಿ ಅಕ್ಷರ ದಾಸೋಹದ ತರಕಾರಿ ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ಸರಕಾರದಿಂದ ಹಣವೂ ಬರುತ್ತಿಲ್ಲ. ಶಾಲೆಯ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ನಕ್ಸಲ್ ಪ್ಯಾಕೇಜ್‌ನಲ್ಲಿ ನೇಮಕಗೊಂಡಿರುವುದರಿಂದ ಅವರಿಗೆ ಅಧಿಕೃತವಾಗಿ ಸರಕಾರಿ ಕಡತಗಳಿಗೆ ಸಹಿ ಮಾಡಿ ಹಣ ಮಂಜೂರು ಮಾಡಿಸಿಕೊಳ್ಳುವ ಹಕ್ಕಿಲ್ಲ. ಮಕ್ಕಳಿಗೆ ಊಟ ನಿಲ್ಲಸಬಾರದು ಎಂಬ ಉದ್ದೇಶದಿಂದ ಇರುವ ಶಿಕ್ಷಕರೇ ತಮಗೆ ಬರುವ ಕಡಿಮೆ ಸಂಬಳದ ಸ್ವಲ್ಪ ಹಣವನ್ನು ಅಕ್ಷರ ದಾಸೋಹಕ್ಕೆ ವಿನಿಯೋಗಿಸುತ್ತಿದ್ದಾರೆ.

ಜವಾಬ್ದಾರಿ ಇರುವರ ಸುಳಿವಿಲ್ಲ:

ಸಕರಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿಕೊಡಿ ಎಂದು ಬೊಬ್ಬಿಡುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಅವ್ಯವಸ್ಥೆಯನ್ನು ಬಗ್ಗೆ ಅರಿವಿದ್ದರೂ ಸಹ ಜಾಣ ಮೌನವಹಿಸಿದ್ದಾರೆ. ಈ ಸಮಸ್ಯೆ ಇಂದು ನಿನ್ನೆಯದೇನಲ್ಲ. ಊರಿನ ಪ್ರಮುಖರು ಸಾಕಷ್ಟು ಭಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದರು. ಶಾಲೆಯನ್ನು ಮುಚ್ಚಿ ಪ್ರತಿಭಟಿಸುವ ಹಂತಕ್ಕೆ ಬಂದಿದ್ದಾಗ ಒಬ್ಬ ಶಿಕ್ಷಕರನ್ನು ನೇಮಿಸಿ ಕೈತೊಳೆದುಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಆ ಶಿಕ್ಷಕರೂ ನಾಪತ್ತೆಯಾದರು. ಶಾಲೆಗೆ ಭೇಟಿ ನೀಡುವ ಅಧಿಕಾರಿಗಳು ಅನುದಾನ ಕೊರತೆಯ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಎಷ್ಟೋ ಶಾಲೆಗಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಶಿಕ್ಷಕರಿದ್ದಾರೆ. ಅವರೆಲ್ಲರೂ ಈ ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೇ ಶಾಲೆಗೆ ಮಕ್ಕಳಾದರೂ ಹೇಗೆ ಬಂದಾರು, ಬರುವ ಮಕ್ಕಳಿಗೆ ಉತ್ತಮ ಶಿಕ್ಷಣ ಹೇಗೆ ದೊರಕಿತು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಹೊಳೆ ದಾಟಲು ಸೇತುವೆಯಿಲ್ಲ:

ಕಪ್ಪಾಡಿ ಶಾಲೆಯ ಸಮೀಪ ಒಂದು ಕಿರುಹೊಳೆಯಿದ್ದು, ಅದನ್ನು ದಾಟಲು ಇಂದಿಗೂ ಸೇತುವೆಯಾಗಿಲ್ಲ. ಪ್ರತಿನಿತ್ಯ ಶಾಲೆಗೆ ಬರುವ ಮೂರೂರು ಭಾಗದ 15ಕ್ಕೂ ಹೆಚ್ಚು ಮಕ್ಕಳಿಗೆ ಅದೇ ಹೊಳೆಯನ್ನು ದಾಟಿಕೊಂಡು ಬರದೇ ಅನ್ಯ ಮಾರ್ಗಗಳಿಲ್ಲ. ಈಗ ಇರುವ ಮರದ ಕಾಲುಸಂಕ ಹೇಳುವಷ್ಟೇನು ಗಟ್ಟಿಯಾಗಿಲ್ಲ. ಹೊಳೆಗೊಂದು ಸೇತುವೆಯಾಗಲಿ, ಅದರ ಇಕ್ಕೆಲಗಳಲ್ಲಿ ತಡೆಗೋಡೆಯಾಗಲಿ ಇಲ್ಲದಿರುವುದರಿಂದ ಮಕ್ಕಳು ಅಲ್ಲಿ ದಾಟುವುದಕ್ಕೂ ಹೆದರುತ್ತಾರೆ. ಮಳೆಗಾದಲ್ಲಂತೂ ನೀರು ತುಂಬಿ ಹರಿಯುವುದರಿಂದ ಕಾಲುಸಂಕದ ಅಪಾಯ ತಪ್ಪಿದ್ದಲ್ಲ. ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು ಕಿರುಸೇತುವೆಯನ್ನು ಮಾಡಿಸುವತ್ತ ಗಮನಹರಿಸುವರೇ ನೋಡಬೇಕಿದೆ. ಕುಂದಾಪ್ರ ಡಾಟ್ ಕಾಂ ವರದಿ.

 _MG_8911

Exit mobile version