Kundapra.com ಕುಂದಾಪ್ರ ಡಾಟ್ ಕಾಂ

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ವಿದ್ಯಾರ್ಥಿಗಳಿಗೆ ದಾರಿದೀಪ: ಎಎಸ್ಪಿ ಹರಿರಾಮ್ ಶಂಕರ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗುತ್ತಿದ್ದು, ಪರೀಕ್ಷೆಗೆ ಹೇಗೆ ಪೂರ್ವ ತಯಾರಾಗಬೇಕು, ದಿನಂಪ್ರತಿ ಹೇಗೆ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನು ತರಬೇತಿ ಸಂಸ್ಥೆ ಮಾಹಿತಿ ನೀಡುತ್ತವೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುವ ರೀತಿಯಲ್ಲಿ ವಿ-ಶೈನ್ ತರಬೇತಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸಹಾಯಕ ಪೋಲಿಸ್ ಅಧೀಕ್ಷಕ ಹರಿರಾಮ್‌ಶಂಕರ್ ತಿಳಿಸಿದರು.

ಅವರು ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್,ಕೋಟದಲ್ಲಿ ವಿ-ಶೈನ್ ತರಬೇತಿ ಸಂಸ್ಥೆ ಆಸರೆಯಲ್ಲಿ ನಡೆಯುತ್ತಿರುವ ಕರ್ನಾಟಕ ಲೋಕಸೇವಾ ಆಯೋಗವು ಕರೆದಿರುವ 2000 ಕ್ಕೂ ಮಿಕ್ಕಿ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವೀತಿಯ ದರ್ಜೆ ಸಹಾಯಕ ಹುದ್ದೆಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಅವರು ತಮ್ಮ ವಿದ್ಯಾರ್ಥಿ ಜೀವನ, ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮನ್ನು ಯಾವ ರೀತಿ ತೊಡಗಿಸಿಕೊಂಡರು, ಪರೀಕ್ಷೆಗಳಿಗೆ ಹೇಗೆ ತಯಾರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶನ ನೀಡಿದರು. ಕಾರಂತ ಥೀಮ್ ಪಾರ್ಕ್ ಹಾಗೂ ವಿ-ಶೈನ್ ಪರವಾಗಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿಗಳಾದ ಸತೀಶ್ ವಡ್ಡರ್ಸೆ, ರಾಜಶೇಖರ್ ಕೋಟ, ವಿ-ಶೈನ್ ಸಂಸ್ಥೆಯ ಗಿರೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿ-ಶೈನ್ ಸಂಸ್ಥೆಯ ಹರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

Exit mobile version