ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ರಾಜ್ಯದಲ್ಲಿಯೇ ಮೊದಲ ಭಾರಿಗೆ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕ ಕುಂದಾಪುರದಲ್ಲಿ ಸಿದ್ಧಗೊಂಡಿದ್ದು, ಗ್ರಾಮ ಮಟ್ಟದಲ್ಲಿ ಸುರಕ್ಷಿತವಾಗಿ ಕಾರ್ಯಾಚರಿಸಲು ಸನ್ನದ್ಧವಾಗಿದೆ.
ಉಡುಪಿ ಜಿಲ್ಲಾಡಳಿತ ಈ ಗಂಟಲು ದ್ರವ ಮಾದರಿ ಸಂಗ್ರಹ ಸಂಚಾರಿ ಘಟಕವನ್ನು ಆರಂಭಿಸಿದ್ದು, ಕುಂದಾಪುರದಲ್ಲಿ ಮೊದಲ ಭಾರಿಗೆ ಸಂಚರಿಸಲಿದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಆದ್ಯತೆಗೆ ಅನುಗುಣವಾಗಿ ಮಾದರಿ ಸಂಗ್ರಹ ಸಂಚಾರಿ ಘಟಕ ಕಾರ್ಯಾಚರಿಸಲಿದೆ. ಜಿಲ್ಲೆಯಲ್ಲಿ ಇನ್ನು ಕೆಲ ದಿನಗಳಲ್ಲಿ ಒಟ್ಟು ಮೂರು ಸಂಚಾರಿ ಘಟಕ ಆರಂಭಗೊಳ್ಳಲಿದ್ದು ಇನ್ನಿತರ ತಾಲೂಕುಗಳಲ್ಲಿಯೂ ಸಂಚರಿಸಲಿದೆ.
ಹೇಗೆ ಕಾರ್ಯನಿರ್ವಹಣೆ:
ಮಾರುತಿ ಆಮ್ನಿಯನ್ನು ಸಂಚಾರಿ ಘಟಕವಾಗಿ ಮಾರ್ಪಾಡು ಮಾಡಲಾಗಿದೆ. ಘಟಕದ ಒಳಭಾಗದಲ್ಲಿ ಸುರಕ್ಷಿತ ಚೇಂಬರ್ ನಿರ್ಮಿಸಲಾಗಿದ್ದು, ಓರ್ವ ಟೆಕ್ನಿಶಿಯನ್ ಕಾರ್ಯನಿರ್ವಹಿಸುತ್ತಾರೆ. ವಾಹನದ ಚಾಲಕನೇ ಸಹಾಯಕನಾಗಿಯೂ ತೊಡಗಿಸಿಕೊಳ್ಳಲಿದ್ದಾರೆ. ಸಂಚಾರಿ ಘಟಕದ ಹೊರಭಾಗದಲ್ಲಿ ಕೋವಿಡ್-19 ಶಂಕಿತ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವ್ಯಕ್ತಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿದ ಬಳಿಕ ಆಮ್ನಿಯನ್ನು ಸ್ಯಾನಿಟೈಸಿಂಗ್ ಮಾಡಲಾಗುತ್ತದೆ. ಪ್ರತಿ ತಪಾಸಣೆಯ ಬಳಿಕವೂ ಇದು ಪುನರಾವರ್ತನೆಯಾಗುತ್ತದೆ. ಚೆಂಬರ್ ಒಳಭಾಗದಲ್ಲಿ ಪರೀಕ್ಷಾ ಕಿಟ್, ಕೈತೊಳೆಯಲು ವ್ಯವಸ್ಥೆ ಹಾಗೂ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ. ಚೇಂಬರ್‌ನಲ್ಲಿ ಕುಳಿತುಕೊಳ್ಳುವ ಟೆಕ್ನಿಶಿಯನ್ ಗೌಸ್, ಮಾಸ್ಕ್ ಧರಿಸಿದರೆ, ವಾಹನದ ಚಾಲಕ ಪಿಪಿಇ ಕಿಟ್ ಬಳಸುತ್ತಾನೆ. ತಪಾಸಣೆಗೊಳಪಡುವ ವ್ಯಕ್ತಿ ಸಂಚಾರಿ ಘಟಕದ ಸಂಪರ್ಕಕ್ಕೆ ಬಾರದೇ ಇರುವುದರಿಂದ ಇದು ಅತ್ಯಂತ ಸುರಕ್ಷಿತ ವಿಧಾನ ಎನ್ನಲಾಗಿದೆ.
ಮಾದರಿ ಸಂಗ್ರಹ ಸಂಚಾರಿ ಘಟಕದಲ್ಲಿ ಕೋವಿಡ್ ಕುರಿತು ಅರಿವು ಮೂಡಿಸುವ ಸಲುವಾಗಿ ಧ್ವನಿವರ್ದಕವನ್ನು ಅಳವಡಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಗ್ರಾಮೀಣ ಪ್ರದೇಶ, ಅಶಕ್ತರಿಗೆ ಅನುಕೂಲ:
ಕೋವಿಡ್ 19 ಸಂಶಯಾಸ್ಪದ ಪ್ರಕರಣಗಳನ್ನು ಪರೀಕ್ಷೆ ಮಾಡುವುದು ಅಗತ್ಯವಾಗಿದ್ದು, ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಈ ಸಂಚಾರಿ ಘಟಕವನ್ನು ಆರಂಭಿಸಲಾಗಿದೆ. ಬೇರೆ ರಾಜ್ಯಗಳಿಂದ ಬಂದಿರುವ ಗರ್ಭೀಣಿ ಸ್ತ್ರೀಯರು, ಶೀತ, ಕೆಮ್ಮು, ಜ್ವರದಂತಹ ಲಕ್ಷಣಗಳಿದ್ದು ಕೋವಿಡ್ ಸಂಶಯವಿದ್ದವರು, ಅಸ್ತಮಾ, ನ್ಯೂಮೋನಿಯಾ ಮುಂತಾದ ಖಾಯಿಲೆಯಿಂದ ಬಳಲುತ್ತಿರುವವರು, ಕ್ವಾರಂಟೈನ್‌ನಲ್ಲಿ ಇದ್ದು ಅನಾರೋಗ್ಯ ಹೊಂದಿರುವವರು, ಹಿರಿಯ ನಾಗರಿಕರು ಹಾಗೂ ಹಳ್ಳಿ ಪ್ರದೇಶದಲ್ಲಿ ವಾಸವಿದ್ದು ಕೋವಿಡ್ ೧೯ ಸೋಂಕಿನ ಶಂಕಿತರಾಗಿದ್ದರೆ ಅಂತಹ ವ್ಯಕ್ತಿಗಳ ತಪಾಸಣೆಗೆ ಸಂಚಾರಿ ಘಟಕ ಉಪಯೋಗವಾಗಲಿದೆ.
ರೋಗಿಗಳು ಇರುವಲ್ಲಿಗೆ ತೆರಳಿ ದ್ರವದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ದಿನದಲ್ಲಿ ಕನಿಷ್ಠ 4 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸಂಚರಿಸಿ, 50 ಗಂಟಲು ದ್ರವ ಮಾದರಿ ಸಂಗ್ರಹಿಸುವ ಯೋಜನೆ ಒಂದು ಸಂಚಾರಿ ಘಟಕಕ್ಕಿದೆ. ಕುಂದಾಪುರ ತಾಲೂಕು ಆಸ್ಪತ್ರೆ ಹಾಗೂ ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ಈಗಾಗಲೇ ಸ್ವ್ಯಾಬ್ ಸಂಗ್ರಹಿಸಲು ಕಿಯೋಸ್ಕ್ ಇದ್ದು, ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಸಂಚರಿಸಲಿದೆ.
ಡಾ. ನಾಗಭೂಷಣ ಉಡುಪರ ಯೋಜನೆ. ಕುಂದಾಪುರ ಸರಕಾರಿ ನೌಕರರ ಸಂಘದ ಸಹಕಾರ:
ರಾಜ್ಯದಲ್ಲಿ ಕೆಲವೆಡೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆರಂಭಿಸಲಾಗಿರುವ ಸಂಚಾರಿ ಪ್ರಯೋಗಾಲಯದಲ್ಲಿ ಕೆಲವೊಂದು ತಾಂತ್ರಿಕ ಗೊಂದಲಗಳಿರುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಈ ನಡುವೆ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಮಾರುತಿ ಆಮ್ನಿಯಲ್ಲಿ ಸಂಚಾರಿ ಪ್ರಯೋಗಾಲಯ ಆರಂಭಿಸುವ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿ, ಕೋವಿಡ್ ನೋಡೆಲ್ ಅಧಿಕಾರಿಯ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದರು. ಜಿಲ್ಲಾಡಳಿತದಿಂದ ಅನುಮತಿ ದೊರೆತ ತಕ್ಷಣ ಕುಂದಾಪುರದಲ್ಲಿ ಮೊದಲು ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ತ್ರಾಸಿಯ ವರ್ಕ್‌ಶಾಪ್‌ನಲ್ಲಿ ಮಾರುತಿ ಆಮ್ನಿಯನ್ನು ಮಾರ್ಪಾಡುಗೊಳಿಸಿ ಸಂಚಾರಿ ಘಟಕ ಸಿದ್ಧಪಡಿಸಲಾಗಿತ್ತು. ಸುಮಾರು ೪೦,೦೦೦ ರೂ. ವೆಚ್ಚದಲ್ಲಿ ಮಾರ್ಪಾಡುಗೊಳಿಸಲಾಗಿದ್ದು, ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ ವಲಯದ ಸಹಕಾರ ದೊರೆತಿದೆ.
ಸಂಚಾರಿ ಘಟಕ ಅತಿ ಸುಲಭ ಹಾಗೂ ಕಡಿಮೆ ವೆಚ್ಚದ ಯೋಜನೆಯಾಗಿದ್ದು, ಜಿಲ್ಲಾಡಳಿತ ಮಾರುತಿ ಆಮ್ನಿಯನ್ನು ಆರು ತಿಂಗಳ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಜಿಲ್ಲಾಡಳಿತವು ಆಮ್ನಿ ಬಾಡಿಗೆ ಹಾಗೂ ಚಾಲಕನ ಸಂಬಳವನ್ನು ಭರಿಸುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ.
ಉಡುಪಿ ಜಿಲ್ಲಾಧಿಕಾರಿಯಿಂದ ಚಾಲನೆ:
ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ನಿರ್ವಹಿಸಲ್ಪಡುವ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ನೂತನ ಪರಿಕಲ್ಪನೆಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಗುರುವಾರ ರಜತಾದ್ರಿ ಆವರಣದಲ್ಲಿ ಚಾಲನೆ ನೀಡಿದ್ದಾರೆ. ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಕೋವಿಡಿ-19 ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್, ಕುಂದಾಪುರ ಎಸಿ ರಾಜು ಕೆ., ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ ತಾಲೂಕು ಅಧ್ಯಕ್ಷ ದಿವಾಕರ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
ಸಂಚಾರಿ ಘಟಕದ ಮೂಲಕ ಜಿಲ್ಲೆಯ ಗರ್ಭೀಣಿಯರು, ಹಿರಿಯ ನಾಗರಿಕರು ಹಾಗೂ ಇನ್ನಿತರ ಕೋವಿಡ್ ಸೋಂಕು ಶಂಕಿತರ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಅಂಬುಲೆನ್ಸ್‌ನಲ್ಲಿ ಶಂಕಿತರನ್ನು ಆಸ್ಪತ್ರೆಗೆ ಕರೆಯರುವ ಬದಲಿಗೆ ಜನರು ಇರುವಲ್ಲಿಗೆ ತೆರಳಿ ತಪಾಸಣೆ ನಡೆಸುವ ಸಲುವಾಗಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. – ಜಿ. ಜಗದೀಶ್, ಜಿಲ್ಲಾಧಿಕಾರಿಗಳು ಉಡುಪಿ
ಕೋವಿಡ್-19 ತಪಾಸಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಂಚಾರಿ ಗಂಟಲು ದ್ರವ ತಪಾಸಣಾ ಪ್ರಯೋಗಾಲಯ ಆರಂಭಿಸಲಾಗಿದೆ. ಕಡಿಮೆ ವೆಚ್ಚದಲ್ಲಿ, ಸುಲಭವಾಗಿ ಗ್ರಾಮೀಣ ಭಾಗದ ಗರ್ಭಿಣಿಯರು ಹಾಗೂ ಕೋವಿಡ್-19 ಶಂಕಿತರನ್ನು ಗುರುತಿಸಿ ಸ್ವ್ಯಾಬ್ ತೆಗೆಯಲಾಗುತ್ತದೆ. ಪ್ರತಿದಿನ 3-4 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ. – ಡಾ. ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ ಕುಂದಾಪುರ