Kundapra.com ಕುಂದಾಪ್ರ ಡಾಟ್ ಕಾಂ

ಬೋಗಸ್ ದಾಖಲೆಗಳ ಸೃಷ್ಟಿಕರ್ತ- ನಾಗೇಶ್ ಕಾಮತ್ ಬಂಧನ

ಕುಂದಾಪುರ: ಕುಂದಾಪುರ ತಹಶೀಲ್ದಾರ್ ಸೇರಿದಂತೆ, ಉಪವಿಭಾಗಾಧಿಕಾರಿಗಳ ಸಹಿತ ಇನ್ನಿತರ ಅಧಿಕಾರಿಗಳ ಸಹಿ ಬಳಸಿ ಖೊಟ್ಟಿ ದಾಖಲೆಗಳನ್ನು ತಯಾರಿಸುತ್ತಿದ್ದ ಕೋಡಿ ನಾಗೇಶ್ ಕಾಮತ್ ಎಂಬವನನ್ನು ಕುಂದಾಪುರ ಪೋಲಿಸರು ಬಂಧಿಸಿದ್ದಾರೆ. ಬಂಧಿತ ನಾಗೇಶ್ ಕುಂದಾಪುರ ತಾಲೂಕು ಕಛೇರಿ ಹಾಗೂ ಇನ್ನಿತರ ಕಛೇರಿಗಳ ಖಾಸಗಿ ಡಾಕ್ಯುಮೆಂಟರ್ ರೈಟರ್ ಆಗಿದ್ದು ಹಲವಾರು ವರ್ಷಗಳಿಂದಲೂ ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಿಂದ ಅಗತ್ಯವಿರುವ ದಾಖಲೆಗಳನ್ನು ಇನ್ನಿತರ ಮದ್ಯ ವರ್ತಿಗಳಂತೆ ಒದಗಿಸಿ ಕೊಡುತ್ತಿದ್ದ ಎನ್ನಲಾಗಿದೆ. ಆದರೆ ಖುದ್ದು ತಹಶೀಲ್ದಾರರೇ ಮಾನ್ಯ ಮಾಡದಿದ್ದ ದಾಖಲೆಗಳನ್ನು ಸಹಾ ಕ್ಷಣಮಾತ್ರದಲ್ಲಿ ಓ.ಕೆ. ಮಾಡಿಸಿಕೊಡುವ ತಾಕತ್ತು ಹೊಂದಿದ್ದ ನಾಗೇಶ್ ಕಾಮತ್ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿದ್ದು ತಾಲೂಕು ಕಛೇರಿ, ಉಪವಿಭಾಗಾಧಿಕಾರಿಗಳ ಕೆಲಸ ಯಾವುದೇ ತಡೆಯಿಲ್ಲದೆ ಆಗ ಬೇಕಾದಲ್ಲಿ ಸಂಬಂಧ ಪಟ್ಟವರು ಇನ್ನಿತರ ಬ್ರೋಕರ್ ಗಳಿಗಿಂತಲೂ ನಾಗೇಶನನ್ನೇ ಅರಸಿ ಬರುವಂತಾಗಿತ್ತು.

ಇತೀಚೆಗಷ್ಟೇ ಕುಂದಾಪುರ ಕಸಬಾ ಕೋಡಿ ಗ್ರಾಮದ ರುಕ್ಸಾನಾ ಬಿನ್ ದಿ. ಆಸಿಯಾ ಯಾ ಐಸಾಬಿ ಎಂಬವರಿಗೆ ಸೇರಿದ ಕುಂದಾಪುರ ಕಸಬ ಗ್ರಾಮದ ಸ.ನ.267/14 ರಲ್ಲಿ 10 ಎಕ್ರೆ ಜಾಗವನ್ನು ಭೂ ಪರಿವರ್ತನೆಗಾಗಿ ತಹಶೀಲ್ದಾರರ ನಕಲಿ ಸಹಿ ಮೂಲಕ ಹಿಂಬರಹದ ನಕಲಿ ಆದೇಶ ಹೊರಡಿಸಿದ್ದು ಅಸಲಿ ತಹಶೀಲ್ದಾರರ ಗಮನಕ್ಕೆ ಬಂದು ತಹಶೀಲ್ದಾರ್ ಗಾಯತ್ರಿ ನಾಯಕ ಅವರು ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಹಶೀಲ್ದಾರರ ದೂರನ್ನು ಬೆಂಬತ್ತಿ ಹೊರಟ ಪೋಲಿಸರೇ ಬೆಚ್ಚಿ ಬೀಳುವಂತೆ ಸಾರ್ವಜನಿಕರು ಹಾಗೂ ತಾಲೂಕು ಕಚೇರಿಯ ನಡುವಿನ ಸೇತುವೆ ಆಗಿರುವ ಅಸಂಖ್ಯಾತ ಮದ್ಯವರ್ತಿಗಳು ಗೋಚರಿಸಿದ್ದರು. ಕೊನೆಗೆ ಅವರ ನಡುವೆ ಫಿಲ್ಟರ್ ಮಾಡಿ ಶೋಧಿಸಿದಾಗ ಸಿಕ್ಕಿ ಬಿದ್ದ ಮೂವರಲ್ಲಿ ನಾಗೇಶ್ ಕಾಮತ್ ಅಧಿಕಾರಿಗಳ ಪೋರ್ಜರಿ ಸಹಿಯಂತಹ ಪ್ರಮುಖ ಹುದ್ದೆ ನಿಭಾಯಿಸುತ್ತಿದ್ದ ಎನ್ನಲಾಗಿದೆ. ಸ್ಥಳೀಯ ಮುಖ್ಯ ರಸ್ತೆಯಲ್ಲಿರುವ ಬೆನಕ ಗ್ರಾಫಿಕ್ಸ್ ಸಂಸ್ಥೆಯಲ್ಲಿ ಸರ್ಕಾರಿ ನಕಲಿ ದಾಖಲೆಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳ ನಕಲಿ ಸಹಿ ಇರುವ ರಬ್ಬರ್ ಸ್ಟಾಂಪ್ ಸೀಲುಗಳನ್ನು ಪೋಲಿಸರು ವಶ ಪಡಿಸಿ ಕೊಂಡಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗೂಡಂಗಡಿ ಸಂಘರ್ಷ: ಕೆಲವೇ ಸಮಯದ ಹಿಂದೆಯಷ್ಟೇ ಹೊಸ ಬಸ್ಸು ನಿಲ್ದಾಣದ ಫೆರ್ರಿ ರಸ್ತೆಯ ತಿರುವಿನಲ್ಲಿ ರಾತ್ರಿ ಬೆಳಗಾಗುವುದರೊಳಗೆ ಬೃಹತ್ ಆಕಾರದಲ್ಲಿ ಸ್ಥಾಪಿಸಲ್ಪಟ್ಟ ಗೂಡಂಗಡಿಯನ್ನು ಆಕ್ರಮ ಎಂಬ ನೆಲೆಯಲ್ಲಿ ಪುರಸಭೆಯು ಧ್ವಂಸ ಗೊಳಿಸಿ ಬಿಟ್ಟಿತು ಈ ಸಂದರ್ಭದಲ್ಲಿ ಬಡವನ ಬದುಕನ್ನೇ ನುಂಗಿ ಬಿಟ್ಟಿದ್ದಾರೆ ಎಂದು ಬಿಜೆಪಿಯ ಪುರಸಭಾ ಸದಸ್ಯರು  ಒಂದೇ ಸಮ ಪುರಸಭೆಯ ವಿರುದ್ಧ ಸಮರವನ್ನೇ ಸಾರಿ ಕೊನೆಗೂ ಆ ಬಡವನಿಗೆ ಅದೇ ಜಾಗದಲ್ಲಿ ನಾಲ್ಕು ಕಂಬಗಳ ಮೇಲೆ ಪ್ಲಾಸ್ಟಿಕ್ ಹೊದೆಸಿ ಹೊಟ್ಟೆ ಹೊರೆದು ಕೊಳ್ಳುವ ಮಹಾ ಮಾನವೀಯತೆಯನ್ನು ತೋರಿದ್ದರು.  ವಿಪರ್ಯಾಸವೆಂದರೆ ಇದೀಗ ಅದೇ ಬಡವ ನಕಲಿ ಸಹಿ ಗಳ ಆರೋಪದಲ್ಲಿ ಪೋಲಿಸ್ ವಶವಾಗಿರುವ ಕೋಡಿ ನಾಗೇಶ್ ಕಾಮತ್ ಎನ್ನುವುದು ಬಹು ಚರ್ಚೆಯ ವಿಷಯವಾಗಿದೆ.

ಮದ್ಯವರ್ತಿಗಳ ನೆಟ್ ವರ್ಕ್ : ಭೂ ಪರಿವರ್ತನೆ, ಖಾತಾ ಬದಲಾವಣೆ, ನಿರಾಪೇಕ್ಷಣಾ ಪತ್ರ  ಸಹಿತ, ಬ್ಯಾಂಕ್ ಸಾಲ, ಋಣ ಭಾರಗಳಿಗೂ ಬೇಕಾಗುವ ಪ್ರಮುಖ ಅಧಿಕಾರಿಗಳ ಸಹಿಯನ್ನೇ ನಕಲಿ ಮಾಡಿ ಪೋರ್ಜರಿ ದಾಖಲೆಗಳನ್ನು ತಯಾರಿಸುವ ಪ್ರಕರಣ ಬಯಲಾಗುತ್ತಲೇ ಕುಂದಾಪುರ ತತ್ತರಿಸಿ ಹೋಗಿದ್ದು, ಈಗಾಗಲೇ ಊರ್ಜಿತದಲ್ಲಿರುವ ಹಲವು ದಾಖಲೆಗಳ ಬಗ್ಗೆ ತಲಕೆಡಿಸಿಕೊಳ್ಳುವಂತಾಗಿದೆ. ಅಂದ ಹಾಗೆ ಕುಂದಾಪುರದಲ್ಲಿ ಮದ್ಯವರ್ತಿ ಗಳ ಬೃಹತ್ ನೆಟ್ವರ್ಕ್ ಅತ್ಯಂತ ಪಾಂಗಿತವಾಗಿ ಕಾರ್ಯಾಚರಿಸುತ್ತಿದ್ದು, ಇದಕ್ಕೆ ಅಧಿಕಾರಿಗಳ ದುಡ್ಡು ಮಾಡುವ ಲಾಲಸೆಯೇ ಕಾರಣ ವೆನ್ನಲಾಗುತ್ತಿದೆ. ಅಂದ ಹಾಗೆ ತನ್ನ ಈ ಧಂದೆಯಲ್ಲಿ ಗಣಪ, ಸತೀಶ್ ಸೇರಿದಂತೆ ಇನ್ನೂ ಕೆಲವು ಹೆಸರುಗಳನ್ನು ನಾಗೇಶ್ ಪೋಲಿಸರಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಕೇಳಿ ಬಂದಿದೆ.

Exit mobile version