Kundapra.com ಕುಂದಾಪ್ರ ಡಾಟ್ ಕಾಂ

ಕಂಬದಕೋಣೆ: ಕ್ವಾರಂಟೈನ್ ಕೇಂದ್ರದಲ್ಲಿ ಸ್ವಯಂಸೇವಕರಿಂದ ಉತ್ತಮ ಸೇವೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುತ್ತಲಿನ ಕೊರೊನಾ ಕ್ವಾರಂಟೈನ್ ಕೇಂದ್ರಗಳಿಂದ ಅಲ್ಲಿನ ಕೊರತೆ, ಅವ್ಯವಸ್ಥೆಗಳ ಬಗ್ಗೆ ನಿವಾಸಿಗಳಿಂದ ದೂರು, ಅಸಹನೆಯ ನುಡಿ ಕೇಳಿಬರುತ್ತಿದ್ದರೆ ಖಂಬದಕೋಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರದ ನಿವಾಸಿಗಳು ಅಲ್ಲಿ ಸ್ವಗೃಹವಾಸದ ಹಿತ ಅನುಭವಿಸುತ್ತಿದ್ದೇವೆ ಎನ್ನುತ್ತಿದ್ದಾರೆ.

ಹಿಂದಿನ ಬುಧವಾರ ತೆರೆದ ಈ ಕೇಂದ್ರದಲ್ಲಿ ಮುಂಬೈ ಮತ್ತು ಇತರೆಡೆಗಳಿಂದ ಹಿಂತಿರುಗಿದ 48 ಪುರುಷರು, 18 ಮಹಿಳೆಯರು, 17 ಮಕ್ಕಳು ಸೇರಿ 83 ಜನರಿದ್ದಾರೆ. ವಿಶಾಲ ಸ್ಥಳಾವಕಾಶ ಇರುವ ಇಲ್ಲಿನ ಕೊಠಡಿಗಳಲ್ಲಿ ಕುಟುಂಬಗಳು ಒಟ್ಟಾಗಿ, ಉಳಿದವರು ತಂಡಗಳಾಗಿ ಉಳಿದುಕೊಂಡಿದ್ದಾರೆ.

ಇಲ್ಲಿ ದಿನವಿಡೀ ನೀರು ಲಭ್ಯ. ಬೆಳಿಗ್ಗೆ ಏಳುತ್ತಿದ್ದಂತೆ ಮಕ್ಕಳಿಗೆ, ಬೇಕು ಎನ್ನುವ ಹಿರಿಯರಿಗೆ ಬಿಸಿ ನೀರು ಸಿದ್ಧ. 8 ಗಂಟೆಯ ಉಪಾಹಾರಕ್ಕೆ ಇಡ್ಲಿ ಚಟ್ನಿ, ಕೇಸರಿ ಬಾತ್, ಮಕ್ಕಳಿಗೆ ಹಾಲು, ಬಿಸ್ಕಿಟ್; ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ತಡವಾಗಿ ಇನ್ನೊಂದು ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಬರುತ್ತದೆ. ಮಧ್ಯಾಹ್ನದ ಊಟದ ಜತೆ ಪಾಯಸ, ಸಿಹಿ. ಸಂಜೆ ಟೀ, ಬೋಂಡಾ ಅಥವಾ ವಡೆ ವಿತರಣೆ, ಕುಡಿಯಲು ಬಾಟಲಿ ನೀರು. ಧರಿಸಲು ಮಾಸ್ಕ್, ಕೈ ಸ್ವಚ್ಛತೆಗೆ ಸ್ಯಾನಿಟೈಸರ್ ಸ್ಥಳೀಯವಾಗಿ ಒದಗಿಬರುತ್ತಿದೆ.

ಎಲ್ಲದರ ಹಿಂದೆ ಶಿಸ್ತು, ನಿಯಮಿತ ಕಾಲಬದ್ಧತೆ ಇದೆ. ಪ್ರತಿಯೊಬ್ಬರ ಅಗತ್ಯಕ್ಕೂ ಸ್ಪಂದನೆ ಇದೆ. ಇಷ್ಟೆಲ್ಲ ಇರುವುದರಿಂದ ಕ್ವಾರಂಟೈನ್ ವಾಸ ಎಂಬ ಮಾನಸಿಕ ಬೇಗುದಿಯ ನಡುವೆ ನಿವಾಸಿಗಳು ಮನೆಗಿಂತಲೂ ಅಧಿಕ ಸುಖ, ಸೌಲಭ್ಯ ಇಲ್ಲಿದೆ ಎನ್ನುವುದು. ಪ್ರತಿಯಾಗಿ ಅವರೆಲ್ಲ ತಮ್ಮ ತಾತ್ಕಾಲಿಕ ನಿವಾಸದ, ಅದರ ಆವರಣದ ಸ್ವಚ್ಛತೆಗೆ ಗಮನ ನೀಡುತ್ತಿದ್ದಾರೆ. ಶೌಚಾಲಯ ಮತ್ತು ಕೊಠಡಿಗಳ ನೈರ್ಮಲ್ಯವನ್ನು ನಿಭಾಯಿಸುತ್ತಿದ್ದಾರೆ.

ಇವೆಲ್ಲ ಸಂಘಟನೆ, ಸೇವೆಯ ಹಿಂದಿನ ಶಕ್ತಿ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಸಮಿತಿಯ ಯುವ, ಉತ್ಸಾಹಿ ಕಾರ್ಯಾಧ್ಯಕ್ಷ ಸುನಿಲ್ ಪೂಜಾರಿ ನಾಯ್ಕನಕಟ್ಟೆ ಮತ್ತು ಗೆಳೆಯ ಪ್ರಸಾದ್ ಬೈಂದೂರು. ನಾಯ್ಕನಕಟ್ಟೆ ಗೆಳೆಯರು, ಸೇವಾ ಭಾರತಿ ಕಾರ್ಯಕರ್ತರು, ದಾನಿಗಳು, ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಬೆನ್ನಿಗೆ ನಿಂತು ಶಕ್ತಿ ತುಂಬುತ್ತಿದ್ದಾರೆ. ಸುನಿಲ್ ಮತ್ತು ಪ್ರಸಾದ್ ದಿನದ ಎಲ್ಲ ಅಗತ್ಯದ ಅವಧಿಯಲ್ಲಿ ಇದ್ದು, ಉಸ್ತುವಾರಿ, ಸ್ವಸಹಾಯ ನಿರತರಾಗುವುದರಿಂದ ಕೇಂದ್ರದ ಹೊಣೆಗಾರ ಅಧಿಕಾರಿಗಳು ಬಂದು ಹೋಗುವ ಅತಿಥಿಗಳಾಗಿದ್ದಾರೆ. ಇಷ್ಟೆಲ್ಲ ಅನುಕೂಲ, ಸುಖ ಮನೆಯಲ್ಲೂ ಅಲಭ್ಯ ಎಂಬ ನಿವಾಸಿಗಳ ಮಾತಿಲ್ಲಿ ಸ್ವಸಂತೋಷ, ಸೇವಾಭಾವದಿಂದ ಅವರನ್ನು ನೋಡಿಕೊಳ್ಳುತ್ತಿರುವವರ ಬಗೆಗೆ ಕೃತಜ್ಞತೆ ಸೂಸುತ್ತದೆ./ಕುಂದಾಪ್ರ ಡಾಟ್ ಕಾಂ/

ಇದನ್ನೂ ಓದಿ:
► ಉಡುಪಿಯಲ್ಲಿ 36 ಗಂಟೆಗಳ ಲಾಕ್‌ಡೌನ್: ಜಿಲ್ಲಾಧಿಕಾರಿ – https://kundapraa.com/?p=37807 .
► ಕರೆ ಮಾಡಿ ಬೆದರಿಕೆ ಹಾಕುವ ಕಿಡಿಗೇಡಿಗಳಿಗೆ ಕಾನೂನು ಕ್ರಮ – https://kundapraa.com/?p=37789 .
► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 .
► ಕುಂದಾಪುರದಲ್ಲಿ120 ಬೆಡ್‌ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .

Exit mobile version