ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅನಗತ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಆಡಿಯೋವನ್ನು ಹರಿಬಿಡುವುದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಬೈಯುವುದು ಮುಂತಾದವುಗಳನ್ನು ಮಾಡಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.
ಅವರು ಶುಕ್ರವಾರ ಕುಂದಾಪುರ ತಾಲೂಕು ಪಂಚಾಯತ್ ಸಂಭಾಂಗಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಜಿಲ್ಲಾಡಳಿತ ಕಳೆದ ಮೂರು ತಿಂಗಳಿಂದ ಬಿಡುವಿರುದೇ ಕೆಲಸ ಮಾಡುತ್ತಿದೆ. ಆದರೆ ಒಂದಿಷ್ಟು ಕಿಡಿಗೇಡಿಗಳು ಅಗತ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಸಂದೇಶ ಹರಡುವುದು, ಮುಂಬೈಯಲ್ಲಿ ಕುಳಿತ ಕರೆ ಮಾಡಿ ಡಾನ್ ರೀತಿ ಮಾತನಾಡುವುದು, ಸ್ಥಳೀಯರು ಅನಗತ್ಯವಾಗಿ ಕರೆ ಮಾಡುವುದು ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದರು.
ಜಿಲ್ಲೆಯ ಜನರ ರಕ್ಷಣೆ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಂಡಿದ್ದೇವೆ. ಊಟ, ತಿಂಡಿ ಬಟ್ಟೆ ತೆಗೆದುಕೊಂಡು ಕ್ವಾರಂಟೈನ್ ಸೆಂಟರ್‌ಗಳಿಗೆ ತೆರಳುವುದರಿಂದ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿದೆ. ಕ್ವಾರಂಟೈನ್ ಸೆಂಟರ್‌ಗಳಿಗೆ ಹೊರಗಡೆಯಿಂದ ಏನನ್ನೂ ಕೊಡಬಾರದು ಎಂದು ಸೂಚನೆ ನೀಡಿದ್ದೇವೆ ಎಂದರು./ಕುಂದಾಪ್ರ ಡಾಟ್ ಕಾಂ ಸುದ್ದಿ/