Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ವೈದ್ಯರಿಂದ ಬಿಜೂರು ವಿಎಗೆ ನಿಂದನೆ ಆರೋಪ: ಕ್ಷಮೆಯೊಂದಿಗೆ ಪ್ರಕರಣ ಇತ್ಯರ್ಥ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ಬೈಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಪರೀಕ್ಷೆಗಾಗಿ ತೆರಳಿದ್ದ ತಾಲೂಕಿನ ಬಿಜೂರು ಗ್ರಾಮ ಲೆಕ್ಕಾಧಿಕಾರಿ ಅಂಜನಪ್ಪ ಸೋಗಿ ಎಂಬುವವರ ಮೇಲೆ ಆಸ್ಪತ್ರೆಯ ವೈದ್ಯ ಡಾ| ಮಹೇಂದ್ರ ಶೆಟ್ಟಿ ಎನ್ನುವವರು ನಿಂದಿಸಿ ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪವಿದ್ದು, ಅಂತಿಮವಾಗಿ ವೈದ್ಯ ಡಾ| ಮಹೇಂದ್ರ ಶೆಟ್ಟಿ ಅವರು ಕ್ಷಮೆ ಕೇಳುವುದರೊಂದಿಗೆ ಪ್ರಕರಣ ಇತ್ಯರ್ಥಗೊಂಡಿದೆ.

ಆಗಿದ್ದೇನು?
ಬಿಜೂರು ಗ್ರಾಮ ಲೆಕ್ಕಾಧಿಕಾರಿ (ವಿಎ) ಅಂಜನಪ್ಪ ಸೋಗಿ ಕೋವಿಡ್ ಪರೀಕ್ಷೆಗಾಗಿ ಬುಧವಾರ ಮಧ್ಯಾಹ್ನ ಬೈಂದೂರು ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾಗ ಹೊರಗಡೆ ಇದ್ದ ಆಸ್ಪತ್ರೆ ಸಿಬ್ಬಂದಿಗಳು ಮಾಹಿತಿ ನೀಡದ ಕಾರಣ, ನೇರವಾಗಿ ವೈದ್ಯ ಡಾ. ಮಹೇಂದ್ರ ಶೆಟ್ಟಿಯವರನ್ನು ಭೇಟಿಯಾಗಿ ಕೋವಿಡ್ ಪರೀಕ್ಷೆ ನಡೆಸಲು ಮನವಿ ಮಾಡಿಕೊಂಡಿದ್ದರು. ಈ ವೇಳೆಯಲ್ಲಿ ಡಾ. ಮಹೇಂದ್ರ ಶೆಟ್ಟಿ ಅವರು ಅವಾಚ್ಯವಾಗಿ ನಿಂದಿಸಿ ಒಳಗೆ ಬರಲು ಅನುಮತಿ ನೀಡಿದವರ್ಯಾರು ಎಂದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದರು ಎಂದು ಗ್ರಾಮಲೆಕ್ಕಾಧಿಕಾರಿ ಅಂಜನಪ್ಪ ಸೋಗಿ ಆರೋಪಿಸಿದ್ದಾರೆ. ವೈದ್ಯರ ಈ ನಡೆಯನ್ನು ತಾಲೂಕು ಗ್ರಾಮಲೆಕ್ಕಾಧಿಕಾರಿಗಳ ಸಂಘವು ಖಂಡಿಸಿ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ವೈದ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕುಂದಾಪುರ ಸಹಾಯಕ ಆಯುಕ್ತರಿಗೆ ಮನವಿ ನೀಡಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಎಸಿ ನೇತೃತ್ವದಲ್ಲಿ ಸಭೆ:
ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಮನವಿಯಂತೆ ಗುರುವಾರ ಬೆಳಿಗ್ಗೆ ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ. ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ಕರ್ತವ್ಯದ ಒತ್ತಡದಿಂದಾಗಿ ಈ ಘಟನೆ ನಡೆದಿದ್ದು, ಕ್ಷಮೆ ಕೇಳುತ್ತೇನೆ. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇನೆ ಎಂದಿದ್ದಾರೆ. ಎಸಿ ಅವರ ಸಮ್ಮುಖದಲ್ಲಿ ಡಾ. ಮಹೇಂದ್ರ ಶೆಟ್ಟಿ ಅವರು ಅಂಜನಪ್ಪ ಸೋಗಿ ಅವರಲ್ಲಿ ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ. ವೈದ್ಯರು ಕ್ಷಮೆ ಯಾಚಿಸಿರುವುದರಿಂದ ಈ ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂದು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘ ತಿಳಿಸಿದೆ.

ಇದನ್ನೂ ಓದಿ:
► ಉಡುಪಿ: 7 ದಿನ ಸರ್ಕಾರಿ ಕ್ವಾರಂಟೈನ್ ಪೂರೈಸಿದವರಿಗೆ ಹೋಂ ಕ್ವಾರಂಟೈನ್‌ಗೆ ಅನುಮತಿ – https://kundapraa.com/?p=37978 .
► ದ.ಕನ್ನಡ ಹಾಲು ಒಕ್ಕೂಟದಿಂದ ಜಾನುವಾರುಗಳಿಗೆ ವಿಮಾ ಸೌಲಭ್ಯ – https://kundapraa.com/?p=37935 .
► ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಗೆ ಅರ್ಜಿ ಆಹ್ವಾನ – https://kundapraa.com/?p=37963 .

 

Exit mobile version