ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮೇ 26: ದ.ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ ರಾಸುಗಳು ಮರಣ ಹೊಂದಿದ ಸಂಧರ್ಭದಲ್ಲಿ, ಹೈನುಗಾರರಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಇದರಿಂದ ಹೈನುಗಾರರು ಹೈನುಗಾರಿಕೆಯಲ್ಲಿ ಮುಂದುವರಿಯಲು ಕಷ್ಟವಾಗುತ್ತದೆ.
ಆದುದರಿಂದ ಹೈನುಗಾರರನ್ನು ಹೆಚ್ಚಿನ ರೀತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ರಾಸುಗಳ ಆಕಸ್ಮಿಕ ಮರಣದಿಂದಾಗುವ ಅನಿರೀಕ್ಷಿತ ನಷ್ಟಕ್ಕೆ ಪರಿಹಾರ ನೀಡುವ ಉದ್ಧೇಶದಿಂದ, ಹೈನುಗಾರರ ಎಲ್ಲಾ ರಾಸುಗಳಿಗೆ ವಿಮಾ ಸೌಲಭ್ಯ ಒದಗಿಸಲು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನಿಸಲಾಗಿರುತ್ತದೆ.
ಈ ಯೋಜನೆಯನ್ವಯ ಒಕ್ಕೂಟದಿಂದ 75% ಮತ್ತು ಹೈನುಗಾರರಿಂದ 25% ವಿಮಾ ವಂತಿಕೆಯನ್ನು ಭರಿಸಿ ಸುಮಾರು ಅಂದಾಜು 1 ಲಕ್ಷ ರಾಸುಗಳಿಗೆ ವಿಮಾ ಸೌಲಭ್ಯ ಮಾಡಲು ಉದ್ಧೇಶಿಸಿದ್ದು, ಅದರ ಅಂದಾಜು ಮೌಲ್ಯ ರೂ.೬ ಕೋಟಿಗಳಷ್ಟು ಆಗುತ್ತದೆ. ಈ ಯೋಜನೆಯನ್ನು ಜೂನ್ 1 ರಿಂದ ಜಾರಿಗೊಳಿಸಲಾಗುವುದು. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸಂಪರ್ಕಿಸಬಹುದಾಗಿದೆ.
ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕ ಸದಸ್ಯರು ತಮ್ಮ ಎಲ್ಲಾ ರಾಸುಗಳಿಗೆ ವಿಮಾ ಸೌಲಭ್ಯವನ್ನು ಪಡೆದುಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿರುತ್ತದೆ. ಎಲ್ಲಾ ಹೈನುಗಾರರು ಇದರ ಸೌಲಭ್ಯವನ್ನು ಪಡೆಯುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.