Kundapra.com ಕುಂದಾಪ್ರ ಡಾಟ್ ಕಾಂ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಮಾಡಿದ ಮಾದರಿ ಶಿಕ್ಷಕ ಬಾಬು ಶೆಟ್ಟಿ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಈ ಭಾರಿ ಲಾಕ್‌ಡೌನ್‌ನಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಲಾಗಿತ್ತು. ಆದರೆ ತನ್ನ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಬಾರದೆಂಬ ಈ ಶಿಕ್ಷಕನ ಸದಾಶಯ ಮಾತ್ರ ಪೋಸ್ಟ್‌ಪೋನ್ ಆಗಿರಲಿಲ್ಲ. ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದುದಲ್ಲದೇ ಅವರ ಮನೆಗಳಿಗೂ ತೆರಳಿ ಮಾರ್ಗದರ್ಶನ ಮಾಡಿದ್ದ ಹೆಸ್ಕತ್ತೂರು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಬಾಬು ಶೆಟ್ಟಿ ಅವರ ವೃತ್ತಿಪರತೆಗೆ ಶಿಕ್ಷಣ ಸಚಿವರೇ ಭೇಷ್ ಎಂದಿದ್ದಾರೆ.

ಲಾಕ್‌ಡೌನ್‌ನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ:
ಹೆಸ್ಕುತ್ತೂರು ಶಾಲೆಯಲ್ಲಿ ಒಟ್ಟು 43 ಮಕ್ಕಳಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆ ರಜೆಯಿದ್ದರೂ ಬಾಬು ಶೆಟ್ಟಿಯವರು ಎಸ್‌ಎಸ್‌ಎಲ್‌ಸಿ ವಿದಾರ್ಥಿಗಳ ಸಂಪರ್ಕದಲ್ಲಿದ್ದು, ಮನೆ ಮನೆಗೆ ತೆರಳಿ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ಮಾಡುತ್ತಿದ್ದರು. ಪೋಷಕರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸುತ್ತಿದ್ದ ಅವರು ಒಂದೊಂದು ಮಕ್ಕಳ ಮನೆಗೆ ಮೂರ‍್ನಾಲ್ಕು ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಪರಿಪಾಠವನ್ನು ಅವರು ಹಲವು ವರ್ಷದಿಂದ ಮುಂದುವರಿಸುತ್ತಿದ್ದು, ಲಾಕ್‌ಡೌನ್ ಅವಧಿಯಾಗಿದ್ದರಿಂದ ಹೆಚ್ಚಿನ ಸಮಯ ಅದಕ್ಕೆ ಮೀಸಲಿರಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.

ವಿದ್ಯಾರ್ಥಿಗಳು ಫೇಲ್ ಆಗಿದ್ದೇ ಇಲ್ಲ:
ಬಾಬು ಶೆಟ್ಟಿ ಅವರು ಶಿಕ್ಷಕ ವೃತ್ತಿಗೆ ಸೇರಿದ್ದು 23 ವರ್ಷಗಳ ಹಿಂದೆ. ಕಾವಡಿ ಸರಕಾರಿ ಪ್ರೌಢಶಾಲೆ, ಮಣೂರು ಹಾಗೂ ಕೋಣಿ ಪ್ರೌಢಶಾಲೆಯಲ್ಲಿ ಶಿಕ್ಷಕರಾದ್ದರು. ಬಳಿಕ ಎರಡು ವರ್ಷ ಬ್ರಹ್ಮಾವರದಲ್ಲಿ ಬಿಆರ್‌ಸಿ ಆಗಿಯೂ ಸೇವೆ ಸಲ್ಲಿಸಿದ್ದ ಅವರು, ಕಳೆದ ಹನ್ನೊಂದು ವರ್ಷದಿಂದ ಹೆಸ್ಕುತ್ತೂರು ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟು ವರ್ಷಗಳ ಸೇವಾ ಅವಧಿಯಲ್ಲಿ ಅವರು ರಜೆ ತೆಗೆದುಕೊಂಡಿದ್ದೇ ವಿರಳ. ಶನಿವಾರ ಮಧ್ಯಾಹ್ನ ಸಹ ತರಗತಿಗಳನ್ನು ನಡೆಸುತ್ತಿದ್ದರು. ಅವರು ಗಣಿತ ವಿಷಯ ಕಲಿಸುತ್ತಿದ್ದು, ಇದೂವರಗೆ ಪಾಠ ಹೇಳಿದ ವಿದ್ಯಾರ್ಥಿಯೂ ಗಣಿತದಲ್ಲಿ ಫೇಲಾಗಿದ್ದಿಲ್ಲ. ಅವರು ಬಂದಾಗಿನಿಂದಲೂ ಹೆಸ್ಕುತ್ತೂರು ಪ್ರೌಢಶಾಲೆ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100ಕ್ಕೆ 100 ಫಲಿತಾಂಶ ಪಡೆಯುತ್ತಾ ಬಂದಿದೆ.

5 ಭಾರಿ ಸಾಧಕ ಶಿಕ್ಷಕ ಪ್ರಶಸ್ತಿ ಪಡೆದಿದ್ದರು, ಸಚಿವರಿಂದಲೂ ಮೆಚ್ಚುಗೆ:
ಬಾಬು ಶೆಟ್ಟಿ ಅವರಿಗೆ ಒಂದು ಭಾರಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಐದು ಭಾರಿ ಸಾಧಕ ಶಿಕ್ಷಕ ಪ್ರಶಸ್ತಿ ದೊರೆತಿದೆ. ಹತ್ತಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಗೌರವಗಳು ಸಂದಿದೆ. ಜಪ್ತಿಯವರಾದ ಬಾಬು ಶೆಟ್ಟಿ ಅವರು ಸದ್ಯ ವಕ್ವಾಡಿಯಲ್ಲಿ ಮಡದಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಇವರ ಶಿಕ್ಷಣ ಪ್ರೀತಿ ಮೆಚ್ಚಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸುವ ಜೊತೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿಯೂ ಈ ವಿಚಾರ ಹಂಚಿಕೊಂಡಿದ್ದಾರೆ/ಕುಂದಾಪ್ರ ಡಾಟ್ ಕಾಂ ವರದಿ/

    • ಅತ್ಯಂತ ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಶಿಕ್ಷಕನಾಗಿದ್ದು, ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆನ್ನುವುದು ನನ್ನ ಕಾಳಜಿ. ಒಳ್ಳೆಯ ಕೆಲಸ ಮಾಡಿದರೆ ಸಮಾಜ ಖಂಡಿತವಾಗಿಯೂ ಗುರುತಿಸುತ್ತೆ ಎನ್ನುವುದಕ್ಕೆ ಇದೇ ಸಾಕ್ಷಿ. ಶಿಕ್ಷಣ ಸಚಿವರ ಪ್ರಶಂಸೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಸ್ಪೂರ್ತಿ ನೀಡಿದೆ. – ಬಾಬು ಶೆಟ್ಟಿ, ಪ್ರಭಾರ ಮುಖ್ಯಶಿಕ್ಷಕ, ಹೆಸ್ಕುತ್ತೂರು ಸರ್ಕಾರಿ ಪ್ರೌಢಶಾಲೆ
  • ಕಳೆದ 23 ವರ್ಷಗಳಿಂದ ತನ್ನ ತರಗತಿಯ ಮಕ್ಕಳು ನೂರಕ್ಕೆ ನೂರು ತೇರ್ಗಡೆಯಾಗುತ್ತಿರುವ ಸಂಗತಿ ಬಹಳ ಹೆಮ್ಮೆಯಿಂದ, ವಿನೀತನಾಗಿ ಹಂಚಿಕೊಂಡರು. ಬಾಬು ಶೆಟ್ಟಿಯವರಂತಹ ಶಿಕ್ಷಕರೇ ನಮ್ಮ ಶಾಲೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತಿದ್ದಾರೆ. ಉಡುಪಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ದತೆ ಸಮಯ ಅವರ ಪರಿಚಯವಾಗಿದ್ದು, ಅವರ ಶಿಕ್ಷಣ ಪ್ರೇಮ ಅಭಿನಂದನಾರ್ಹ – ಸುರೇಶ್ ಕುಮಾರ್, ರಾಜ್ಯ ಶಿಕ್ಷಣ ಸಚಿವ

Exit mobile version