ಕುಂದಾಪ್ರ ಡಾಟ್ ಕಾಂ ವರದಿ.
ಗಂಗೊಳ್ಳಿ: ಸರಕಾರ ಗುಡಿಸಲು ರಹಿತ ರಾಜ್ಯ ನಿರ್ಮಾಣಕ್ಕೆ ಪಣತೊಟ್ಟಿರುವ ಈ ಹೊತ್ತಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದಲ್ಲಿ ಹರಕಲು ಮನೆಯಲ್ಲಿ ಕುಟುಂಬವೊಂದು ವಾಸಿಸುತ್ತಿರುವುದು ವ್ಯವಸ್ಥೆಯನ್ನೇ ನಾಚಿಸುವಂತಿದೆ.
ಗಂಗೊಳ್ಳಿ ಗ್ರಾಮದ ಬಂದರು ಬೇಲಿಕೇರಿ ಪ್ರದೇಶದಲ್ಲಿ ಕಡಲ ತೀರದಲ್ಲಿ ಕಳೆದ ೧೪ ವರ್ಷಗಳಿಂದ ವಾಸಿಸುತ್ತಿರುವ ಕೃಷ್ಣ ಖಾರ್ವಿ ಕುಟುಂಬ ಬಡತನದಲ್ಲೇ ಜೀವನ ನಡೆಸುತ್ತಿದೆ. ಮೀನುಗಾರಿಕೆಯನ್ನೇ ನಂಬಿರುವ ಈ ಬಡ ಕುಟುಂಬಕ್ಕೆ ವಾಸಿಸಲು ಸರಿಯಾದ ಮನೆಯಿಲ್ಲ. ಈ ಬಡ ಕುಟುಂಬ ನಿರ್ಮಿಸಿಕೊಂಡಿರುವ ಮನೆ ಜಾಗ ಸರಕಾರಿಯಾಗಿದ್ದು, ಇವರಿಗೆ ಹಕ್ಕುಪತ್ರ ಇಲ್ಲದಿರುವುದರಿಂದ ಸರಕಾರದ ಯಾವುದೇ ಸವಲತ್ತು ಈ ಬಡ ಕುಟುಂಬಕ್ಕೆ ದೊರೆಯುತ್ತಿಲ್ಲ. ಬೀಳುವ ಸ್ಥಿತಿಯಲ್ಲಿರುವ ಈ ಮನೆಯಲ್ಲಿ ಕೃಷ್ಣ ಖಾರ್ವಿ ಸಹಿತ ನಾಲ್ವರು ವಾಸಿಸುತ್ತಿದ್ದು ಮನೆಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲ. ಇಬ್ಬರು ಪುಟ್ಟ ಪ್ರತಿಭಾನ್ವಿತ ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿ ಕೂಡ ಹೆತ್ತವರ ಮೇಲಿದೆ. ಮಳೆಗಾಲದಲ್ಲಿ ಮಳೆಗೆ ಅಲ್ಲಲ್ಲಿ ಸೋರುತಿರುವ ಮನೆಯ ಮಾಡು, ಎಲ್ಲಿ ಮನೆ ಕುಸಿದು ಬೀಳುತ್ತದೋ ಎಂಬ ಚಿಂತೆ ಈ ಬಡ ಕುಟುಂಬವನ್ನು ಕಾಡತೊಡಗಿದೆ. ಮಳೆಗಾಲದ ಸಮಯದಲ್ಲಿ ಮನೆ ಬಿದ್ದು ಹೋಗುವ ಚಿಂತೆಯಲ್ಲೆ ರಾತ್ರಿ ಕಳೆಯಬೇಕಾದ ಅನಿವಾರ್ಯತೆ ಈ ಕುಟುಂಬದ್ದು. ಇನ್ನೊಂದೆಡೆ ಆರೊಗ್ಯದ ಸಮಸ್ಯೆಗಳು ಕುಟುಂಬವನ್ನು ಕಾಡುತ್ತಿರುವುದು ಈ ಬಡ ಕುಟುಂಬವನ್ನು ಮತ್ತಷ್ಟು ಜರ್ಜರಿತನ್ನಾಗಿ ಮಾಡಿದೆ.
ಕಳೆದ ಹಲವಾರು ವರ್ಷಗಳಿಂದ ಹರಕಲು ಮನೆಯಲ್ಲಿ ವಾಸಿಸುತ್ತಿರುವ ಈ ಬಡ ಕುಟುಂಬಕ್ಕೆ ವಾಸಿಸಲು ಯೋಗ್ಯವಾದ ಮನೆಯನ್ನು ನಿರ್ಮಿಸಿಕೊಡುವಲ್ಲಿ ಆಡಳಿತ ವರ್ಗ ವಿಫಲವಾಗಿದೆ. ಸರಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ಈ ಬಡ ಕುಟುಂಬಕ್ಕೆ ಪುಟ್ಟ ಮನೆಯೊಂದನ್ನು ನಿರ್ಮಿಸಿ ಕೊಡಲು ಜನಪ್ರತಿನಿಧಿಗಳ ಸಹಿತ ಯಾರೂ ಮುಂದಾಗದಿರುವುದು ಚಿಂತೆಗೀಡು ಮಾಡಿದೆ.
ಸೇವಾ ಸಂಕಲ್ಪ ತಂಡದಿಂದ ಮನೆ ನಿರ್ಮಾಣಕ್ಕೆ ಮುನ್ನುಡಿ:
ಇದೇ ಸಂದರ್ಭ ಈ ಬಡ ಕುಟುಂಬದ ಸಂಕಷ್ಟಗಳನ್ನು ಗಮನಿಸಿದ ಗಂಗೊಳ್ಳಿಯ ಸೇವಾ ಸಂಕಲ್ಪ ತಂಡ ಈ ಬಡ ಕುಟುಂಬಕ್ಕೆ 300ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಿಕೊಡುವ ಸಂಕಲ್ಪ ತೊಟ್ಟಿದೆ. ದುರ್ಘಟನೆ ಸಂಭವಿಸಿದ ನಂತರ ಪಶ್ಚಾತಾಪ ಪಡುವುದಕ್ಕಿಂತ ನಮ್ಮೂರಿನ ಜವಾಬ್ದಾರಿಯುತ ನಾಗರಿಕರಾದ ನಾವು ಅವರಿಗೆ ಪರ್ಯಾಯ ವ್ಯವಸ್ಥೆ ಯನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಮನೆ ನಿರ್ಮಾಣ ಕಾರ್ಯಕ್ಕೆ ಧುಮುಕಿರುವ ಟೀಮ್ ಸೇವಾ ಸಂಕಲ್ಪ ದಾನಿಗಳ ಸಹಾಯ ಯಾಚಿಸಿದೆ. ಈ ಮಹತ್ಕಾರ್ಯಕ್ಕೆ ದಾನಿಗಳ ಸಹಕಾರ ಅತ್ಯ ಅಮೂಲ್ಯವಾಗಿದೆ. ಸೇವಾ ಸಂಕಲ್ಪದ ಸೇವಕರೊಂದಿಗೆ ನಾಗರಿಕರು, ದಾನಿಗಳು ಹಾಗೂ ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಈ ಮಹತ್ಕಾಯದಲ್ಲಿ ಕೈ ಜೋಡಿಸಬೇಕಾಗಿದೆ. ಇವರು ವಾಸಿಸುತ್ತಿರುವ ಸ್ಥಳ ಸ್ವಂತ ಸ್ಥಳ ಆಗದೆ ಇರುವುದರಿಂದ ಸರ್ಕಾರದ ಯಾವುದೇ ಯೋಜನೆ ಸಿಗುವುದಿಲ್ಲ ಆದರಿಂದ ದಾನಿಗಳ ಸಹಕಾರವೇ ಆಧಾರ. ಒಂದು ಚದರ ಅಡಿಗೆ ಒಂದು ಸಾವಿರ ರೂ. ನಿಗದಿಪಡಿಸಲಾಗಿದ್ದು, ಮನೆ ನಿರ್ಮಾಣಕ್ಕೆ ಕನಿಷ್ಠ ಮುರು ಲಕ್ಷ ರೂ. ಅವಶ್ಯಕತೆ ಇದೆ. ದಾನಿಗಳು ಕನಿಷ್ಠ 1 ಚದರ ಅಡಿಯಿಂದ ಅವರಿಗೆ ಅನುಕೂಲವಾದ ರೀತಿಯಲ್ಲಿ ಚದರ ಅಡಿಯನ್ನು ಪ್ರಾಯೋಜಿಸಬಹುದು ಅಲ್ಲದೆ ಬೇಕಾಗುವ ಅಗತ್ಯ ಸಾಮಾಗ್ರಿಗಳನ್ನು ನೀಡಬಹುದು ಎಂದು ಟೀಮ್ ಸೇವಾ ಸಂಕಲ್ಪ ತಿಳಿಸಿದೆ.
ಮನೆ ನಿರ್ಮಾಣಕ್ಕೆ ಸಹಾಯ ನೀಡಲಿಚ್ಛಿಸುವವರು ಸಚಿನ್ ಖಾರ್ವಿ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ 0604108019266 ಐಎಫ್‌ಎಸ್‌ಸಿ ಕೋಡ್ : ಸಿಎನ್‌ಆರ್‌ಬಿ0000604 ಖಾತೆಗೆ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ರಾಮಪ್ಪ ಖಾರ್ವಿ (9242389567), ಬಿ.ಗಣೇಶ ಶೆಣೈ (9008979520) ಅಥವಾ ಯಶವಂತ ಖಾರ್ವಿ (9902526061) ಸಂಪರ್ಕಿಸಬಹುದು.
ಇದನ್ನೂ ಓದಿ:
► ಉಡುಪಿ ಜಿಲ್ಲೆ: ಗುರುವಾರ 22 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38496 .
► ಜಿಲ್ಲೆಯಲ್ಲಿ ನೂತನ ಕ್ವಾರಂಟೈನ್ ನಿಯಮ ಜಾರಿ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=38518 .
► ಉಡುಪಿ ಜಿಲ್ಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಹಿತಿಗಾಗಿ ಸಹಾಯವಾಣಿ – https://kundapraa.com/?p=38453 .
► ಮನೆಯಲ್ಲಿಯೇ ಕುಳಿತು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸೇವೆ ಪಡೆಯುವ ನೂತನ ಯೋಜನೆ ಜಾರಿ – https://kundapraa.com/?p=38501 .