Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು-ಕೊಡಚಾದ್ರಿ ರೋಪ್‌ವೇ ನಿರ್ಮಾಣಕ್ಕೆ ಸಿದ್ಧತೆ. ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕೊಲ್ಲೂರು-ಕೊಡಚಾದ್ರಿಯನ್ನು ಸುಲಭವಾಗಿ ಸಂಪರ್ಕಿಸಬಹುದಾದ ಮಹತ್ವಾಕಾಂಕ್ಷಿಯ ರೋಪ್-ವೇ ಯೋಜನೆಯ ಜಾರಿಗೆ ಸಿದ್ದತೆ ನಡೆಯುತ್ತಿದೆ. ಅದು ಅನುಷ್ಠಾನಗೊಂಡರೆ ಕರಾವಳಿಯ ಮೊದಲ ರೋಪ್-ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಬೈಂದೂರು ಹಾಗೂ ಕುಂದಾಪುರ ತಾಲೂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಥಿಕ, ಸಾಮಾಜಿಕ ಪ್ರಗತಿ ಸಾಧ್ಯವಾಗಲಿದೆ.

ಕೊಲ್ಲೂರು-ಕೊಡಚಾದ್ರಿ ನಂಟು:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಯಾತ್ರಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಲ್ಲಿ ಬಹುಪಾಲು ಮಂದಿ ಕೊಡಚಾದ್ರಿ ಸರ್ವಜ್ಞ ಪೀಠಕ್ಕೂ ತೆರಳುವ ಹರಕೆ ಹೊತ್ತು ಬಂದಿರುತ್ತಾರೆ. ದೇವಿ ಮೂಕಾಂಬಿಕೆಯ ದರ್ಶನ ಮಾಡಿದವರು ಕೊಡಚಾದ್ರಿಯ ಸರ್ವಜ್ಞ ಪೀಠ ದರ್ಶನ ಮಾಡುವುದರೊಂದಿಗೆ ಅವರ ಧಾರ್ಮಿಕ ಯಾತ್ರೆ ಸಮಾಪ್ತಿಗೊಳ್ಳುತ್ತದೆ. ಹಾಗಾಗಿ ಕೊಲ್ಲೂರು ಶ್ರೀ ಮೂಕಾಂಬಿಕೆಯನ್ನು ನಂಬಿದ ಭಕ್ತರಿಗೆ ಕೊಡಚಾದ್ರಿ ಬಹುಮುಖ್ಯ ಆರಾಧನಾ ತಾಣವಾಗಿದೆ.  ಕುಂದಾಪ್ರ ಡಾಟ್ ಕಾಂ ವರದಿ.

ಪ್ರಸಿದ್ಧ ಟ್ರಕ್ಕಿಂಗ್ ಪಾಯಿಂಟ್:
ಕೊಡಚಾದ್ರಿ ಬೆಟ್ಟ ಧಾರ್ಮಿಕ ಐತಿಹ್ಯ ಹೊಂದಿರುವ ಜೊತೆಗೆ ಪ್ರಸಿದ್ಧ ಟ್ರಕ್ಕಿಂಗ್ ಪಾಯಿಂಟ್ ಕೂಡ ಹೌದು. ಇಲ್ಲಿಗೆ ಟ್ರಕ್ಕಿಂಗ್’ಗಾಗಿ ಸಾವಿರಾರು ಮಂದಿ ಪ್ರತಿವರ್ಷ ಬರುತ್ತಾರೆ. ಸ್ಥಳೀಯ ಜೀಪುಗಳ ಮೂಲಕ, ಇಲ್ಲವೇ ಹಾದಿಯನ್ನು ನಡೆದು ಏರಿ ಕೊಡಚಾದ್ರಿಯ ತುದಿ ತಲುಪಿ ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಿ ಬರುತ್ತಾರೆ.

40 ಕಿ.ಮೀ ದುರ್ಗಮ ಹಾದಿ:
ಕೊಲ್ಲೂರಿನಿಂದ ಕೊಡಚಾದ್ರಿಗೆ 40 ಕಿ.ಮೀ ಇದ್ದು ರಸ್ತೆಯ ಮೂಲಕ ತೆರಳಲು ಸುಮಾರು ಒಂದೂವರೆ ಗಂಟೆ ಬೇಕಾಗುತ್ತದೆ. ಕೊಡಚಾದ್ರಿ ಸರ್ವಜ್ಞ ಪೀಠಕ್ಕೆ ತೆರಳುವ ಹಾದಿ ದುರ್ಗಮವಾದದ್ದು. ಅತಿಸೂಕ್ಷ್ಮ ವಲಯದಲ್ಲಿ ಬರುವುದರಿಂದ ಕೊಡಚಾದ್ರಿಯ ತುದಿಗೆ ತೆರಳುವ ರಸ್ತೆಯ ಅಭಿವೃದ್ಧಿಯೂ ಕಷ್ಟಸಾಧ್ಯ. ಹಾಗಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯ. ಕುಂದಾಪ್ರ ಡಾಟ್ ಕಾಂ ವರದಿ.

ರೋಪ್-ವೇ: 
ಕೊಡಚಾದ್ರಿಗೆ ರಸ್ತೆಗಳನ್ನು ನಿರ್ಮಿಸಲು ತಾಂತ್ರಿಕ ಅಡಚಣೆಗಳು ಸಹಜವಾಗಿ ಎದುರಾಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ರಸ್ತೆ ನಿರ್ಮಾಣ ಸಾಧ್ಯವಾಗದ ಮಾತು. ಹಾಗಾಗಿ ಬದಲು ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯ. ರೋಪ್ ವೇಯಿಂದ ಕಾಡು ನಾಶವೂ ಇಲ್ಲ, ಪ್ರಾಣಿ-ಪಕ್ಷಿಗಳಿಗೆ ತೊಂದರೆಯೂ ಇಲ್ಲ ಎನ್ನಲಾಗುತ್ತಿದೆ. ವಿದೇಶಗಳ ಪ್ರವಾಸಿ ತಾಣಗಳಲ್ಲಿ ಕಾಣಸಿಗುವ ಈ ಮಾದರಿ ಭಾರತದಲ್ಲಿಯೂ ಹಲವೆಡೆ ಇದೆ.

8 ಕಿ.ಮೀ ರೋಪ್-ವೇ ದಾರಿ!:
ಕೊಲ್ಲೂರಿನಿಂದ ಕೊಡಚಾದ್ರಿಯನ್ನು ಸಂಪರ್ಕಿಸುವ ರೋಪ್-ವೇ ನಿರ್ಮಾಣವಾದರೆ ಕೊಡಚಾದ್ರಿ ಮತ್ತಷ್ಟು ಪ್ರಖ್ಯಾತಿಯನ್ನು ಪಡೆಯಲಿದೆ. ರೋಪ್-ವೇನಿಂದಾಗಿ ಎಲ್ಲಾ ಕಾಲದಲ್ಲೂ ಸಂಚರಿಸಲು ಸಾಧ್ಯವಿದ್ದು, ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಆಗಮಿಸಲಿದ್ದಾರೆ. ಸುಮಾರು 8 ಕಿ.ಮೀ ಉದ್ದದ ರೋಪ್ ವೇ ಮೂಲಕ ಕೊಲ್ಲೂರಿನಿಂದ ಕೊಡಚಾದ್ರಿಗೆ 15 ನಿಮಿಷದಲ್ಲಿ ಕ್ರಮಿಸಲು ಸಾಧ್ಯವಿದೆ.

ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗಾವಕಾಶ:
ರೋಪ್-ವೇ ನಿರ್ಮಾಣದಿಂದ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಚಿತ್ರಣವೇ ಬದಲಾಗಲಿದೆ. ಇದರಿಂದಾಗಿ ಈ ಭಾಗದ ಇನ್ನಿತರ ಪ್ರವಾಸಿ ತಾಣಗಳು ಕೂಡ ಅಭಿವೃದ್ಧಿ ಕಾಣಲಿದೆ. ಸಾವಿರಾರು ಪ್ರತ್ಯಕ್ಷ, ಪರೋಕ್ಷ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿದೆ. ಉದ್ಯಮ ಹಾಗೂ ಆದಾಯದ ಮೂಲಗಳು ಹೆಚ್ಚಲಿವೆ. ಕೊಲ್ಲೂರಿನಲ್ಲಿ ಸದ್ಯ ಇರುವ ಜೀಪು ಚಾಲಕರಿಗೆ ಇದರಿಂದ ಆರಂಭದಲ್ಲಿ ತೊಡಕುಂಟಾದರೂ, ಮಂದೆ ಅವರು ಪ್ರವಾಸೋದ್ಯಮದ ಅಭಿವೃದ್ಧಿಯಿಂದಾಗುವ ಉದ್ಯೋಗ ಸೃಷ್ಠಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದಾಗಿದೆ.

ಖಾಸಗಿ ಸಹಭಾಗಿತ್ವ ಅಗತ್ಯ:
ಸಾವಿರ ಕೋಟಿಗೂ ಅಧಿಕ ವೆಚ್ಚದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು (ಪಬ್ಲಿಕ್ ಪ್ರೈವೆಟ್ ಪಾರ್ಟ್ನರ್’ಶಿಪ್)ಪಿಪಿಪಿ ಮೂಲಕ ಅನುಷ್ಠಾನಕ್ಕೆ ತರಲು ಸಾಧ್ಯವಿದ್ದು, ಇದರಿಂದಾಗಿ ಸರಕಾರಕ್ಕೂ ಹೊರೆ ಕಡಿಮೆಯಾಗುವುದಲ್ಲದೇ, ಯೋಜನೆ ಯಶಸ್ವಿ ಅನುಷ್ಠಾನವೂ ಸಾಧ್ಯವಿದೆ. ಇದರಲ್ಲಿ ಬಂಡವಾಳ ಹೂಡಲು ಈಗಾಗಲೇ ಒಂದಿಷ್ಟು ಖಾಸಗಿ ಕಂಪೆನಿಗಳು ಮುಂದೆ ಬಂದಿದ್ದು, ರೋಪ್-ವೇ ನಿರ್ಮಾಣಕ್ಕಿರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿದರೆ ಯಶಸ್ವಿ ಅನುಷ್ಠಾನವೂ ಸಾಧ್ಯವಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಬೈಂದೂರು ಕ್ಷೇತ್ರದ ಋಣ:
ಶಿವಮೊಗ್ಗ ಲೋಕಸಭಾ ಕ್ಷೇತ್ರ ಬೈಂದೂರು ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಿರುವುದಲ್ಲದೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಸಂಸದ ಬಿ. ವೈ. ರಾಘವೇಂದ್ರ ಅವರಿಗೂ ಪ್ರೀಯ ಕ್ಷೇತ್ರವೂ ಹೌದು. ರಾಘವೇಂದ್ರ ಅವರು 3 ಭಾರಿ, ಬಿ.ಎಸ್. ಯಡಿಯೂರಪ್ಪನವರು ಒಂದು ಭಾರಿ ಸಂಸದರಾದಾಗಲೂ, ಪ್ರತಿ ಹಂತದಲ್ಲಿಯೂ ಲೀಡ್ ತಂದುಕೊಟ್ಟ ಕ್ಷೇತ್ರವಿದು. ಹಾಗಾಗಿ ಇಲ್ಲಿನ ಜನರ ಋಣವಿದೆ. ಅದಕ್ಕಾಗಿಯೇ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ತಂದೆಯಂತೆಯೇ ಛಲವಾದಿಯಾದ ಸಂಸದ ಬಿ. ವೈ. ರಾಘವೇಂದ್ರ ಅವರು ಊರಿನ ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಇನ್ನು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಈ ಯೋಜನೆಯ ಬಗ್ಗೆ ಆಸಕ್ತಿ ತೋರಿದ್ದಾರೆ.

ಕೊಲ್ಲೂರು ಕೊಡಚಾದ್ರಿಯನ್ನು ಸಂಪರ್ಕಿಸುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನುಷ್ಠಾನಕ್ಕೆ  ತರುವ ಮೊದಲು ಪರಿಸರದ ಮೇಲಾಗುವ ಪರಿಣಾಮವನ್ನೂ ಅವಲೋಕಿಸಿ, ಯೋಜನೆಯಲ್ಲಿ ಎದುರಾಗಬಹುದಾದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಜಾರಿಗೊಳಿಸುವ ಹೊಣೆಗಾರಿಕೆಯೂ ಸಂಸದ -ಶಾಸಕರ ಮೇಲಿದೆ/ಕುಂದಾಪ್ರ ಡಾಟ್ ಕಾಂ ವರದಿ/

ಪರಿಸರಕ್ಕೆ ಹಾನಿಯಿಲ್ಲದೇ ಪ್ರವಾಸೋದ್ಯಮ ಅಭಿವೃದ್ಧಿ:
ಪ್ರಕೃತಿಗೆ ಹಾನಿಯಾಗದಂತೆ ಸುಲಭವಾಗಿ ಕೊಡಚಾದ್ರಿ ಪೀಠಕ್ಕೆ ತೆರಳಲು ರೋಪ್-ವೇ ಒಂದೇ ಆಯ್ಕೆಯಾಗಿದ್ದು, ಈ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ರೋಪ್-ವೇ ನಿರ್ಮಾಣದಿಂದ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದಲ್ಲದೇ, ಉದ್ಯೋಗಾವಕಾಶಗಳು ಸೃಷ್ಠಿಯಾಗಲಿವೆ. – ಬಿ. ವೈ. ರಾಘವೇಂದ್ರ, ಸಂಸದರು

ಸಂಭಾವ್ಯ ರೋಪ್-ವೇ ಮಾದರಿ

 

Exit mobile version