ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಸಾಹಿತ್ಯ ಸಮ್ಮೇಳನಗಳಲ್ಲಿ ಕುಂದಾಪ್ರ ಕನ್ನಡಕ್ಕೆ ಆದ್ಯತೆ ನೀಡಿದಾಗ ಭಾಷೆ ಉಳಿಯುವುದಕ್ಕೆ ಸಹಕಾರಿ ಆಗುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕುಂದಾಪ್ರ ಕನ್ನಡ ಭಾಷೆಯನ್ನು ಬಳಸಿ–ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದು. ಭಾಷೆಯಲ್ಲಿನ ಸ್ಥಿತ್ಯಂತರಗಳ ಅಧ್ಯಯನಕ್ಕೆ ಭಾಷೆಯನ್ನು ಲಿಖಿತವಾಗಿ ದಾಖಲಿಸಬೇಕು’ ಎಂದರು.
ಕುಂದಾಪ್ರ ಕನ್ನಡದ ರಾಯಭಾರಿ ಮನು ಹಂದಾಡಿ ಆಸಾಡಿ ಹಬ್ಬದ ಆಚರಣೆ ಮತ್ತು ನೆಲಮೂಲ ಸಂಸ್ಕೃತಿಯ ಆರಾಧಾನೆಯಲ್ಲಿ ಅದರ ಪ್ರಾಮುಖ್ಯದ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ದೀಪಕ್ ಶೆಟ್ಟಿ ಬಾರ್ಕೂರು, ಉದಯ ಶೆಟ್ಟಿ ಪಡುಕೆರೆ, ಹರೀಶ್ ಕಿರಣ್ ತುಂಗ, ಪ್ರವೀಣ್ ಯಕ್ಷೀಮಠ, ಸಫಲ್ ಶೆಟ್ಟಿ, ಸುನೀಲ್ ಪಾಂಡೇಶ್ವರ್ ಮತ್ತು ಅಶ್ವೀತ್ ಶೆಟ್ಟಿ ಕೊಡ್ಲಾಡಿ, ವಸಂತ ಗಿಳಿಯಾರ್ ಇದ್ದರು.
ಆಸಾಡಿ ಸಂಪ್ರದಾಯ
ಸಾಸ್ತಾನದ ದಿ.ರಾಮಚಂದ್ರ ತುಂಗರ ಮನೆಯಲ್ಲಿ ಸೋಮವಾರ ಕ್ಯಾನಿಗಿಂಡಿ ಹಿಟ್ಟನ್ನು ಅಕ್ಕಿಮುಡಿಯ ಮೇಲೆ ಇಟ್ಟು ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ‘ಆಸಾಡಿ ಹಬ್ಬ’ವನ್ನು (ಆಷಾಢ ಹಬ್ಬ, ಆಟಿ ಅಮಾವಾಸ್ಯೆ) ಪ್ರತಿನಿಧಿಸುವಂತೆ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಿರುವುದು ವಿಶೇಷವಾಗಿತ್ತು.