ಕುಂದಾಪುರ: ಹಗಲು ಮತ್ತು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೊಲ್ಲೂರಿನಲ್ಲಿ ಹುಟ್ಟಿ, ಹಲವು ಗ್ರಾಮಗಳ ಮೂಲಕ ಹರಿದು ಗಂಗೊಳ್ಳಿಯಲ್ಲಿ ಸಮುದ್ರ ಸೇರುವ ಸೌಪರ್ಣಿಕಾ ನದಿಯಲ್ಲಿ ಮಧ್ಯರಾತ್ರಿ ಹೊತ್ತಿಗೆ ಬಂದ ಪ್ರವಾಹದಲ್ಲಿ ನದಿ ತೀರದ ನೂರಾರು ಮನೆಗಳು ಜಲಾವೃತವಾದುವಲ್ಲದೆ ಮನೆಗಳಲ್ಲಿದ್ದ ಬೆಲೆಬಾಳುವ ಸ್ವತ್ತುಗಳು ನಾಶವಾದುವು.
ಹೇರೂರು, ಉಳ್ಳೂರು, ಬಡಾಕೆರೆ, ನಾವುಂದ, ಮರವಂತೆ, ನಾಡ, ಹಡವು, ತ್ರಾಸಿ, ಹೊಸಾಡು, ಸೇನಾಪುರ ಗ್ರಾಮಗಳಲ್ಲಿ ನೆರೆ ತನ್ನ ಉಗ್ರ ಸ್ವರೂಪ ತೋರಿದೆ. ಮಧ್ಯ ರಾತ್ರಿ ನಿದ್ದೆಯಿಂದ ಎಚ್ಚತ್ತ ಕೆಲವರು ಉಳಿದವರಿಗೆ ಸುದ್ದಿ ಮುಟ್ಟಿಸಿದ್ದರಿಂದ ಯುವಕರು ಲಭ್ಯ ದೋಣಿಗಳನ್ನು ಬಳಸಿ ಜನರನ್ನು ಎತ್ತರದ ಪ್ರದೇಶಗಳಿಗೆ ಸಾಗಿಸಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ. ಈ ಗ್ರಾಮಗಳಲ್ಲಿ ನದಿಯ ನೀರು ಇಕ್ಕಡೆಗಳಲ್ಲಿ ಒಂದು, ಒಂದೂವರೆ ಕಿಲೋಮೀಟರುಗಳಷ್ಟು ಪ್ರದೇಶವನ್ನು ಆವರಿಸಿದ್ದರಿಂದ ನದಿತೀರದ ಎಲ್ಲ ಮನೆಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಲಾವೃತವಾದರೆ, ಇನ್ನು ಹಲವು ಮನೆಗಳೊಳಗೆ ಮಂಡಿ ಮುಳುಗುವಷ್ಟು ನೀರು ನಿಂತಿತು.
ನೀರು ನುಗ್ಗಿದ ಮನೆಗಳಲ್ಲಿ ಆಹಾರ ಸಾಮಗ್ರಿಗಳು, ಅನ್ಯ ದಿನೋಪಯೋಗಿ ವಸ್ತುಗಳು ನಿರುಪಯೋಗಿಯಾಗಿವೆ, ಹಾಸಿಗೆ, ಬಟ್ಟೆಬರೆ ಒದ್ದೆಯಾಗಿವೆ. ಟಿವಿ, ಫ್ರಿಜ್, ವಾಶಿಂಗ್ ಮಶೀನ್, ಪಂಪ್‌ಗಳಿಗೂ ನೀರುಹೊಕ್ಕಿದೆ ಎಂದು ಜನ ಹೇಳುತ್ತಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳು ಕೆಲವೆಡೆ ಪೂರ್ತಿಯಾಗಿ, ಇನ್ನು ಕೆಲವೆಡೆ ಭಾಗಶ: ಮುಳುಗಿವೆ, ಅಂಗಳದಲ್ಲಿ ಸಂಗ್ರಹಿಸಿಟ್ಟಿದ್ದ ತೆಂಗಿನಕಾಯಿ, ಹುಲ್ಲಿನ ಮೆದೆ, ಕಟ್ಟಿಗೆ ತೇಲಿಹೋಗಿವೆ. ನೀರು ಇಳಿದ ಬಳಿಕವಷ್ಟೆ ಹಾನಿಗೀಡಾದ ಮನೆಗಳ ಮತ್ತು ಸ್ವತ್ತುಗಳ ನಷ್ಟದ ಅಂದಾಜು ದೊರೆಯಲಿದೆ.
ಪ್ರವಾಹ ತಲೆದೋರಿದ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ಯುವಕರು ಲಭ್ಯ ದೋಣಿಗಳನ್ನು ಬಳಸಿ ತೀರ ಅಪಾಯದಲ್ಲಿದ್ದವರನ್ನು ರಕ್ಷಿಸಿದರು. ಬಡಾಕೆರೆಯಲ್ಲಿ ಸತೀಶ ಖಾರ್ವಿ, ಶಾಂತಾರಾಮ, ಬಿ. ಎಂ. ಶಂಸುದ್ದೀನ್, ಉಮೇಶ, ಸುರೇಶ, ಜಯಂತ, ಗಣೇಶ, ಬಸವರಾಜ್, ಜನಾರ್ದನ ಖಾರ್ವಿ, ನಾಗರಾಜ ಖಾರ್ವಿ, ನಾವುಂದದ ಸಾಲ್ಬುಡದಲ್ಲಿ ಯೋಗೀಶ ಕಾರಂತ, ನಾರಾಯಣ ಖಂಡಿಕೇರಿ, ಲಕ್ಷ್ಮಣ ಸಾಲ್ಬುಡ, ರಾಮ ಪೂಜಾರಿ ಚಟ್ಟನಹಿತ್ಲು ಮತ್ತಿತರರು ರಕ್ಷಣಾ ಕೆಲಸ ನಿರ್ವಹಿಸಿದರು. ಮರವಂತೆ ಮೀನುಗಾರ ಮುಖಂಡ ಸೋಮಯ್ಯ ಖಾರ್ವಿ ಒಂದು ಯಂತ್ರ ಮತ್ತು ಜೀವರಕ್ಷಕ ಸಾಧನ ನೀಡಿದರು. ಕುಂದಾಪುರದ ಅಗ್ನಿಶಾಮಕ ಕೇಂದ್ರದ ಸಹಾಯಕ ಅಧಿಕಾರಿ ನವೀನ್ ನೇತೃತ್ವದ ತಂಡ ಬಡಾಕೆರೆ, ನಾವುಂದಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿತು.
ನಾಡದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೇನ್ ಮೇರಿ ಒಲಿವೇರ, ಉಪಾಧ್ಯಕ್ಷ ಅರವಿಂದ ಪೂಜಾರಿ, ಸದಸ್ಯರಾದ ವಿನೋದ್ ಡಿ’ಸೋಜ, ರಾಮ ಪೂಜಾರಿ, ಮಾಜಿ ತಾ.ಪಂ ಸದಸ್ಯ ಕೆನೆಡಿ ಪಿರೇರಾ ಮತ್ತಿತರರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು, ಇಲ್ಲಿನ ಚಿಕ್ಕಳಿಯ ಪ್ರಕಾಶ ಡಿ’ಸೋಜ ಅವರ ದೋಣಿ ಪ್ರವಾಹದಲ್ಲಿ ತೇಲಿಹೋಗಿದೆ ಎಂದು ತಿಳಿದು ಬಂದಿದೆ.
ಕುಂದಾಪುರ ತಹಸಿಲ್ದಾರ್ ಗಾಯತ್ರಿ ನಾಯಕ್ ಮತ್ತು ಬೈಂದೂರು ವಿಶೇಷ ತಹಸಿಲ್ದಾರ್ ಕಿರಣ್ ಗೌರಯ್ಯ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ, ಡಿವೈಎಸ್‌ಪಿ ಎಂ. ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ, ಗಂಗೊಳ್ಳಿ ಎಸ್‌ಐ ಬಿ. ಸುಬ್ಬಣ್ಣ ಮತ್ತು ಸಿಬ್ಬಂದಿ ಪ್ರವಾಹ ಪೀಡಿತ ಪ್ರದೆಶಗಳಿಗೆ ಭೇಟಿನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ರಾಜು ಪೂಜಾರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ, ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮಕ್ಕೆ ಆಗ್ರಹಿಸಿದರು.
ಕೆಲವೇ ಗಂಟೆಗಳ ಅವಧಿಯಲ್ಲಿ ಪ್ರವಾಹ ಉಲ್ಬಣಗೊಳ್ಳಲು ಸೌಪರ್ಣಿಕಾ ನದಿಗೆ ಅಡ್ಡವಾಗಿ ಅರಾಟೆಯಲ್ಲಿ ನಿರ್ಮಿಸಿರುವ ಉಪ್ಪುನೀರು ತಡೆ ಅಣೆಕಟ್ಟಿನಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿರುವುದು ಕಾರಣ ಎಂದು ಸೋಮವಾರ ಬೆಳಿಗ್ಗೆ ತಿಳಿದುಬರುತ್ತಿದ್ದಂತೆ ಅಧಿಕಾರಿಗಳ ಪಡೆ ಅಲ್ಲಿಗೆ ಧಾವಿಸಿತು. ಅಲ್ಲಿ ನದಿಯಲ್ಲಿ ತೇಲಿಬಂದ ಕಟ್ಟಿಗೆ, ಮರ, ಬಿದಿರು ಮತ್ತು ತ್ಯಾಜ್ಯ ವಸ್ತುಗಳು ಅಣೆಕಟ್ಟಿನ ಉದ್ದಕ್ಕೂ ಸುಮಾರು ಎರಡು ಅಡಿ ಎತ್ತರಕ್ಕೆ ಸಂಗ್ರಹವಾದ ದೃಶ್ಯ ಕಂಡುಬಂತು. ಹೊಸಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಹಾಗೂ ಸದಸ್ಯರ ನೇತೃತ್ವವದಲ್ಲಿ ಯುವಕರ ತಂಡ ಅವುಗಳನ್ನು ತೆರವುಗೊಳಿಸುವ ಕೆಲಸ ಆರಂಭಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ ಅವರೊಂದಿಗೆ ಸೇರಿಕೊಂಡರು. ಅಣೆಕಟ್ಟು 150 ಮೀಟರ್ ಅಗಲವಾಗಿರುವುದರಿಂದ ಈ ಕೆಲಸಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ.
ಗಂಗೊಳ್ಳಿಯಲ್ಲಿ ಗಾಳ ಹಾಕಲು ತೆರಳಿದ್ದ ಒಬ್ಬ ವ್ಯಕ್ತಿ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದ ವರದಿ ಬಿಟ್ಟರೆ ಅನ್ಯ ಹಾನಿ ಸಂಭವಿಸಿಲ್ಲ.