ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಎರಡನೇ ದಿನದ ಕಾರ್ಯಕ್ರಮ ನಡೆಯಿತು.
ಕಾರಂತ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಉರಾಳ, ಬ್ಯಾಲೆಯ ಮೂಲಕ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದವರು ಕಾರಂತರು , ತಮ ಯಕ್ಷಗಾನ ಬ್ಯಾಲೆಯನ್ನು ವಿದೇಶಗಳಿಗೆ ಕರೆದೊಯ್ದು ಯಕ್ಷಗಾನದ ಕಂಪನ್ನು ವಿದೇಶದಲ್ಲೂ ಪಸರಿಸಿದರು. ಅಲ್ಲದೇ ಕಾರಂತರು ಯಕ್ಷಗಾನಕ್ಕೆ ಹೊಸ ಸ್ವರೂಪ ನೀಡುವ ದೃಷ್ಟಿಯಿಂದ ಹೊಸ ಪ್ರಯೋಗ ಮಾಡಿ ಮಾತುಗಳಿಲ್ಲದೇ ಕೇವಲ ಭಾವಾಭಿನಯದ ಮೂಲಕ ವೈಲಿನ್ ಮತ್ತು ಸ್ಯಾಕ್ಸ್‌ಫೋನ್ ವಾದನ ಬಳಸಿ ಬ್ಯಾಲೆ ನಿರ್ಮಿಸಿ ಯಕ್ಷಗಾನದಲ್ಲಿ ಒಂದು ಕ್ರಾಂತಿ ಮಾಡಿದರು. ಕಾರಂತರ ಶಿಷ್ಯರಾಗಿ ಅವರ ಜೊತೆ ದೇಶ ವಿದೇಶ ಸುತ್ತುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ ಕೆ. ಎನ್ ನಿರೂಪಿಸಿ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಅವರು ಸ್ವಾಗತಿಸಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ವಂದಿಸಿದರು.