Kundapra.com ಕುಂದಾಪ್ರ ಡಾಟ್ ಕಾಂ

‘ಅದೇ ಮುಖ’ ಸಿನಿಮಾದ ಪೋಸ್ಟರ್ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವರನಟ ಡಾ. ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ ಚಲನಚಿತ್ರ ಇಂದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಈ ವಿಚಾರ ಯಾಕೆ ಅಂತೀರಾ. ಈಗ ”ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.

ಹೊಸತನ ಹುಡುಕಾಟದ ನಿರ್ದೇಶಕ ಹಾಗೂ ಉದಯೋನ್ಮುಖ ನಟ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿ, ನಟಿಸುತ್ತಿರುವ ಅದೇ ಮುಖ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದೂ ಸಿನಿಮಾದ ಟೈಟಲ್ ನಿಂದ. ಆಶ್ಚರ್ಯವಾದರೂ ಇದು ಸತ್ಯ. ಸಿನಿಮಾ ಸೆಟ್ ಏರುವ ಮುನ್ನವೇ ಸಾಕಷ್ಟು ಸದ್ದು ಮಾಡಿದ ಚಿತ್ರದ ಟೈಟಲ್ ”ಅದೇ ಮುಖ”. ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಮುಖ ಇರುತ್ತದೆ. ಹಾಗೆಂದು ಇದು ಕೇವಲ ಒಂದು ಪಾತ್ರವಲ್ಲ. ಬರೋಬ್ಬರಿ ಏಳು ಪಾತ್ರ. ಒಂದಕ್ಕಿಂತ ಮತ್ತೊಂದು ಭಿನ್ನ, ವಿಶಿಷ್ಟ. ಕ್ಷಣ ಕ್ಷಣಕ್ಕೂ ಸಸ್ಪೆನ್ಸ್ ಹೆಚ್ಚಿಸುತ್ತಲೇ ಹೋಗುವಂತ ಚಿತ್ರವಾಗುವ ಎಲ್ಲಾ ಸಾಧ್ಯತೆ ಇದೆ. ಓರ್ವ ಕಲಾವಿದ ಏಳು ವಿಚಿತ್ರ ಪಾತ್ರಗಳಲ್ಲಿ ನಟಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ಗೆ ತೆಗೆದುಕೊಂಡು ಹೋಗಬೇಕೆಂಬ ಹಂಬಲವೂ ಇದೆ. ಇದಕ್ಕೆಲ್ಲಾ ಮೂಲ ಕಾರಣ ಚಿತ್ರದ ನಿರ್ದೇಶಕ ಕಂ ನಟ ಸಂದೇಶ್ ಶೆಟ್ಟಿ ಆಜ್ರಿ.

ಅದೇ ಮುಖ ಚಿತ್ರದ ಮೂಲ ವಾಕ್ಯ ಭಾವ ಸತ್ತಾಗ ಭಾವನೆ ಹುಟ್ಟಿತು ಎಂಬ ವಿಶಿಷ್ಟ ಕಲ್ಪನೆ ತಲೆಯಲ್ಲಿ ಬರುತ್ತಿದ್ದಂತೆ ಚಿತ್ರ ಬರೆಯಲು ಶುರು ಮಾಡಿದ್ದಾರೆ ಸಂದೇಶ್ ಶೆಟ್ಟಿ. ಇದಕ್ಕಾಗಿ ಸಾಕಷ್ಟು ತಲೆಕೆಡಿಸಿಕೊಂಡು ಸಾಕಷ್ಟು ಸಮಯ ತೆಗೆದುಕೊಂಡು ಕಥೆ ರೆಡಿ ಮಾಡಿದ್ದಾರೆ. ಈಗ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣವೂ ಸದ್ಯದಲ್ಲಿಯೇ ಆರಂಭವಾಗಲಿದೆ. ತಸ್ಮಯ್ ಪ್ರೊಡಕ್ಷನ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸಂದೇಶ್ ಶೆಟ್ಟಿ ಕಥೆ ಹೇಳುತ್ತಿದ್ದಂತೆ ಹಿಂದೂ ಮುಂದೂ ನೋಡದೇ ಒಪ್ಪಿಕೊಂಡಿರುವುದು ಆಜ್ರಿ ಅವರ ಚಾಣಾಕ್ಷತನಕ್ಕೆ ಸಾಕ್ಷಿ. ಚಿತ್ರದ ಟೈಟಲ್ ಕೇಳುತ್ತಿದ್ದಂತೆ ಓಕೆ ಅಂದು ಬಿಟ್ಟಿದ್ದಾರೆ ನಿರ್ಮಾಪಕರು.

ಧರ್ಮಸಿಂಧು, ಆಧ್ಯಾತ್ಮಿಕ ಚಿಂತಕ ರಾಘವೇಂದ್ರ ಉಳ್ಳೂರ ಅವರು ಸಂಕ್ರಾಂತಿ ಹಬ್ಬದ ದಿನವೇ ಅದೇ ಮುಖ ಸಿನಿಮಾದ ಸ್ಕ್ರೀಫ್ಟ್ ಪೂಜೆ ನೇರವೇರಿಸಿ ಶುಭ ಹಾರೈಸಿದ್ದಾರೆ. ಖ್ಯಾತ ಚಲನಚಿತ್ರ ನಟ ಕಂ ನಿರ್ಮಾಪಕ ದಿವಂ ಕುಂದರ್, ನಟ ನಿರ್ಮಾಪಕ ಕರಣ್ ಕುಂದರ್ ಮತ್ತು ನ್ಯಾಯವಾದಿ ನಿರ್ಮಾಪಕ ವಿಜಯ ಶೆಟ್ಟಿ ಜಂಟಿಯಾಗಿ ಸಿನೆಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಟ ಅಶ್ವಥ್ ಆಚಾರ್ಯ, ವೈದ್ಯೆ ಡಾ. ವಾಣಿಶ್ರೀ ಐತಾಳ್, ಉದ್ಯಮಿ ಮಹೇಶ್ ಐತಾಳ್, ಉಷಾ ಸಂದೇಶ್ ಶೆಟ್ಟಿ, ತಸ್ಮಯ್ ಶೆಟ್ಟಿ, ರಂಗ ನಟ ಜಯಶೇಖರ್ ಮಡಪ್ಪಾಡಿ ಮತ್ತಿತರು ಉಪಸ್ಥಿತರಿದ್ದರು.

Exit mobile version