Kundapra.com ಕುಂದಾಪ್ರ ಡಾಟ್ ಕಾಂ

ಯುವ ಬರಹಗಾರರಿಗೆ ಪ್ರೋತ್ಸಾಹ ಅಗತ್ಯ: ಆನಂದ್ ಸಿ. ಕುಂದರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಪ್ರಸ್ತುತಿ ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ, ಅಕ್ಷರ ಜ್ಯೋತಿ ಗಝಲ್ ಬಳಗ, ಉಡುಪಿ ಜಿಲ್ಲೆ ಅವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮೊದಲ ಗಝುಲ್ ಕವಿಗೋಷ್ಠಿ ಮತ್ತು ಮ್ಯಾಂಡಲಿನ್ ನಿನಾದ ಸಂಕ್ರಮಣ-2021(ತಂಪೆರೆವ ಬಿನ್ನಾಣ) ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ, ಕ್ಷೇತ್ರ ಅಮೃತೇಶ್ವರಿ ದೇವಸ್ಥಾನದ ಧರ್ಮದರ್ಶಿ ಆನಂದ್ ಸಿ. ಕುಂದರ್ ಮಾತನಾಡಿ, ಯುವ ಬರಹಗಾರನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತಂದಾಗ ಅವರಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯ, ಈ ನಿಟ್ಟಿನಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಇನ್ನಷ್ಟೂ ಸಾಹಿತ್ಯಿಕ ಚಟುವಟಿಕೆ, ವಿವಿಧ ಸಮ್ಮೇಳನಗಳನ್ನು ಆಯೋಜಿಸುವ ಯೋಜನೆ ಹಾಕಲಾಗುವುದು ಎಂದು ಹೇಳಿದರು.

ಅಕ್ಷರ ಜ್ಯೋತಿ ಗಝುಲ್ ಬಳಗ ಮುಖ್ಯ ಗಣೇಶ್ ಪ್ರಸಾದ ಪಾಂಡೇಲು ಮಾತನಾಡಿ, ಕಾರಂತ ಥೀಮ್ ಪಾರ್ಕ್‌ನಲ್ಲಿ ದಿನನಿತ್ಯ ಎಂಬಂತೆ ಗಝುಲ್ ಸಮ್ಮೇಳನದಂತಹ ಚಟುವಟಿಕೆಗಳು ನಡೆಯುತ್ತಿರುವುದರಿಂದ ಹೊಸ ಪ್ರತಿಭೆಗಳ ಉಗಮಕ್ಕೆ ವೇದಿಕೆಯಾಗುತ್ತಿದೆ ಅಲ್ಲದೇ ಥೀಮ್ ಪಾರ್ಕ್‌ನ ಅಭಿವೃದ್ಧಿ ಕಾರ್ಯಗಳು ಸಾಹಿತ್ಯಾಸಕ್ತರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ, ಇದರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕೆಲಸ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿಗಳಾದ ಇಬ್ರಾಹಿಂ ಸಾಹೇಬ್ ಕೋಟ, ಸುಬ್ರಾಯ್ ಆಚಾರ್ಯ ಕೋಟ, ಸುಶೀಲ ಸೋಮಶೇಖರ್ , ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರಂತ ಥೀಮ್ ಪಾರ್ಕ್‌ನ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ರಾಜು ಬೀಜಾಡಿಯವರಿಂದ ಮ್ಯಾಂಡಲೀನ್ ನಿನಾದ ಕಾರ್ಯಕ್ರಮ ನಡೆಯಿತು.

Exit mobile version