Kundapra.com ಕುಂದಾಪ್ರ ಡಾಟ್ ಕಾಂ

ಸ್ಪರ್ಧಾತ್ಮಕ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ವತಿಯಿಂದ ನಡೆದ ಎಫ್.ಡಿ.ಎ ಮತ್ತು ಎಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಣುಕು ಪರೀಕ್ಷೆ ಕಾರ್ಯಗಾರ ನಡೆಯಿತು.

ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವುದೇ ಭಯಪಡದೆ ಧೈರ್ಯವಾಗಿ ಎದುರಿಸಿದಾಗ ಗೆಲ್ಲಲು ಸಾಧ್ಯ, ವಿ-ಶೈನ್ ನಂತಹ ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳಿಗೆ, ಪರೀಕ್ಷಾರ್ಥಿಗಳಿಗೆ ಒಂದು ಭರವಸೆಯಾಗಿ ಕೆಲಸ ನಿರ್ವಹಿಸುತ್ತವೆ. ಬದುಕಿನಲ್ಲಿ ಪ್ರಯತ್ನ ಪಡದೇ ಯಾವುದೂ ಕೂಡಾ ಸಾಧ್ಯವಿಲ್ಲ, ಪ್ರಯತ್ನಗಳು ನಿರಂತರವಾಗಿದ್ದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆದಷ್ಟು ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಮಾತನಾಡಿ, ವಿ-ಶೈನ್ ಸೆಂಟರ್ ವಿದ್ಯಾರ್ಥಿಗಳಿಗೆ, ಒಂದು ದಾರಿ ದೀಪವಾಗಿ ಕೆಲಸ ನಿರ್ವಹಿಸುತ್ತಿದೆ ಅಲ್ಲದೇ ಕಳೆದ ಸಾಲಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆಯಲ್ಲಿ ಹನ್ನೆರಡಕ್ಕೂ ಹೆಚ್ಚಿನ ಮಂದಿ ಆಯ್ಕೆಯಾಗಿ ಉದ್ಯೋಗ ಪಡೆದುಕೊಂಡದು ಸಂತಸದ ವಿಷಯ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಕಾರ್ಕಳ ಇದರ ಪ್ರಾಂಶುಪಾಲರಾದ ಗಾಯನ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ತಯಾರಿ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸುಧೀರ್ ಪ್ರಭು, ಗಿರೀಶ್ ಕುಮಾರ್ ಶೆಟ್ಟಿ, ಗಣೇಶ್ ನಾಯಕ್ ಶಿರಿಯಾರ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಸುಶೀಲ ಸೋಮಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿ-ಶೈನ್ ಕೋಚಿಂಗ್ ಸೆಂಟರ್‌ನ ಹರೀಶ್ ಕುಮಾರ್ ಶೆಟ್ಟಿ ನಿರೂಪಿಸಿ, ವಿವೇಕ್ ಅಮೀನ್ ಸ್ವಾಗತಿಸಿದರು.

Exit mobile version