Kundapra.com ಕುಂದಾಪ್ರ ಡಾಟ್ ಕಾಂ

ಗಿಳಿಯಾರಿನಲ್ಲಿ ಅಭಿಮತ ಸಂಭ್ರಮ, ಕೀರ್ತಿಕಲಶ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲಿಯುಗದಲ್ಲಿ ಬಡತನ, ಸಾಮಾಜಿಕ ಅಸಮಾನತೆಗಳು ಕಡಿಮೆಯಾಗಿದೆ, ತಂತ್ರಜ್ಞಾನಗಳು ಬೆಳವಣಿಗೆಯಾಗಿದೆ. ಹಾಗಾಗಿ ಕಲಿಯುಗ ಕೆಟ್ಟದಲ್ಲ, ಆದರೆ ಕೆಟ್ಟದನ್ನೇ ಸ್ವೀಕರಿಸುವ ಮನಃಸ್ಥಿತಿ ಸರಿಯಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಅವರು ಮೂಡುಗಿಳಿಯಾರು ಅಲ್ಸಕೆರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನಸೇವಾ ಟಸ್ಟ್ ಆಶ್ರಯದಲ್ಲಿ ಶನಿವಾರ ಜರುಗಿದ ಅಭಿಮತ ಸಂಭ್ರಮ ಹಾಗೂ ಮಹಾಮೃತ್ಯಂಜಯ ಯಾಗ ಕಾರ್ಯಕ್ರಮದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಅಪ್ಪಣ್ಣ ಹೆಗ್ಡೆಯವರಿಗೆ ಕೀರ್ತಿ ಕಲಶ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಸಂಘ-ಸಂಸ್ಥೆಗಳು ಬದುಕಲ್ಲಿ ಭರವಸೆ ಕಳೆದುಕೊಂಡವರ ಬಾಳಲ್ಲಿ ಭರವಸೆ ಮೂಡಿಸುವ ಕಾರ್ಯಗಳನ್ನು ಮಾಡಬೇಕಿದೆ. ಕೇವಲ ಮನೋರಂಜನೆಗಾಗಿ ಕಾರ್ಯಕ್ರಮಗಳು ಆಯೋಜನೆಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ಮೂಡುಗಿಳಿಯಾರು ಸುತ್ತ-ಮುತ್ತಲಿನ ಒಂದಷ್ಟು ಯುವಕರು ವಸಂತ್ ಗಿಳಿಯಾರ್ ಅವರ ನೇತೃತ್ವದಲ್ಲಿ ಧಾರ್ಮಿಕ ಚಿಂತನೆಯೊಂದಿಗೆ ಕೈಗೊಂಡ ಈ ಕಾರ್ಯಕ್ರಮ ಅತ್ಯಂತ ಶ್ರೇಷ್ಠವಾದದ್ದು ಎಂದು ಹೆಗಡೆಯವರು ತಿಳಿಸಿದರು.

ಕೀರ್ತಿ ಕಲಶ ಪ್ರಶಸ್ತಿಗೆ ಭಾಜನರಾದ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಮಾತನಾಡಿ ಇಂದು ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆ, ಧಾರ್ಮಿಕ ಕ್ಷೇತ್ರ ಕಲುಷಿತವಾಗುತ್ತದೆ. ರಾಜಕೀಯ ವ್ಯವಸ್ಥೆ ಅತ್ಯಂತ ಹೊಲಸು ಸ್ಥಿತಿಗೆ ತಲುಪುತ್ತಿದೆ. ಇದರ ನಡುವೆ ಉತ್ತಮ ಕಾರ್ಯಗಳು ಸಂಘಟನೆಯ ಮೂಲಕ ಆಗುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು, ಅಗ್ನಿ ಶಾಮಕದಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಪೂಜಾರಿಯವರಿಗೆ ಯಶೋಗಾಥೆ ಪ್ರಶಸ್ತಿಯೊಂದಿಗೆ ಸಮ್ಮಾನಿಸಲಾಯಿತು ಮತ್ತು ಅಲ್ಸೆಕೆರೆ ದೇಗುಲದ ಅರ್ಚಕ ಜಿ.ಮಂಜುನಾಥ ಸೋಮಯಾಜಿ, ಪಾಕತಜ್ಞ ಶೇಷ ಮಯ್ಯ ಅವರನ್ನು ಗೌರವಿಸಲಾಯಿತು.

ಅಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ್ವ, ಎಂ.ಆರ್.ಜಿ.ಗ್ರೂಪ್‌ನ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿ, ಎಂ. ಎಸ್. ಮಂಜ ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಕೃಷ್ಣಮೂರ್ತಿ ಮಂಜ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಶುಭಹಾರೈಸಿದರು. ಉದ್ಯಮಿ ಎಸ್. ಪ್ರಕಾಶ್ ಶೆಟ್ಟಿ ಗೈನಾಡಿಮನೆ, ಹುಬ್ಬಳ್ಳಿ ಬಂಟರ ಸಂಘದ ಉಪಾಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಸಾಂಸ್ಕೃತಿಕ ಚಿಂತಕ ಬಾರ್ಕೂರು ದೀಪಕ್ ಶೆಟ್ಟಿ, ಉದ್ಯಮಿ ಕಲ್ಗದ್ದೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಾಡಿ, ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಉಳ್ತೂರು ಉಪಸ್ಥಿತರಿದ್ದರು.

ಟ್ರಸ್ಟ್‌ನ ಸಂಚಾಲಕ ವಸಂತ್ ಗಿಳಿಯಾರು ಸ್ವಾಗತಿಸಿ, ವಿದ್ವಾನ್ ಎನ್. ಆರ್. ದಾಮೋದರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

Exit mobile version