ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾನು ಬದುಕಿನಲ್ಲಿ ಪ್ರಾಮಾಣಿಕವಾಗಿ ಆರಾಧಿಸಿ ಸರ್ವಸ್ವವೆಂದು ನಂಬಿಕೊಂಡು ಬಂದ ಜಗನ್ಮಾತೆ ತಾಯಿ ಮೂಕಾಂಬಿಕೆ ಸನ್ನಿಧಿಯಲಲ್ಇ ನನ್ನ ಬಗೆಗೆ ಆರೋಪ ಬಂದಿದ್ದು ಈ ಎಲ್ಲಾ ಆರೋಪಗಳ ಸತ್ಯಾಸತ್ಯೆಯನ್ನು ತಾಯಿ ಮೂಕಾಂಬಿಕೆಯ ಚಿತ್ತಕ್ಕೆ ಬಿಡುತ್ತೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಬೈಂದೂರು ಶಾಸಕರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರ ಅವರ ಮಾಡಿರುವ ಆರೋಪಕ್ಕೆದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಅರ್ಥಿಕ ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಫೆಬ್ರವರಿ 2018ರ ಸಮಯದಲ್ಲಿ ಸ್ವಲ್ಪ ನಗದು ಹಣವನ್ನು ಮತ್ತು ಚೆಕ್ ಮೂಲಕ ಐದು ಲಕ್ಷ ಹಣವನ್ನು ನೀಡಿದ್ದೇನೆ. ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದರ ಬಗ್ಗೆ ನನ್ನ ಬಳಿ ದಾಖಲೆ ಇದೆ. ಶ್ರೀ ಕ್ಷೇತ್ರ ಕೊಲ್ಲೂರಿನ ಪಾವಿತ್ರ್ಯಕ್ಕೆ ಧಕ್ಕೆ ತರುವಂತೆ ಆಣೆ ಪ್ರಮಾಣದ ಮಾತನಾಡಿರುವ ಸದಾನಂದ ಉಪ್ಪಿನಕುದ್ರು ಮತ್ತು ಅವರ ಕುಟುಂಬದವರೇ ಕೊಲ್ಲೂರು ಮೂಕಾಂಬಿಕೆಯಲ್ಲಿ ನಿಂತು ನನ್ನಿಂದ ಹತ್ತು ಲಕ್ಷ ಹಣವನ್ನು ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ನಾನು ನೀಡಿರುವ ಹಣ ಅದು ನನ್ನ ಶ್ರಮದ ಗಳಿಕೆ. ಹಾಗಾಗಿ ಅದನ್ನು ವಾಪಾಸು ಕೇಳಿದ್ದು ನಾನಿಂದು ಕೆಟ್ಟವನಾಗಲು ಕಾರಣವಾಯಿತು. ನನ್ನ ವಿರುದ್ದ ಬಂದಿರುವ ಆರೋಪದ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವೇ ಇರುವುದು ನನ್ನ ಗಮನಕ್ಕೆ ಬಂದಿದ್ದು, ಈ ಎಲ್ಲಾ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ತಾನು ಬೈಂದೂರು ಶಾಸಕನಾಗಿ ಆಯ್ಕೆಯಾಗುವಲ್ಲಿ ಅನೇಕ ಕಾರ್ಯಕರ್ತ ಬಂಧುಗಳು ಶ್ರಮಿಸಿದ್ದಾರೆ. ಇಂದಿಗೂ ಕೆಲವರು ತೆರೆಮರೆಯಲ್ಲಿ ಇದ್ದು ಪಕ್ಷ ಸಂಘಟಿಸುತಿದ್ದಾರೆ. ಆದರೆ ಮಂಡಲ ಅಧ್ಯಕ್ಷರಾಗಿದ್ದ ಇವರು ಕಾಮಗಾರಿಗಾಗಿ ಬೇಡಿಕೆಯನ್ನು ಇಟ್ಟಿದ್ದರು. ನಾವು ಮೂರುವರೆ ಕೋಟಿ ರೂಪಾಯಿಗಳ ಕಾಮಗಾರಿ ಅವರಿಗೆ ನೀಡಿದ್ದೆವು. ಆದರೆ ಅವರು ಹತ್ತು ಕೋಟಿ ರೂಪಾಯಿಗಳ ಕಾಮಗಾರಿ ಬೇಕೆಂದು ಪಟ್ಟು ಹಿಡಿದರು. ಅದನ್ನು ನೀಡುವಲ್ಲಿ ನಮಗೆ ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕೆ ಮುನಿಸಿಕೊಂಡ ಅವರು ನಂತರ ನನ್ನನ್ನು ಭೇಟಿ ಆಗಲಿಲ್ಲ. ಆದರೆ ಇದ್ದಕಿದ್ದಂತೆ ನನ್ನ ಮೇಲೆ ಅಪಪ್ರಚಾರಗಳನ್ನು ಶುರುವಿಟ್ಟುಕೊಂಡರು. ಅದನ್ನೆಲ್ಲ ಸಹಿಸಿಕೊಂಡ ನಾನು , ಕಳೆದ ಆರು ತಿಂಗಳ ಹಿಂದೆ ಕೊಟ್ಟ ಹಣವನ್ನು ಕೇಳಿ ವಾಪಾಸು ನೀಡದಿದ್ದಾಗ ದಾಖಲೆಗಳೊಂದಿಗೆ ಪ್ರಕರಣ ದಾಖಲಿಸಿರುತ್ತೇನೆ ಎಂದಿದ್ದಾರೆ.
ನಾನು ಎಷ್ಟು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಏನೆಲ್ಲ ಜನ ಪರವಾದ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ . ಹಾಗೂ ಯಾವ ವೈಯಕ್ತಿಕ ಲಾಭ ಇಲ್ಲದೇ , ನಮ್ಮ ಜನರ ಹಿತಕ್ಕಾಗಿ ಅಧಿಕಾರಗಳ ಜೊತೆ ಮಾತನಾಡಿದ್ದೇನೆ ಎಂಬುದು ನಮ್ಮ ಪಕ್ಷದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ ಹಾಗೂ ಮತದಾರರಿಗೆ ತಿಳಿದಿದೆ ಎಂದಿದ್ದಾರೆ.
ಅವರು ಅನೇಕ ವ್ಯವಹಾರಗಳನ್ನು ಮಾಡಿ ನಷ್ಟ ಅನುಭವಿಸಿದ್ದಾರೆ. ಇದಕ್ಕೆಲ್ಲಾ ಪಕ್ಷದ ಕಾರ್ಯಕ್ರಮ ಹಾಗೂ ನಮಗೂ ಸಂಬಂಧ ಕಲ್ಪಿಸಿದರೇ ಅದಕ್ಕೆಲ್ಲಾ ನಾನು ಹೊಣೆಗಾರನಲ್ಲ. ಆದ್ದರಿಂದ ನಮ್ಮ ಕಾರ್ಯಕರ್ತ ಬಂಧುಗಳು ಇಂತಹ ಸುಳ್ಳು ಆರೋಪಗಳಿಗೆ ಕಿವಿಕೊಡಬಾರದು ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ
► ಬೈಂದೂರು ಶಾಸಕ ಸುಕುಮಾರ ಶೆಟ್ಟರ ಕಿರುಕುಳದಿಂದ ಬೇಸತ್ತಿದ್ದೇನೆ: ಸದಾನಂದ ಉಪ್ಪಿನಕುದ್ರು ಆರೋಪ – https://kundapraa.com/?p=47102 .