ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರ ದಬ್ಬಾಳಿಕೆಯಿಂದಾಗಿ ನಮ್ಮ ಕುಟುಂಬ ರೋಸಿ ಹೋಗಿದೆ. ನನ್ನ ವಿರುದ್ಧ ಚೆಕ್ ಬೌನ್ಸ್ ಕೇಸ್ ಹಾಕಿಸಿರುವ ಶಾಸಕರಿಗೆ ನಾನು ಚೆಕ್ ನೀಡಿರುವುದು ನಿಜವಾಗಿದ್ದರೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಸವಾಲೆಸೆದಿದ್ದಾರೆ.
ಕೊಲ್ಲೂರು ದೇವಸ್ಥಾನದ ಎದುರು ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿ ನನ್ನ ಕುಟುಂಬಕ್ಕೆ ಬೈಂದೂರು ಶಾಸಕ ಬಿ. ಎಂ ಸುಕುಮಾರ ಶೆಟ್ಟಿ, ಕುಂದಾಪುರ ಬೋರ್ಡ್ ಹೈಸ್ಕೂಲ್ನ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶಚಂದ್ರ ಶೆಟ್ಟಿ ಹಾಗೂ ವಕೀಲ ಸದಾನಂದ ಶೆಟ್ಟಿಯವರಿಂದ ಆಗುತ್ತಿರುವ ನಿರಂತರ ಮಾನಸಿಕ ಹಿಂಸೆಗಳಿಂದ ರೋಸಿ ಹೋಗಿ ಕೊಲ್ಲೂರು ಸನ್ನಿಧಿಯಲ್ಲಿ ಬಂದು ನನ್ನ ನೋವು ತೋಡಿಕೊಳ್ಳುತ್ತಿದ್ದೇನೆ ಎಂದರು.
ಮುಂದುವರಿದು ಮಾತನಾಡಿ ಕಳೆದ ಹದಿನೆಂಟು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿದ್ದರೂ ಬಿಜೆಪಿ ಪಕ್ಷವನ್ನು ಎಲ್ಲರ ಸಹಕಾರದಿಂದ ಸಂಘಟಿಸಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಬಿ. ಎಂ ಸುಕುಮಾರ ಶೆಟ್ಟಿಯನ್ನು ಶಾಸಕನ್ನಾಗಿ ಆಯ್ಕೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿ ಯಶಸ್ವಿಯಾಗಿದ್ದೇವೆ. ಆದರೆ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಬಳಿಕ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ ನಮ್ಮ ಮೇಲೆಯೇ ಆರೋಪ ಹೊರಿಸುತ್ತಿರುವುದು ಎಷ್ಟು ಸರಿ ಎಂದವರು ಪ್ರಶ್ನಿಸಿದರು.
ಕಳೆದ ಚುನಾವಣೆಯ ಸಂದರ್ಭ ಬಿ. ಎಂ. ಸುಕುಮಾರ ಶೆಟ್ಟರು ಚುನಾವಣೆಯಲ್ಲಿ ಗೆದ್ದರೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಿತಿ ಮೀರಿದ ಮಟ್ಕಾವನ್ನು ಮಟ್ಟ ಹಾಕುತ್ತೇನೆ. ಅಕ್ರಮ ಇಸ್ವೀಟ್ ಅಡ್ಡೆಯನ್ನು ಬಂದ್ ಮಾಡಿಸುತ್ತೇನೆ. ಕಾಮಗಾರಿಯಲ್ಲಿ ಕಮೀಷನ್ ನಿಲ್ಲಿಸುತ್ತೇನೆ ಎಂದು ಕಾರ್ಯಕರ್ತರಿಗೆ ತಾಯಿ ಮೂಕಾಂಬಿಕೆಯ ಸನ್ನಿಧಾನದಲ್ಲಿ ಆಣೆ ಮಾಡಿ ಭರವಸೆ ನೀಡಿದ್ದರು. ಆದರೆ ಶಾಸಕರಾದ ಮೇಲೆ ಇವೆಲ್ಲವೂ ಹಿಂದಿಗಿಂತ ಹೆಚ್ಚಾಗಿ ನಡೆಯುತ್ತಿತ್ತು. ನಮ್ಮ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಅವರ ಮೇಲೇಯೇ ಕೇಸು ಹಾಕಿಸುತ್ತಿರುವುದು ಗಮನಕ್ಕೆ ಬಂದಿತ್ತು. ಇದರಿಂದ ಬೇಸತ್ತ ನಮ್ಮ ಪಕ್ಷದ ಕಾರ್ಯಕರ್ತರು ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ಇದನ್ನು ಪಕ್ಷದ ಹಿರಿಯರ ಗಮನಕ್ಕೆ ತನ್ನಿ ಎಂದಿದ್ದರು. ಕಾರ್ಯಕರ್ತರ ದೂರನ್ನು ನಾನು ಶಾಸಕರ ಗಮನಕ್ಕೆ ತಂದ ಸಂದರ್ಭದಲ್ಲಿ, ಶಾಸಕರು ನಮ್ಮ ಕಾರ್ಯಕರ್ತರ ಮೇಲೆಯೇ ಇಲ್ಲ ಸಲ್ಲದ ಆರೋಪ ಹೊರಿಸಿದ್ದಲ್ಲದೇ ಇದನ್ನು ಅಕ್ಷೇಪಿಸಿದಾಗ ನನ್ನ ಮೇಲೆ ರೇಗಾಡಿ, ಅದೆಲ್ಲ ಅಧಿಕ ಪ್ರಸಂಗ ನಿನಗೇಕೆ? ನಾನು ಹತ್ತು ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದಿದ್ದೇನೆ ಹಣ ನೀನು ಕೊಡುತ್ತೀಯಾ ಎಂದಲ್ಲಾ ಕೂಗಾಡಿದ್ದಾರೆ. ಅಂದಿನಿಂದ ನನ್ನ ಮೇಲೆಯೂ ಆರೋಪ ಹೊರಿಸಿ ನಾಲ್ಕೈದು ಕೇಸುಗಳನ್ನು ಹಾಕಿಸಿದ್ದಾರೆ ಎಂದರು.
ಈ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ನನ್ನ ವ್ಯವಹಾರಕ್ಕಾಗಿ ವಕೀಲ ಸದಾನಂದ ಶೆಟ್ಟಿಯವರಲ್ಲಿ 20 ಲಕ್ಷ ಬಡ್ಡಿಗೆ ಹಣ ಪಡೆದುಕೊಂಡಿದ್ದು ಅದಕ್ಕಾಗಿ ಅವರು ಐದು ಬ್ಲ್ಯಾಂಕ್ ಚೆಕ್ಗಳನ್ನೂ ನನ್ನಿಂದ ಪಡೆದುಕೊಂಡಿದ್ದರು. ಬಳಿಕ 20 ಲಕ್ಷಕ್ಕೆ 28 ಲಕ್ಷ ಬಡ್ಡಿ ಸೇರಿಸಿ ಒಟ್ಟು 48 ಲಕ್ಷ ಹಣವನ್ನು ವಕೀಲ ಸದಾನಂದ ಶೆಟ್ಟಿಯವರಿಗೆ ಬ್ಯಾಂಕ್ ಮೂಲಕವೇ ವಾಪಾಸ್ಸು ಮಾಡಿದ್ದೇನೆ. ಆದರೆ ಸಾಲ ಮರುಪಾವತಿ ಮಾಡಿದರೂ ಚೆಕ್ ವಾಪಾಸು ನೀಡದೇ ಸತಾಯಿಸಿದ್ದಾರೆ. ಪ್ರಮುಖರ ಮಧ್ಯಸ್ಥಿಕೆಯಲ್ಲಿ ಚೆಕ್ ವಾಪಾಸಿ ನೀಡಲು ಒಪ್ಪಿಕೊಂಡ ಅವರು ಹೇಳಿದಂತೆ ನಡೆದುಕೊಂಡಿಲ್ಲ. ಇದೇ ಸಮಯ ಕುಂದಾಪುರ ಬೋರ್ಡ್ ಹೈಸ್ಕೂಲ್ನಲ್ಲಿ ದೈಹಿಕ ಶಿಕ್ಷಕರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಎಂದು ಜೊತೆ ಸೇರಿ ಪಿತೂರಿ ನಡೆಸಿ ಶಾಸಕ ಸುಕುಮಾರ ಶೆಟ್ಟಿ ಅವರು ಖಾಲಿ ಚೆಕ್ಕನ್ನು ಸದಾನಂದ ಶೆಟ್ಟಿಯಿಂದ ಪಡೆದುಕೊಂಡಿದ್ದಲ್ಲದೇ ನನ್ನ ವಿರುದ್ದ ಚೆಕ್ ಬೌನ್ಸ್ ಕೇಸ್ ಹಾಕಿಸಿದ್ದಾರೆ.
ನಾನು ಬೈಂದೂರು ಬಿಜೆಪಿ ಅಧ್ಯಕ್ಷನಾಗಿದ್ದ ಸಂದರ್ಭ 5 ವರ್ಷದಲ್ಲಿ 45 ಲಕ್ಷಕ್ಕೂ ಮಿಕ್ಕಿ ಸುಕುಮಾರ ಶೆಟ್ಟಿಯವರ ಗೆಲುವಿಗಾಗಿ ಹಣ ಖರ್ಚು ಮಾಡಿದ್ದು, ಅದರ ಲೆಕ್ಕಚಾರವನ್ನು ಶಾಸಕರಿಗೆ ನೀಡಿದ್ದೆ, ಚುನಾವಣೆ ಗೆದ್ದ ಬಳಿಕ ಅಷ್ಟು ಹಣವನ್ನು ವಾಪಾಸು ನೀಡುದಾಗಿ ನಂಬಿಸಿದ್ದರು. ಅದರಂತೆ ತಲಾ 5 ಲಕ್ಷ 2 ಚೆಕ್ಗಳನ್ನು ನೀಡಿದ್ದು 10 ಲಕ್ಷ ಪಡೆದುಕೊಂಡಿದ್ದೇನೆ. ಇನ್ನೂ 35 ಲಕ್ಷ ಹಣ ಶಾಸಕರಿಂದ ನನಗೆ ಬರಲು ಬಾಕಿಯಿದ್ದರೂ ನನ್ನ ಮೇಲೆಯೇ ಚೆಕ್ ಬೌನ್ಸ್ ಕೇಸ್ ಹಾಕಿ ಮಾನಸಿಕ ಹಿಂಸೆ ನೀಡಲಾರಂಭಿಸಿದ್ದಾರೆ. ಅಲ್ಲದೆ ವಕೀಲ ಸದಾನಂದ ಶೆಟ್ಟಿಯವರು ತಮ್ಮ ಬಳಿ ಇರುವ ಚೆಕ್ನ್ನು ಬಳಿಸಿಕೊಂಡು ಸುಳ್ಳು ಪ್ರಕರಣ ದಾಖಲು ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದರು.
ಸುಕುಮಾರ ಶೆಟ್ಟಿಯವರ ಗೆಲುವಿಗಾಗಿ ನಾನು ಮಾಡಿದ ಹೋರಾಟದಿಂದ ನನ್ನ ವ್ಯವಹಾರದಲ್ಲಿ ನಷ್ಟ ಅನುಭವಿಸಿ ನಾನು ಸಂಪೂರ್ಣ ದಿವಾಳಿಯಾಗಿದ್ದೆನೆ. ಶಾಸಕರು ಹಾಕಿದ್ದ ಸುಳ್ಳು ಸುಳ್ಳು ಕೇಸುಗಳಿಗೆ ವಕೀಲರನ್ನು ನೇಮಿಸಲು ಆರ್ಥಿಕ ಶಕ್ತಿಯೂ ನನ್ನಲ್ಲಿ ಇಲ್ಲದಂತಾಗಿದೆ. ನಾನು ಮನೆಯಲ್ಲಿರುವ ಸಂದರ್ಭ ನನ್ನ ಮೊಬೈಲ್ಗೆ ಕರೆಮಾಡಿದ ಶಾಸಕ ಸುಕುಮಾರ ಶೆಟ್ಟಿ ಅವರು ನಿನ್ನ ತಾಯಿ, ಹೆಂಡತಿ ಹಾಗೂ ಮಕ್ಕಳನ್ನು ಮನೆಯಿಂದ ಹೊರ ಹಾಕಿಸುತ್ತೇನೆ ನಿನ್ನ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದೆಲ್ಲಾ ಬೆದರಿಕೆ ಹಾಕಿದ್ದು, ಇದನ್ನು ಕೇಳಿಸಿಕೊಂಡ ನನ್ನ ಕುಟುಂಬ ಹೆದರಿ ಕಂಗಾಲಾಗಿದೆ. ಪ್ರತಿ ದಿನವೂ ಭಯದ ನೆರಳಲ್ಲಿ ಬದುಕುವಂತಾಗಿದೆ. ಇದೆಲ್ಲದರ ಬಗ್ಗೆ ನಾನು ನನ್ನ ಪಕ್ಷದ ಎಲ್ಲಾ ಹಂತದ ನಾಯಕರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ನೀಡಿದ್ದರೂ ಶಾಸಕರ ಕಿರುಕುಳ, ಮಾನಸಿಕ ಹಿಂಸೆ, ಬೆದರಿಕೆಗಳು ಹೆಚ್ಚುತ್ತಲೇ ಇವೆ. ದಿಕ್ಕು ಕಾಣದೇ ತಾಯಿ ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ನ್ಯಾಯ ಕೇಳುತ್ತಿದ್ದೇನೆ. ನನಗೆ ನ್ಯಾಯ ಸಿಗುತ್ತೋ ಇಲ್ಲವೂ ಆದರೆ ತಾಯಿ ಮೂಕಾಂಬಿಕೆ ಎಲ್ಲವನ್ನೂ ನೋಡುತ್ತಿದ್ದಾಳೆ ಮೂಕಾಂಬಿಕೆಯ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡಿ ಹೇಳುತ್ತಿದ್ದೆನೆ ನಾನು ಯಾವುದೇ ಚೆಕನ್ನು ಶಾಸಕ ಸುಕುಮಾರ ಶೆಟ್ಟರಿಗೆ ನೀಡಿಲ್ಲ ಮತ್ತು ನಾನು ಯಾವುದೇ ಹಣವನ್ನು ನೀಡಲು ಬಾಕಿ ಇಲ್ಲ ಇದು ಸತ್ಯ. ಇನ್ನಾದರೂ ಹಾಕಿದ ಸುಳ್ಳು ಕೇಸು ವಾಪಾಸು ಪಡೆಯುವಂತೆ ಮುಕಾಂಬಿಕೆ ಅವರಿಗೆ ಬುದ್ದಿ ಕೊಡಲ. ಒಂದೊಮ್ಮೆ ಇದನ್ನು ಮೀರಿ ನನಗೆ ಚಿತ್ರಹಿಂಸೆ ಮುಂದುವರೆದರೆ ನನ್ನ ಕುಟುಂಬಕ್ಕೆ ಆಗುವ ಯಾವುದೇ ತೊಂದರೆಗೆ ಶಾಸಕ ಸುಕುಮಾರ ಶೆಟ್ಟರೆ ನೇರವಾಗಿ ಕಾರಣ ಎಂದವರು ಆರೋಪಿಸಿದರು.
ಸದಾನಂದ ಉಪ್ಪಿನಕುದ್ರು ಅವರ ಹೆಂಡತಿ ರೇಷ್ಮಾ ಸದಾನಂದ್ ಮಾತನಾಡಿ ಬೈಂದೂರು ಶಾಸಕರು ಹೀಗೆ ನಮ್ಮ ಕುಟುಂಬಕ್ಕೆ ನಿರಂತರ ತೊಂದರೆ ಕೊಡುವುದು ಸರಿಯಲ್ಲ. ಇದರಿಂದ ನಮ್ಮ ಕುಟುಂಬದ ನೆಮ್ಮದಿ ಹಾಳಾಗಿದೆ. ಅವರು ರಾಜಕೀಯಕ್ಕೆ ಬಂದ ಮೇಲೆ ಇರುವ ಎಲ್ಲಾ ಆಸ್ತಿ ಮಾರಿಕೊಂಡದ್ದಾಗಿದೆ. ಇನ್ನೂ ಬೈಂದೂರು ಶಾಸಕರು ನನ್ನ ಗಂಡನ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಶಾಸಕರು ಮಾಡುತ್ತಿರುವ ಆರೋಪ ನಿಜವೆಂದಾದರೆ ಕೊಲ್ಲೂರು ಶ್ರೀ ಮೂಕಾಂಬೆಯ ಎದುರು ಬಂದು ಆಣೆ ಮಾಡಿ ಸಾಬೀತು ಮಾಡಬೇಕು ಎಂದರು.
ಸದಾನಂದ ಉಪ್ಪಿನಕುದ್ರು ಅವರ ತಾಯಿ ಲೀಲಾವತಿ ಮಕ್ಕಳಾದ ಸಮರ್ಥ್, ಶ್ರೀಲಕ್ಷ್ಮೀ, ಸಾರಥ್ಯ ಇದ್ದರು