ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಕರಾವಳಿಯ ಅಸಂಖ್ಯ ಮೀನುಗಾರರ ಜೀವನಾಧಾರ. ಅದರಲ್ಲಿನ ಅವರ ಕಠಿಣ ದುಡಿಮೆ ಮತ್ತು ಅನಿಶ್ಚಿತ ಬದುಕನ್ನು ಮನಗಂಡ ಸರ್ಕಾರಗಳು ಅವರಿಗೆ ವಿವಿಧ ನೆರವು ನೀಡುತ್ತ ಬಂದಿದ್ದರೆ, ಪ್ರಸಕ್ತ ಬಿಜೆಪಿ ಸರ್ಕಾರ ಅವುಗಳನ್ನು ಒಂದೊಂದಾಗಿ ಕೈಬಿಡುವ ಮೂಲಕ ಅವರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರಿಕಾ ಸಮಿತಿ ಅಧ್ಯಕ್ಷ ನಾಗೇಶ ಖಾರ್ವಿ ಆರೋಪಿಸಿದ್ದಾರೆ.
ಮೀನುಗಾರಿಕೆ ನಡೆಯದ ಅವಧಿಯಲ್ಲಿ ಮೀನುಗಾರರ ಜೀವನ ನಿರ್ವಹಣೆಗೆಂದು ಕಲ್ಪಿಸಿದ್ದ ಸಹಾಯಧನ ಬೆಂಬಲಿತ ಉಳಿತಾಯ ಯೋಜನೆಯನ್ನೂ ರದ್ದುಪಡಿಸಲಾಗಿದೆ. ಪಂಜರ ಮೀನು ಕೃಷಿಗೆ ನಿಗದಿತ ಮಾನದಂಡದಂತೆ ಪ್ರೋತ್ಸಾಹಧನ ನೀಡದೆ ಅಲ್ಪ ಮೊತ್ತ ವಿತರಿಸಲಾಗುತ್ತಿದೆ. ಮೀನುಗಾರರಿಗೆ ಸೀಮಿತವಾದ ಮತ್ಸ್ಯಾಶ್ರಯ ಮನೆಗಳ ಸಂಖ್ಯೆ ಕಡಿತಗೊಳಿಸಲಾಗಿದೆ. ಇದನ್ನು ಮೀನುಗಾರೇತರರಿಗೂ ನೀಡುವ ಮೂಲಕ ಮೀನುಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರವು ಮೀನುಗಾರರಿಗೆ ಮಾತಿನ ಮಂಟಪದ ಭರವಸೆ ನೀಡುವುದರಲ್ಲೇ ಕಾಲಹರಣ ಮಾಡುತ್ತಿದೆ. ಸರ್ಕಾರ ಮೀನುಗಾರರೆಡೆಗಿನ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮೀನುಗಾರರು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸರ್ಕಾರವನ್ನು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸಿದ್ದಾರೆ.