ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಕರಾವಳಿಯ ಕೆ. ಎಂ. ಜನಾರ್ದನ ಖಾರ್ವಿ ಅವರ ಮನೆಯ ಬಳಿ ಬುಧವಾರ ಸಮುದ್ರದ ಅಬ್ಬರದ ಅಲೆಗಳು ದಂಡೆಗೆ ಅಪ್ಪಳಿಸುತ್ತಿದ್ದು, ಪರಿಣಾಮವಾಗಿ ಸುಮಾರು 350 ಮೀಟರ್ ಉದ್ದ ಪ್ರದೇಶಲ್ಲಿ ಕಡಲ್ಕೊರೆತ ನಡೆದಿದೆ.
ಮರವಂತೆಯಲ್ಲಿ ಅರ್ಧದಲ್ಲೇ ಸ್ಥಗಿತವಾಗಿರುವ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರಕ್ಕಿರುವ ಈ ಪ್ರದೇಶದಲ್ಲಿ ಹಿಂದಿನ ಮಳೆಗಾಲದಲ್ಲಿ ಆರಂಭವಾದ ಕೊರೆತ ಮಳೆಗಾಲದ ಬಳಿಕವೂ ಮರುಕಳಿಸುತ್ತಲೇ ಇದೆ. ಸಾಮಾನ್ಯವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಕೆಲವೆಡೆ ಸಮುದ್ರ ಪ್ರಕ್ಷುಬ್ಧಗೊಂಡು, ಅಲೆಗಳ ರಭಸ ಹೆಚ್ಚಿ, ತೀರದ ಮೇಲೆ ದಾಳಿ ನಡೆಸುತ್ತವೆ. ಮಂಗಳವಾರ ಹುಣ್ಣಿಮೆ ಇದ್ದುದರಿಂದ ಬುಧವಾರ ಅದರ ಪ್ರಭಾವ ಕಂಡುಬಂದಿದೆ. ಇಲ್ಲಿ ಕೆಲವು ತೆಂಗಿನ ಮರಗಳು ಉರುಳಿವೆ. ಹಲವು ಮರಗಳ ಬುಡದ ಮಣ್ಣು ಅಲೆಗಳಿಗೆ ಸಿಲುಕಿ ನಶಿಸುತ್ತಿರುವುದರಿಂದ ಸಮುದ್ರದ ಅಬ್ಬರ ಇನ್ನೂ ಒಂದೆರಡು ದಿನ ಮುಂದುವರಿದರೆ ಹತ್ತಾರು ಮರಗಳು ಉರುಳಲಿವೆ. ಸನಿಹದಲ್ಲೇ ಹಾದು ಹೋಗುವ ಕರಾವಳಿ ಮಾರ್ಗವೂ ಅಪಾಯಕ್ಕೆ ಸಿಲುಕಲಿದೆ. ಮಾರ್ಗದ ಪೂರ್ವ ದಿಕ್ಕಿನಲ್ಲಿ ಸುಮಾರು ೫೦ ಮೀನುಗಾರರ ಮನೆಗಳಿದ್ದು, ಈ ಪ್ರದೇಶದಲ್ಲಿ ಬಿಟ್ಟುಬಿಟ್ಟು ನಡೆಯುತ್ತಿರುವ ಕಡಲ್ಕೊರೆತದಿಂದ ನಿವಾಸಿಗಳು ಆತಂಕಿತರಾಗಿದ್ದಾರೆ.
ತ್ರಾಸಿಯಲ್ಲೂ ಕಡಲ್ಕೊರೆತ:
ಸಮೀಪದ ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ರಾಣಿ ಮೀನು ಫ್ಯಾಕ್ಟರಿ, ಶ್ರೀರಾಮ ಮಂದಿರ ಹಾಗೂ ಭಟ್ಟರ ಅಂಗಡಿ ಹತ್ತಿರ ಸುಮಾರು 500 ಮೀಟರ್ ಪ್ರದೇಶದಲ್ಲಿ ಕಡಲ್ಕೊರೆತ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಬೈಂದೂರು ಶಾಸಕರ ಭೇಟಿ:
ಭೇಟಿ ನೀಡಿ ಪರಿಶೀಲಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರಿಗೆ ಇಲ್ಲಿನ ಪರಿಸ್ಥಿತಿ ವಿವರಿಸಿದ ಮೀನುಗಾರ ಮುಖಂಡರು ಮಳೆಗಾಲ ಆರಂಭವಾಗಿ ಇನ್ನಷ್ಟು ಹಾನಿ ಸಂಭವಿಸುವ ಮೊದಲೇ ಪರಿಹಾರ ಕ್ರಮಕ್ಕೆ ಆಗ್ರಹಿಸಿದರು. ಹೇಳಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಘಟನೆ ಕುರಿತು ಉಪ ವಿಭಾಗಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಭಾರತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ ಖಾರ್ವಿ, ಸದಸ್ಯರಾದ ಸುಶೀಲಾ, ಜ್ಯೋತಿ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಶೇರುಗಾರ್, ಗ್ರಾಮ ಕರಣಿಕ ಸಂದೀಪ್, ಗ್ರಾಮ ಸಹಾಯಕ ಕೃಷ್ಣ ಮೊಗವೀರ, ಗ್ರಾಮ ಪಂಚಾಯಿತಿ ಸಿಬ್ಬಂದಿ ಶೇಖರ ಮರವಂತೆ ಸ್ಥಳಕ್ಕೆ ಬಂದಿದ್ದರು.
ಇದನ್ನೂ ಓದಿ
► ವಾರದಿಂದ ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ ಉದಯ ಹೆಗಡೆ ಬೆಂಗಳೂರಿನಲ್ಲಿ ಪತ್ತೆ – https://kundapraa.com/?p=47747 .