ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜಿನ್ ಮತ್ತು ರೆಮ್ಡಿಸಿವರ್ ಸರಬರಾಜು ಮಾಡುವ ಕುರಿತಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಬುಧವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿಯ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಗೆ ಪ್ರತೀ ದಿನ ಅಗತ್ಯವಿರುವ ರೆಮ್ಡಿಸಿವರ್ ಕುರಿತು , ಪ್ರತೀ ದಿನ ವರದಿಯನ್ನು ನೀಡಿ ಹಾಗೂ ಆಕ್ಸಿಜಿನ್ ಕೊರತೆಯಾಗದಂತೆ , ನಿರಂತರವಾಗಿ ಸರಬರಾಜು ಮತ್ತು ದಾಸ್ತಾನು ಇರುವಂತೆ ಎಚ್ಚರವಹಿಸಿ, ಜಿಲ್ಲೆಗೆ ಆಗತ್ಯವಿರುವ ರೆಮ್ಡಿಸಿವರ್ ಮತ್ತು ಆಕ್ಸಿಜಿನ್ ಒದಗಿಸುವ ಕುರಿತಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಆದರೆ ಇದರ ಆಡಿಟ್ ನಡೆಸಿ, ಅಗತ್ಯ ಪ್ರಮಾಣದಲ್ಲಿ, ಅಗತ್ಯವಿರುವ ರೋಗಿಗಳಿಗೆ ಮಾತ್ರ ನೀಡಿ, ಅನಗತ್ಯ ಪೋಲಾಗದಂತೆ ತಡೆಯಿರಿ ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಹೋಂ ಐಸೋಲೇಶನ್ ನಲ್ಲಿ ಇರಲು ಅಗತ್ಯ ವ್ಯವಸ್ಥೆಯಿಲ್ಲದಿರುವವರಿಗೆ ಎಲ್ಲಾ ತಾಲೂಕು ಕೆಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಕೂಡಲೇ ತೆರೆಯಿರಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವೈದ್ಯರು, ಶುಶ್ರೂಶಕರು ಮತ್ತು ಡಿ ಗ್ರೂಫ್ ಸಿಬ್ಬಂದಿಯನ್ನು ನಿಯೋಜಿಸಿ, ಆಯುಷ್ ವೈದ್ಯರ ಸೇವೆಯನ್ನು ಬಳಿಸಿಕೊಳ್ಳಿ, ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸಂಪೂರ್ಣ ಅದಿಕಾರ ನೀಡಲಾಗಿದೆ ಎಂದರು.
► ಕುಂದಾಪುರ ಕೋವಿಡ್ ಆಸ್ಪತ್ರೆಯ ನ್ಯೂನತೆ ಸರಿಪಡಿಸಿ ಮತ್ತು ಕೋವಿಡ್ ಕೇರ್ ಸೆಂಟರ್ ಆರಂಭಿಸಿ: ಎಚ್. ಹರಿಪ್ರಸಾದ್ ಶೆಟ್ಟಿ – https://kundapraa.com/?p=47915 .
ಆರ್.ಪಿ.ಟಿ.ಪಿ.ಸಿ.ಆರ್ ವರದಿ ನೆಗಟಿವ್ ಬಂದು ರೋಗ ಲಕ್ಷಣವಿರುವವರು ಮತ್ತು ಐಎಲ್ಐ ಮತ್ತು ಸಾರಿ ಪ್ರಕರಣ ಕಂಡುಬರುವವರಿಗೆ ಬೆಡ್ ಗಳನ್ನು ಮೀಸಲಿಡಿ , ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 10 ಐಸಿಯು ಬೆಡ್ ಗಳನ್ನು ಸಿದ್ದಪಡಿಸುವಂತೆ ಸೂಚನೆ ನೀಡಿದ ಸಚಿವರು , ಜಿಲ್ಲೆಯ ಕೆಎಂಸಿ ಮತ್ತು ಟಿಎಂಎ ಪೈ ಅಸ್ಪತ್ರೆಗಳಲ್ಲಿ ಕೋವಿಡ್ ಗಾಗಿ ಮೀಸಲಿಟ್ಟಿರುವ ಐಸಿಯು ಬೆಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ತಿಳಿಸಿದರು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತಕ್ಕಾಗಿ ಮೀಸಲಿಟ್ಟಿರುವ ಬೆಡ್ ಗಳಲ್ಲಿ ಅಗತ್ಯವಿದ್ದಲ್ಲಿ ಸರ್ಕಾರದಿಂದ ನೀಡುವ ವೆಂಟಿಲೇಟರ್ ಗಳನ್ನು ಅಳವಡಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕುರಿತಂತೆ ಎರಡನೇ ಡೋಸ್ ನ್ನು ಆದ್ಯತೆಯಲ್ಲಿ ನೀಡಲು ಕ್ರಮ ಕೈಗೊಳ್ಳಿ, ಎರಡನೇ ಡೋಸ್ ಅಗತ್ಯವಿರುವ ಸಂಖ್ಯೆಯ ಕುರಿತು ವರದಿ ನೀಡಿ, ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾಲಮಿತಿ ನಿಗಧಿಪಡಿಸಿಕೊಂಡು ಎರಡನೇ ಡೋಸ್ ನ್ನು ಸಂಪೂರ್ಣವಾಗಿ ನೀಡಿ ಎಂದರು.
ಜಿಲ್ಲೆಯ ಗ್ರಾಮಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ರಚಿಸಲಾಗಿರುವ ಕಾರ್ಯಪಡೆಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವ ಕುರಿತಂತೆ ಪ್ರತೀ ದಿನ ನಿಗಾ ವಹಿಸುವಂತೆ ಜಿಲ್ಲಾ ಪಂಚಾಯತ್ ಸಿಇಓ ಗೆ ಸೂಚಿಸಿದ ಸಚಿವರು, ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೋಲೇಶನ್ ನಲ್ಲಿರುವವರ ಆರೋಗ್ಯದ ಬಗ್ಗೆ ಪ್ರತೀ ದಿನ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಅವರಿಗೆ ಆಸ್ಪತ್ರೆ ದಾಖಲಾತಿ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡುವ ಕುರಿತಂತೆ ಕ್ರಮ ಕೈಗೊಳ್ಳಿ ಎಂದರು.
ಜಿಲ್ಲೆಯ ಕೋವಿಡ್ ಪರಿಸ್ಥಿತಿಯ ಕುರಿತು ಪ್ರತೀ ದಿನ ವರದಿ ನೀಡಬೇಕು, ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಸಂಪರ್ಕಿಸುವAತೆ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.
► ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಲಭ್ಯತೆ ಕುರಿತು ಇಲ್ಲಿದೆ ಮಾಹಿತಿ – https://kundapraa.com/?p=47896 .
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆಯಲ್ಲಿ ಬೆಡ್ ಗಳ ಕೊರತೆಯಾಗದಂತೆ ಪರಿಶೀಲಿಸಲು ಖಾಸಗಿ ಆಸ್ಪತ್ರೆವಾರು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಸಿಎಸ್ಆರ್ ನಿಧಿಯಡಿ ಮತ್ತೊಂದು ಆಕ್ಸಿಜಿನ್ ಪ್ಲಾಂಟ್ ಅಳವಡಿಸಲು ಹಾಗೂ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ಸುನೀಲ್ ಕುಮಾರ್, ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವಪ್ರಭು, ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.