ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಕೆಲವು ದಿನಗಳಿಂದ ಕುಂದಾಪುರ ತಾಲೂಕಿನಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡುತಿದ್ದು, ಕಳೆದ ವರ್ಷದಂತೆ ಸೋಂಕು ಹರಡುವಿಕೆ ತಡೆಯುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾದಂತೆ ಕಾಣುತ್ತಿದೆ. ಜನತಾ ಕರ್ಫ್ಯೂ ಕಾರಣದಿಂದ ಬೇರೆಡೆ ವ್ಯವಹಾರ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಜನರು ಊರಿಗೆ ಆಗಮಿಸಿದ್ದು ಅವರಿಗೆ ಮನೆಗಳಲ್ಲಿ ಹೋಂ ಐಸೋಲೇಶನ್ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಮತ್ತು ಪ್ರಾಥಮಿಕ ಸಂಪರ್ಕದಲ್ಲಿರುವವರು ಬೇಕಾಬಿಟ್ಟಿ ತಿರುಗಾಡುತ್ತಿರುವುದು ಸೋಂಕು ಹೆಚ್ಚಲು ಕಾರಣವಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಹೋಂ ಐಸೋಲೇಶನ್ಗೆ ಸರಿಯಾದ ವ್ಯವಸ್ಥೆ ಇಲ್ಲದವರಿಗೆ ಮತ್ತು ಆಸ್ಪತ್ರೆಗೆ ಸೇರಬೇಕಾದ ಅಗತ್ಯವಿಲ್ಲದವರಿಗೆ ಶೀಘ್ರವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಪಿಡ್ ಟೆಸ್ಟ್ ಕಿಟ್ ಹೆಚ್ಚಿಸುವುದು, ಗ್ರಾಮೀಣ ಪ್ರದೇಶಕ್ಕೆ ಹೆಚ್ಚುವರಿ ಅಂಬುಲೆನ್ಸ್ ಸೇವೆ ಒದಗಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಹೆಚ್ಚು ಪರೀಕ್ಷೆ ನಡೆಸುವುದು, ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆ ಬಲಪಡಿಸುವುದು, ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದು, ಆಸ್ಪತ್ರೆಯಲ್ಲಿ ಕೊರತೆಯಿರುವ ತಾಂತ್ರಿಕರು, ನರ್ಸ್ ಗಳು ಮತ್ತು ಡಿ ದರ್ಜೆ ನೌಕರರನ್ನು ನೇಮಿಸಿಕೊಳ್ಳುವುದು, ಕುಂದಾಪುರದಲ್ಲಿ ಹೆಚ್ಚುವರಿ ಕೋವಿಡ್ ಟೆಸ್ಟ್ ಸೆಂಟರ್ ಆರಂಭಿಸುವುದು ಸೇರಿದಂತೆ ವಿವಿಧ ತುರ್ತು ಅಗತ್ಯತೆಯನ್ನು ಪರಿಶೀಲಿಸಿ ಕ್ರಮವಹಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ
► ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಲಭ್ಯತೆ ಕುರಿತು ಇಲ್ಲಿದೆ ಮಾಹಿತಿ – https://kundapraa.com/?p=47896 .